ಮಂಗಳವಾರ, ಮೇ 18, 2021
24 °C

ನಗರದಲ್ಲಿ ಪೌರಸೇವಾ ನೌಕರರ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತಮಟೆ, ಡೊಳ್ಳು, ನಗಾರಿ ಸದ್ದಿನ ನಡುವೆ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಸಾವಿರಾರು ಪೌರನೌಕರರು, ಕಾರ್ಮಿಕರು ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಯಲ್ಲಿ ಹೆಜ್ಜೆ ಹಾಕಿದರು.ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಭಾನುವಾರ ಎನ್‌ಡಿವಿ ಹಾಸ್ಟೆಲ್ ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಸಮ್ಮೇಳನ ಹಾಗೂ ಪೌರ ಕಾರ್ಮಿಕರ ದಿನಾಚರಣೆಗೂ ಮುನ್ನ ಸೈನ್ಸ್ ಮೈದಾನ ಆವರಣದಿಂದ ಈ ಅದ್ದೂರಿ ಮೆರವಣಿಗೆ ಏರ್ಪಡಿಸಲಾಗಿತ್ತು.ಮಧ್ಯಾಹ್ನದ ಬಿಸಿಲಿನ ಝಳದ ನಡುವೆಯೂ ಹೆಜ್ಜೆ ಹಾಕಿದ ಯುವಕರು, ಮಹಿಳೆಯರು ಹಾಗೂ ನಿವೃತ್ತಿ ಅಂಚಿನ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವ ಘೋಷಣೆ ಕೂಗುತ್ತಾ ಸಾಗಿದರು.ಮೆರವಣಿಗೆಯಲ್ಲಿ ರಾಜ್ಯ ಸಂಘದ ಅಧ್ಯಕ್ಷ ಟಿ.ಆರ್. ಸತ್ಯಾನಾರಾಯಣ, ಕಾರ್ಯಾಧ್ಯಕ್ಷ ಎಂ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಜಿ. ಗಂಗರಾಜು, ಪದಾಧಿಕಾರಿಗಳಾದ ಡಿ. ರಾಮಯ್ಯ, ಎನ್. ಗೋವಿಂದ ಹಾಗೂ ವಿವಿಧ ತಾಲ್ಲೂಕಿನ ಪದಾಧಿಕಾರಿಗಳು ಹಾಜರಿದ್ದರು.ಹೊರ ಊರುಗಳಿಂದ ಬಸ್, ಟ್ರಾಕ್ಸ್, ಕಾರು, ಮ್ಯಾಕ್ಸಿಕ್ಯಾಬ್ ಇನ್ನಿತರೆ ವಾಹನದಲ್ಲಿ ಆಗಮಿಸಿದ್ದ ನೌಕರರಿಗೆ ಸೈನ್ಸ್ ಮೈದಾನದ ಎದುರಿನ ಶಾಲಾ ಆವರಣದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಮೆರವಣಿಗೆ ಸಾಗುತ್ತಿದ್ದ ಹಾದಿಯಲ್ಲಿ ಬೇರೆ ಊರುಗಳಿಂದ ಆಗಮಿಸಿದ ನೌಕರರು ಸೇರ್ಪಡೆಯಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಪೌರ ನೌಕರರ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಮಾಡಿತ್ತು.ವಾಹನ ದಟ್ಟಣೆ ಇರುವ ಬಿ.ಎಚ್ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.