ಗುರುವಾರ , ಮೇ 26, 2022
23 °C

ನಗರದಲ್ಲಿ ಸಂಚಾರ ಪೊಲೀಸರಿಂದ ಹಣ ವಸೂಲಿ: ಎಸ್‌ಐ, ಕಾನ್‌ಸ್ಟೇಬಲ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿವಿಧೆಡೆ ಸಂಚಾರ ಪೊಲೀಸರ ಕಾರ್ಯನಿರ್ವಹಣಾ ಸ್ಥಳಗಳಲ್ಲಿ ಬುಧವಾರ ಸಂಜೆ ದಿಢೀರ್ ತಪಾಸಣೆ ನಡೆಸಿದ ಲೋಕಾಯುಕ್ತ ಪೊಲೀಸರು, ವಾಹನ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಶಿವಣ್ಣ ಮತ್ತು ಕಾನ್‌ಸ್ಟೇಬಲ್ ಅನ್ವರ್ ಷೇಖ್ ಅವರನ್ನು ಬಂಧಿಸಿದ್ದಾರೆ.

ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿಗಳಾದ ಎಚ್.ಎಸ್.ಮಂಜುನಾಥ್, ಎಸ್.ಗಿರೀಶ್, ಅಬ್ದುಲ್ ಅಹದ್, ಪ್ರಸನ್ನ ವಿ.ರಾಜು ಮತ್ತು ಡಿ.ಫಾಲಾಕ್ಷಯ್ಯ ನೇತೃತ್ವದ ಐದು ತನಿಖಾ ತಂಡಗಳು ಪಾಲ್ಗೊಂಡಿದ್ದವು. ನಗರದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಪೊಲೀಸ್ ವಿಭಾಗಗಳ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ತಪಾಸಣೆ ನಡೆಯಿತು.

ರಾಜಾಜಿನಗರದ ಬ್ರಿಗೇಡ್ ಗೇಟ್‌ವೇ ಬಳಿ ತೆರಳಿದ ಡಿವೈಎಸ್‌ಪಿ ಗಿರೀಶ್ ನೇತೃತ್ವದ ತಂಡ ಕೆಲಕಾಲ ದೂರದಲ್ಲಿ ನಿಂತು ಅವಲೋಕನ ನಡೆಸಿತು. ಅಲ್ಲಿದ್ದ ಎಸ್‌ಐ ಶಿವಣ್ಣ ಮತ್ತು ಕಾನ್‌ಸ್ಟೇಬಲ್ ವಾಹನ ಚಾಲಕರಿಂದ ಹಣ ಪಡೆಯುತ್ತಿರುವುದು ಕಂಡುಬಂತು. ದಂಡ ವಸೂಲಿಯ ರಸೀದಿ ನೀಡದೇ ಪುಸ್ತಕ ಒಂದರಲ್ಲಿ ಬರೆದುಕೊಂಡು ಹಣ ಪಡೆಯುತ್ತಿದ್ದರು. ಬಳಿಕ ಇಬ್ಬರನ್ನೂ ವಶಕ್ಕೆ ಪಡೆದ ತನಿಖಾ ತಂಡ ತಪಾಸಣೆ ನಡೆಸಿತು.

ನಿಯಮಗಳ ಪ್ರಕಾರ ರಸೀದಿ ನೀಡಿ, ದಂಡ ವಸೂಲಿ ಮಾಡಿದ್ದ ಮೊತ್ತವನ್ನು ಪ್ರತ್ಯೇಕವಾಗಿ ಶಿವಣ್ಣ ಇರಿಸಿಕೊಂಡಿದ್ದರು. ಉಳಿದಂತೆ ಎಸ್‌ಐ ಬಳಿ 23,000 ರೂಪಾಯಿ ಮತ್ತು ಕಾನ್‌ಸ್ಟೇಬಲ್ ಬಳಿ 12,650 ರೂಪಾಯಿ ಹೆಚ್ಚುವರಿ ಹಣ ಪತ್ತೆಯಾಗಿದೆ. ಈ ಮೊತ್ತದ ಕುರಿತು ಇಬ್ಬರೂ ಸಮಂಜಸವಾದ ಉತ್ತರ ನೀಡಿಲ್ಲ. ಆರೋಪಿಗಳು ಅಕ್ರಮವಾಗಿ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವುದು ಮೇಲ್ನೋಟಕ್ಕೆ ದೃಢಪಟ್ಟ ಬಳಿಕ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ಶಿವಶಂಕರ್ ತಿಳಿಸಿದರು.

ಆರೋಪಿಗಳ ಬಳಿ ಒಂದು ಪುಸ್ತಕ ಲಭ್ಯವಾಗಿದೆ. ಅದರಲ್ಲಿ ನಿರಂತರವಾಗಿ ಆ ಮಾರ್ಗದಲ್ಲಿ ಸಂಚರಿಸುವ ಸರಕು ಸಾಗಣೆ ವಾಹನಗಳ ವಿವರ ಇದೆ. ಪ್ರತಿ ತಿಂಗಳು ಲಾರಿ ಚಾಲಕರಿಂದ ಹಣ ವಸೂಲಿ ಮಾಡಿರುವ ಮಾಹಿತಿಯೂ ಅದರಲ್ಲಿ ಇದೆ. ಎಸ್‌ಐ ಮತ್ತು ಕಾನ್‌ಸ್ಟೇಬಲ್ ಹಣ ವಸೂಲಿಯಲ್ಲಿ ನಿರತವಾಗಿದ್ದರು ಎಂಬುದಕ್ಕೆ ಈ ಪುಸ್ತಕ ಪ್ರಬಲ ಸಾಕ್ಷ್ಯ ಒದಗಿಸಿದೆ. ಇನ್‌ಸ್ಪೆಕ್ಟರ್ ವಿಚಾರಣೆ: ಎನ್.ಆರ್.ಕಾಲೋನಿಯಲ್ಲಿ ಕರ್ತವ್ಯ ನಿರತರಾಗಿದ್ದ ಬನಶಂಕರಿ ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಧರಣೇಶ್ ವಾಹನದಲ್ಲಿ 25,000 ರೂಪಾಯಿ ಪತ್ತೆಯಾಗಿದೆ. ಅದು ತಮ್ಮ ವೈಯಕ್ತಿಕ ಹಣ. ಸಂಬಂಧಿಕರೊಬ್ಬರು ಬೇರೊಬ್ಬರಿಗೆ ತಲುಪಿಸಲು ಈ ಹಣ ನೀಡಿದ್ದರು ಎಂದು ಇನ್‌ಸ್ಪೆಕ್ಟರ್ ವಿಚಾರಣೆ ವೇಳೆ ಹೇಳಿದ್ದಾರೆ.

ಧರಣೇಶ್, ಅವರ ವಾಹನ ಚಾಲಕ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳ ವಿಚಾರಣೆ ನಡೆಸಿದ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ಹಾಗೂ ತಂಡ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅನಧಿಕೃತವಾಗಿ ಹಣ ಇರಿಸಿಕೊಂಡಿದ್ದ ಆರೋಪ ಕುರಿತು ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಶಿಫಾರಸು ಮಾಡಲು ತನಿಖಾ ತಂಡ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಬ್ಯಾಟರಾಯನಪುರ, ಕೆಂಗೇರಿ, ಕೃಷ್ಣರಾಜಪುರ ಸೇರಿದಂತೆ ಹಲವೆಡೆ ತಪಾಸಣೆ ನಡೆಸಲಾಗಿದೆ. ಹೆಚ್ಚಿನ ವ್ಯತ್ಯಾಸಗಳೇನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.