ಶನಿವಾರ, ಮೇ 28, 2022
30 °C
ಕಲಾಪ

ನಗರದಲ್ಲಿ ಟ್ಯಾಗೋರರ ಚಿತ್ರಕಲೆ

ಅನಿತಾ ಎಚ್. Updated:

ಅಕ್ಷರ ಗಾತ್ರ : | |

ಜೀವಿತಾವಧಿಯಲ್ಲಿ ದಂತಕಥೆಯಾಗಿದ್ದ ರವೀಂದ್ರನಾಥ ಟ್ಯಾಗೋರರು ಕವಿ, ಕಲಾವಿದ, ತತ್ವಶಾಸ್ತ್ರಜ್ಞರಾಗಿ ಮಾಡಿರುವ ಸಾಧನೆ ಅದ್ವಿತೀಯ. ಸಂಗೀತ, ಸಾಹಿತ್ಯ, ಕಲೆ, ವಿದ್ಯಾರ್ಜನೆ ಮುಂತಾದ ರಂಗಗಳಿಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು, ಇಂದಿಗೂ ಪ್ರಸ್ತುತವಾಗಿದೆ.ಟ್ಯಾಗೋರರ 150ನೇ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ, ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಪ್ರೊ.ಆರ್.ಶಿವಕುಮಾರ್ ಸಂಗ್ರಹಿಸಿರುವ `ದಿ ಲಾಸ್ಟ್ ಹಾರ್ವೆಸ್ಟ್' ರವೀಂದ್ರನಾಥ ಟ್ಯಾಗೋರರ ಚಿತ್ರಕಲಾ ಸಂಗ್ರಹಗಳ ಪ್ರದರ್ಶನವನ್ನು ಜುಲೈ 31ರವರೆಗೆ ಇಲ್ಲಿನ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದಲ್ಲಿ ಹಮ್ಮಿಕೊಂಡಿರುವುದು ಚಿತ್ರಕಲಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಟ್ಯಾಗೋರರು ರಚಿಸಿರುವ ಚಿತ್ರಕಲೆಗಳ ಸಾರಕ್ಕೆ ಅನುಗುಣವಾಗಿ ಪ್ರದರ್ಶನವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಟ್ಯಾಗೋರರ ಅತ್ಯಂತ ಆರಂಭಿಕ ಹಂತದ ಚಿತ್ರಗಳನ್ನು ಕಾಣಬಹುದು.ಬಾಲ್ಯದಿಂದಲೂ ಪ್ರಕೃತಿಯನ್ನೇ ತಮ್ಮ ಸಂಗಾತಿಯಾಗಿಸಿಕೊಂಡಿದ್ದ ಟ್ಯಾಗೋರರ ನಿಸರ್ಗ ಮತ್ತು ಹೂವುಗಳ ಕುರಿತಾದ ಚಿತ್ರಗಳನ್ನು ಎರಡನೇ ವಿಭಾಗದಲ್ಲಿ ಪ್ರದರ್ಶಿಸಲಾಗಿದೆ. ಮೂರು ಮತ್ತು ನಾಲ್ಕನೇ ವಿಭಾಗಗಳಲ್ಲಿ ಟ್ಯಾಗೋರರ ಮಾನವ ಮುಖಗಳ ಚಿತ್ರಗಳಿದ್ದು, ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಪ್ರಭಾವಗಳನ್ನು ಕಾಣಬಹುದಾಗಿದೆ.ಕಲಾ ಪ್ರದರ್ಶನಕ್ಕೆ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವ್ ಸಿಂಗ್ ಅವರು ಶನಿವಾರ ಚಾಲನೆ ನೀಡಿದರು. 

