ಶುಕ್ರವಾರ, ಮೇ 7, 2021
26 °C

ನಗರದಲ್ಲಿ ಡಿಸ್ನಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಸ್ನಿ, ಕಾರ್ಟೂನ್ ನೆಟ್‌ವರ್ಕ್, ಪೋಗೊ, ಚಿಂಟು ಇತ್ಯಾದಿ ವಾಹಿನಿಗಳನ್ನು ಮಕ್ಕಳು ದಿನವಿಡೀ ಎಡೆಬಿಡದೆ ವೀಕ್ಷಿಸಿದರೂ ಅವರಿಗೆ ಸಾಕು ಅನಿಸುವುದಿಲ್ಲ. ಇದಕ್ಕೆ ಕಾರಣ ಈ ವಾಹಿನಿಗಳಲ್ಲಿ ಮಕ್ಕಳಿಗೆ ಸಿಗುವ ಅವರ ವಯೋಮಾನಕ್ಕೆ ತಕ್ಕುದಾದ ಭರ್ಜರಿ ಮನರಂಜನೆ. ಕಾರ್ಯಕ್ರಮ ವೀಕ್ಷಿಸುತ್ತಾ ಹೋದಂತೆ ತಾವೇ ಪಾತ್ರಗಳಾಗಿಬಿಡುವ ಮಕ್ಕಳು ಅವುಗಳ ಒಂದೊಂದು ಚಲನೆಯನ್ನೂ ಪಾತ್ರದೊಳಹೊಕ್ಕು ಅನುಭವಿಸುತ್ತಾರೆ.ಇಂತಹ ವಾಹಿನಿಗಳ ಪೈಕಿ `ಡಿಸ್ನಿ'ಯಷ್ಟು ಜನಾಕರ್ಷಣೆಯನ್ನು ಉಳಿಸಿಕೊಂಡ ವಾಹಿನಿ ಮತ್ತೊಂದಿಲ್ಲವೇನೋ ಎನ್ನುವಂತೆ ತನ್ನ ಛಾಪು ಉಳಿಸಿಕೊಂಡಿದೆ. ಬೇರೆಲ್ಲೂ ಸಿಗದೇ ಇರುವ ಕಥಾವಸ್ತುಗಳು, ಕಾಲ್ಪನಿಕ ಪಾತ್ರಗಳು ಮತ್ತು ನಿರೂಪಣಾ ಶೈಲಿ, ಒಟ್ಟು ಕಥೆಯನ್ನು ಕಟ್ಟಿಕೊಡುವ ರೀತಿಯೇ ತಮ್ಮ ವಾಹಿನಿ ಈ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವಂತೆ ಮಾಡಿರುವ ಅಂಶ ಎಂದು, ಡಿಸ್ನಿ ಯುಟಿವಿಯ ವ್ಯವಸ್ಥಾಪಕ ನಿರ್ದೇಶಕಿ (ಲೈಸೆನ್ಸಿಂಗ್ ಅಂಡ್ ರಿಟೇಲ್) ರೋಶಿನಿ ಬಕ್ಷಿ ಅಭಿಪ್ರಾಯಪಟ್ಟಿದ್ದಾರೆ. ಇದೀಗ ವಾಹಿನಿಯ ಕಾರ್ಯಕ್ರಮಗಳಿಗೆ ಇನ್ನಷ್ಟು ಪ್ರಚಾರ ಒದಗಿಸುವ ಉದ್ದೇಶದಿಂದ ಡಿಸ್ನಿಯ ಪ್ರಮುಖ ಪಾತ್ರಧಾರಿಗಳಾದ ಮಿಕ್ಕಿ, ಮಿನ್ನಿ ಮತ್ತು ತಂಡದವರು ದೇಶದೆಲ್ಲೆಡೆ ಪ್ರವಾಸ ಕೈಗೊಂಡು ಎಲ್ಲಾ ವಯೋಮಾನದ ವೀಕ್ಷಕರನ್ನು ರಂಜಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ ರೋಶಿನಿ ಡಿಸ್ನಿ ಮ್ಯಾಜಿಕ್ ಬಗ್ಗೆ ಹೇಳಿರುವುದು