`ಜನಸಾಮಾನ್ಯರಿಗೆ ಕವಿ ಎಂದು ಚಿರಪರಿಚಿತವಾಗಿದ್ದ ಟ್ಯಾಗೋರರು, ಚಿತ್ರಗಳ ರಚನೆ ಮೂಲಕ ಅದ್ಭುತ ಚಿತ್ರಕಲಾವಿದನೂ ಹೌದು ಎಂಬುದನ್ನು ತಿಳಿಸಿದ್ದಾರೆ. ಅವರು ರಚಿಸಿರುವ ಚಿತ್ರಗಳು ಮಹತ್ತರವಾಗಿದ್ದು, ಇಂತಹ ಅಪ್ಪಟ ಕಲಾವಿದ ಇಂದು ಕಾಣಸಿಗುವುದಿಲ್ಲ. ಟ್ಯಾಗೋರರು ಭಾರತದ ಲಿಯೋನಾರ್ಡ್ ಡಾವಿಂಚಿ (ಪ್ರಖ್ಯಾತ ಚಿತ್ರ ಕಲಾವಿದ) ಎಂದರೆ ತಪ್ಪಾಗಲಾರದು' ಎಂದು ಕಲಾವಿದ ಚಿಂತಾಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.`ಟ್ಯಾಗೋರರು ಚಿತ್ರ ರಚನೆಗಾಗಿ ಎಂದೂ ವಿಷಯದ ಹಿಂದೆ ಹೋದವರಲ್ಲ. ಪರಿಸರ, ಪ್ರಾಣಿ, ಪಕ್ಷಿ... ಪ್ರತಿಯೊಂದನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ ಅವರು ತಮ್ಮ ಭಾವನೆಗಳನ್ನು, ಮನುಷ್ಯನ ವಿವಿಧ ಭಂಗಿಗಳನ್ನು ಇಂಡಿಯನ್ ಇಂಕ್‌ನಲ್ಲಿ (ಶಾಯಿ), ಚಿತ್ರಕಲಾಕೃತಿಗಳಲ್ಲಿ ಅದ್ಭುತವಾಗಿ ಮೂಡಿಸಿದ್ದಾರೆ. ಕಲಾವಿದರು ಮಾತ್ರವಲ್ಲ, ಜ್ಞಾನಾರ್ಜನೆಗಾಗಿ ಪ್ರತಿಯೊಬ್ಬರೂ ವೀಕ್ಷಿಸಬಹುದಾದ ಕಲಾ ಪ್ರದರ್ಶನವಿದು' ಎಂದು ಅನಿಸಿಕೆ ವ್ಯಕ್ತಪಡಿಸಿದರು.ಮತ್ತೋರ್ವ ಕಲಾವಿದ ಕೃಷ್ಣಪ್ರಸಾದ್ ಮಾತನಾಡಿ, `ಟ್ಯಾಗೋರರು ರಚಿಸಿದ್ದ ಚಿತ್ರಕಲಾಕೃತಿಗಳನ್ನು ನೋಡುವ ಭಾಗ್ಯ ಇಲ್ಲಿವರೆಗೆ ದೊರೆತಿರಲಿಲ್ಲ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಚಿತ್ರಕಲಾಕೃತಿಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರುವ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯಕ್ಕೂ, ಸಂಸ್ಕೃತಿ ಸಚಿವಾಲಯಕ್ಕೂ ಧನ್ಯವಾದ. ವೀಕ್ಷಕರ ಕಣ್ಣಿಗೆ ಹಿತಕರ ಅನುಭವ ನೀಡುವ ಚಿತ್ರಕಲಾಕೃತಿಗಳನ್ನು ಬೆಂಗಳೂರಿನವರು ಮಾತ್ರವಲ್ಲ, ರಾಜ್ಯದ ಇತರೆ ಭಾಗದವರೂ ವೀಕ್ಷಿಸಬೇಕು' ಎಂದು ಅಭಿಪ್ರಾಯಪಟ್ಟರು.ಹೆಚ್ಚಿನ ಮಾಹಿತಿಗೆ: ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ, ಬೆಂಗಳೂರು, ದೂರವಾಣಿ: 080-22342338, 22201027ಟ್ಯಾಗೋರರ ಚಿತ್ರಕಲೆಗಳು ವಿಶ್ವಮಾನವ ಸಂದೇಶ ಹೊಂದಿವೆ. ವೈಯುಕ್ತಿಕ ತುಡಿತದ ಪರಿಣಾಮಗಳಂತೆ ಸಾರ್ವತ್ರಿಕ ಪ್ರಭಾವವನ್ನೂ ಹೊಂದಿವೆ. ಯಾವುದೇ ಭಾಷೆ, ಭೌಗೋಳಿಕ ಬಂಧವಿಲ್ಲದೆ ಚಿತ್ರಕಲಾಕೃತಿಗಳು ಸಾರ್ವತ್ರಿಕವಾಗಬೇಕು ಎಂಬ ಇಚ್ಛೆಗೆ ಅನುಸಾರವಾಗಿ ಟ್ಯಾಗೋರರು ಚಿತ್ರಕಲಾಕೃತಿಗಳಿಗೆ ಶೀರ್ಷಿಕೆ ನೀಡುತ್ತಿರಲಿಲ್ಲ. ಈ ಕಲಾಕೃತಿಗಳು ವೀಕ್ಷಕನನ್ನು ಒಬ್ಬ ಕ್ಯುರೇಟರ್‌ನ ಜವಾಬ್ದಾರಿಯಿಂದ ಪ್ರದರ್ಶನ ವೀಕ್ಷಿಸಲು ಪ್ರೇರೇಪಿಸುತ್ತದೆ.