ಹೀಗೆ: `1928ರಿಂದಲೂ ತನ್ನ ಆಧಿಪತ್ಯವನ್ನು ಉಳಿಸಿಕೊಂಡಿರುವ ಮಿಕ್ಕಿ ಮತ್ತು ತಂಡ ಮುಂದಿನ ತಲೆಮಾರುಗಳ ಮಕ್ಕಳು ಮತ್ತು ಕುಟುಂಬದವರಿಗೂ ಡಿಸ್ನಿಯೇ ಮನರಂಜನೆಗೆ ಮೊದಲ ಆಯ್ಕೆಯಾಗಬೇಕು. ಇದಕ್ಕಾಗಿ ಈ ಹಿಂದಿನಂತೆಯೇ ಇನ್ನೂ ವಿಶಿಷ್ಟ ಕತೆಗಳು, ಅದ್ಭುತವಾದ ಪಾತ್ರಗಳು ಮತ್ತು ಮಾಯಕ ಅನುಭವವನ್ನು ಕಟ್ಟಿಕೊಡುವಂತಹ ಕಾರ್ಯಕ್ರಮಗಳನ್ನು ನೀಡುತ್ತೇವೆ. ನಾವು ಹಳಸಲು ಕತೆಯನ್ನು ಎಂದೂ ನೀಡಿಲ್ಲ. ವೀಕ್ಷಕರಿಗೆ ದೀರ್ಘಕಾಲ ನೆನಪಿನಲ್ಲಿ ಉಳಿಯಬಹುದಾದ ಕಾರ್ಯಕ್ರಮಗಳನ್ನೇ ಇನ್ನೂ ನೀಡುತ್ತೇವೆ. ಮಿಕ್ಕಿ ಮತ್ತು ತಂಡ ಎಲ್ಲಾ ವೀಕ್ಷಕರಿಗೆ ಅಚ್ಚುಮೆಚ್ಚು. ಹೀಗಾಗಿ ಅವರನ್ನು ಮುಖತಾ ಕಂಡು ಅವರೊಂದಿಗೆ ಕುಣಿದಾಡಿ ಮನರಂಜನೆ ಪಡೆಯಲಿ ಎಂಬ ಉದ್ದೇಶದಿಂದ ಈ ಪ್ರವಾಸಗಳನ್ನು ಆಯೋಜಿಸಿದ್ದೇವೆ' ಎಂದು.ಮಿಕ್ಕಿ ಜಗತ್ತಿನೆಲ್ಲೆಡೆ ಜನರ ಮನ ಗೆದ್ದ ಪಾತ್ರ. ಜಗತ್ತಿನಾದ್ಯಂತ ಶೇ 98 ಮಂದಿ ಹಾಗೂ ಭಾರತದಲ್ಲಿ ಶೇ 86ರಷ್ಟು ಮಂದಿ ಮಿಕ್ಕಿಯ ಅಭಿಮಾನಿಗಳು. ಮಾತ್ರವಲ್ಲ ಇತರ ಯಾವುದೇ ಕಾರ್ಟೂನ್ ಪಾತ್ರಧಾರಿಗಳನ್ನೂ ಮೀರಿ ನಿಂತು ನಂಬರ್ ಒನ್ ಸ್ಥಾನದಲ್ಲಿ ಮಿಕ್ಕಿ ನಿಂತಿರುವುದು ಅವನ ಜನಪ್ರಿಯತೆಗೆ ಸಾಕ್ಷಿ ಎಂದೂ ಅವರು ಹೇಳಿದ್ದಾರೆ.ಅಂದಹಾಗೆ, ಮಿಕ್ಕಿ ಮತ್ತು ತಂಡ ಜೂ.8ರ ಶನಿವಾರ ಕೋರಮಂಗಲದ ಫೋರಂ ವ್ಯಾಲ್ಯೂ ಮಾಲ್‌ಗೆ ಆಗಮಿಸಲಿದ್ದು, ಬಾಲಿವುಡ್‌ನ ಆಯ್ದ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ.ಈ ಸಂದರ್ಭ ಸಾರ್ವಜನಿಕರಿಗೆ ಮಿಕ್ಕಿ ತಂಡದೊಂದಿಗೆ ಮೋಜು ಮಾಡಲು ಅವಕಾಶವಿದೆ. ಸಮಯ: ಮಧ್ಯಾಹ್ನ 1.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.