-ಪ್ರೊ.ಆರ್.ಶಿವಕುಮಾರ್, ಪ್ರದರ್ಶನದ ಕ್ಯುರೇಟರ್ರವೀಂದ್ರನಾಥ ಟ್ಯಾಗೋರರ 150ನೇ ಜನ್ಮಶತಮಾನೋತ್ಸವ ಆಚರಿಸುವ ಉದ್ದೇಶದಿಂದ ಭಾರತ ಸರ್ಕಾರ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಮಿತಿ ರಚಿಸಿದೆ. ಅದರಂತೆ 2011ರಿಂದ 12ರವರೆಗೆ ಜಗತ್ತಿನಾದ್ಯಂತ ಚಿತ್ರಕಲಾ ಪ್ರದರ್ಶನ ನಡೆಸಲಾಗಿದೆ. ಇದೀಗ ಇಲ್ಲಿಯೂ ಜುಲೈ 31ರವರೆಗೆ ಪ್ರೊ.ಆರ್.ಶಿವಕುಮಾರ್ ಸಂಪಾದಿಸಿರುವ `ದಿ ಲಾಸ್ಟ್ ಹಾರ್ವೆಸ್ಟ್' ರವೀಂದ್ರನಾಥ ಟ್ಯಾಗೋರರ ಚಿತ್ರಕಲಾಕೃತಿಗಳ ಪ್ರದರ್ಶನ ನಡೆಯಲಿದೆ.ಪ್ರಸ್ತುತ ಪ್ರದರ್ಶನ ಭಾರತಕ್ಕೆ ಹಿಂದಿರುಗುವುದಕ್ಕೂ ಮುನ್ನ ಬರ್ಲಿನ್, ನ್ಯೂಯಾರ್ಕ್, ಕೊರಿಯಾ, ಲಂಡನ್, ಚಿಕಾಗೋ, ಪ್ಯಾರಿಸ್, ರೋಮ್, ಕೌಲಲಾಂಪುರ ಮತ್ತು ಕೆನಡಾ ದೇಶಗಳಲ್ಲಿ ಪ್ರದರ್ಶನ ಕಂಡಿದೆ. ಈ ಕೃತಿಗಳು ಮನುಷ್ಯನ ಸಂಕೀರ್ಣ ಮತ್ತು ಅಭೂತಪೂರ್ವ ಆಂತರಿಕ ಪಯಣವನ್ನು ಟ್ಯಾಗೋರರ ಚಿತ್ರಕಲೆ ಹಾಗೂ ರೇಖಾಚಿತ್ರಗಳು ಅನಾವರಣಗೊಳಿಸುತ್ತವೆ. ಭಾವನಾತ್ಮಕ ಜಗತ್ತಿನ ಪರಿಚಯವೂ ಆಗಲಿದೆ ಎಂದರು.ಸುಮಾರು 75ರಿಂದ 80 ವರ್ಷಗಳ ಹಿಂದೆ ರಚಿಸಲಾದ ಈ ಕಲಾಕೃತಿಗಳಲ್ಲಿ ಕಲಾತೀತವಾದ ಗುಣಲಕ್ಷಣಗಳಿವೆ. ಟ್ಯಾಗೋರರ ಕಲಾಕೃತಿಗಳು ಇಂದಿಗೂ ಹೊಸ ತಲೆಮಾರಿನವರಿಗೂ ವಿಭಿನ್ನ ಸಂವಹನಕ್ಕೆ ದಾರಿ ಮಾಡಿಕೊಡಲಿದೆ.

ಕೆ.ಜಿ.ಕುಮಾರ್, ನಿರ್ದೇಶಕ, ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.