ಸೋಮವಾರ, ಜೂಲೈ 13, 2020
25 °C

ನಗರವಾಸಿ ಚಿಣ್ಣರನ್ನೂ ಕಾಡುವ ಅಪೌಷ್ಟಿಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರವಾಸಿ ಚಿಣ್ಣರನ್ನೂ ಕಾಡುವ ಅಪೌಷ್ಟಿಕತೆ

ರಾಗಿಣಿಯ 12 ವರ್ಷದ ಮಗ ಅಜಯ್, ಬಹಳ ದಿನಗಳಿಂದ ತನಗೆ ಹೆಚ್ಚು ಆಯಾಸ ಆಗುತ್ತದೆ ಎಂದು ದೂರುತ್ತಲೇ ಇದ್ದ. ಹಲವಾರು ಕಾರಣಗಳಿಂದ ರಾಗಿಣಿ ಇದನ್ನು ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. ಆರೋಗ್ಯದ ವಿಷಯದಲ್ಲಿ ತನ್ನ ಕುಟುಂಬದ ಸದಸ್ಯರೆಲ್ಲ ಚೆನ್ನಾಗಿಯೇ ಇರುವರೆಂದೇ ಆಕೆ ಭಾವಿಸಿದ್ದರು. ಆದರೆ, ತನಗೆ ದಣಿವಾಗುತ್ತಿದೆ ಎಂದು ಅಜಯ್ ಪದೇ ಪದೇ ದೂರುತ್ತಲೇ ಇದ್ದಾಗ ಆಕೆಯ ನಂಬಿಕೆಗೆ ಸಂಪೂರ್ಣವಾಗಿ ವಿರುದ್ಧವಾದ ಸಂಗತಿಯೊಂದು ಬೆಳಕಿಗೆ ಬಂದಿತ್ತು. ‘ಮಗನನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋದಾಗ ಅಜಯ್, ಸೂಕ್ಷ್ಮಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಪೋಷಕಾಂಶಗಳ ಕೊರತೆಯು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಬಡವರಲ್ಲಿ ಮಾತ್ರ ಕಂಡು ಬರುತ್ತದೆ ಎಂದೇ ಅವರು ನಂಬಿದ್ದರು. ಮೂಲತಃ ಇಂತಹ ಆಲೋಚನೆಯೇ ತಪ್ಪು. ಸೂಕ್ಷ್ಮ ಪೋಷಕಾಂಶಗಳ ಕೊರತೆಯು ನಗರವಾಸಿಗಳಲ್ಲಿಯೂ ಇರುವುದು ಸುಳ್ಳಲ್ಲ ಎಂದು ನವದೆಹಲಿಯ ಬಾತ್ರಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಮಕ್ಕಳ ತಜ್ಞರೂ ಆಗಿರುವ ಡಾ. ಸಂಜೀವ್ ಬಗಾಯ್ ಅಭಿಪ್ರಾಯಪಡುತ್ತಾರೆ. ನಗರ ಪ್ರದೇಶಗಳಲ್ಲಿನ ಶೇ 36ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.ಸಿರಿವಂತ ಶಾಲಾ ಮಕ್ಕಳ ಆರೋಗ್ಯ:

‘ಭಾರತದ ಸಿರಿವಂತ ಶಾಲಾ ಮಕ್ಕಳ ಪೋಷಕಾಂಶ ಪ್ರಮಾಣ - ನಮಗೆಷ್ಟು ಮಾಹಿತಿ ಗೊತ್ತು?’ ಕುರಿತ ಅಧ್ಯಯನವು ಕಠೋರ ಚಿತ್ರಣ ಬಯಲಿಗೆ ತಂದಿದೆ. 6ರಿಂದ 18 ವರ್ಷದೊಳಗಿನ, ಶಾಲೆಗಳಿಗೆ ತೆರಳುವ ನಗರವಾಸಿ ಮಕ್ಕಳ ಪೈಕಿ ಶೇ 88ರಷ್ಟು ಚಿಣ್ಣರು ರಕ್ತಹೀನತೆಯಿಂದ ಬಳಲುತ್ತಿರುವುದು ಮತ್ತು ಶೇ 29ರಷ್ಟು ಮಕ್ಕಳು ಅತಿಯಾದ ತೂಕದವರಾಗಿರುವುದನ್ನು ಈ ಅಧ್ಯಯನವು ಬಯಲಿಗೆ ತಂದಿದೆ. ಈ ಸಮೀಕ್ಷೆಯು, ಮಧ್ಯಮ ವರ್ಗದಿಂದ ಹಿಡಿದು ಶ್ರೀಮಂತ ಕುಟುಂಬದ ವರೆಗಿನ ಮಕ್ಕಳನ್ನು ಒಳಗೊಂಡಿತ್ತು.ಇತರ ದೇಶಗಳಲ್ಲಿ ನಡೆದ ಅಧ್ಯಯ ನಗಳ ಪ್ರಕಾರ, ಸ್ಥೂಲಕಾಯ ಅಥವಾ ಬೊಜ್ಜು ದೇಹದ ಮಕ್ಕಳಲ್ಲಿ ಸಾಮಾನ್ಯ ತೂಕದ ಮಕ್ಕಳಿಗಿಂತ ಪೋಷಕಾಂಶಗಳ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕಂಡು ಬಂದಿತ್ತು. ವಿಟಮಿನ್ ಡಿ, ಕ್ಯಾಲ್ಷಿಯಂ, ಮ್ಯಾಗ್ನೆಸಿಯಂ ಮತ್ತು ವಿಟಮಿನ್ ಇ ಮತ್ತಿತರ ಜೀವಸತ್ವಗಳ ಕೊರತೆ ಇರುವುದು ಅಧ್ಯಯನದಲ್ಲಿ ತಿಳಿದು ಬಂದಿತ್ತು.ಭಾರತದಲ್ಲಿ ಶಾಲೆಗೆ ಹೋಗುವ ಸಾಮಾನ್ಯ ತೂಕದ ಮಕ್ಕಳಲ್ಲಿಯೂ ಪೋಷಕಾಂಶಗಳ ಕೊರತೆ ಕಂಡು ಬರುತ್ತದೆ. ಇದಕ್ಕೆ ಈ ಮಕ್ಕಳು ಪೋಷಕಾಂಶ ಸಮೃದ್ಧವಾಗಿರುವ ಆಹಾರಕ್ಕಿಂತ ಪೋಷಕಾಂಶ ರಹಿತ ಆಹಾರ ಪದಾರ್ಥಗಳನ್ನು (ಫಾಸ್ಟ್ ಫುಡ್) ಹೆಚ್ಚಾಗಿ ಸೇವಿಸುವುದೇ ಮುಖ್ಯ ಕಾರಣ ಎಂದು ಫೋರ್ಟಿಸ್ ಆಸ್ಪತ್ರೆಯ ಮುಖ್ಯ ಆಹಾರ ಪಥ್ಯ ಸಲಹಾ ವೈದ್ಯೆ ಡಾ. ರೂಪಾಲಿ ದತ್ತಾ ಅವರು ಹೇಳುತ್ತಾರೆ.ದೇಶದ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಮಂದಿ ದಿನನಿತ್ಯ ದೇಹಕ್ಕೆ ಬೇಕಾಗುವ ಶೇ 50ರಷ್ಟು ಪೋಷಕಾಂಶಗಳ ಅಗತ್ಯವನ್ನೂ ಪೂರೈಸಿಕೊಳ್ಳುವುದಿಲ್ಲ ಎಂದೂ ಅವರು ಅಭಿಪ್ರಾಯಪಡುತ್ತಾರೆ.  ‘ಇಂಡಿಯನ್ ಜರ್ನಲ್ ಆಫ್ ಕಮ್ಯುನಿಟಿ ಮೆಡಿಸಿನ್’ ವರದಿಯನ್ನೇ ನಂಬಬಹುದಾದರೆ, ದೇಶದಾದ್ಯಂತ ಬಹುಸಂಖ್ಯಾತರಲ್ಲಿ ಕಂಡು ಬರುವ  ಪೋಷಕಾಂಶಗಳ ಕೊರತೆ ಕಾರಣ ಗಳಿಂದಾಗಿ ದೇಶಕ್ಕೆ ವರ್ಷಕ್ಕೆ  27,720 ಕೋಟಿ ನಷ್ಟ ಉಂಟಾಗುತ್ತಿದೆ.ಭಾರತದಲ್ಲಿ ಪ್ರತಿ ವರ್ಷ ಫೋಲಿಕ್ ಆಸಿಡ್ ಕೊರತೆ ಫಲವಾಗಿ ನರಮಂಡಲ ದೋಷ ಇರುವ 2 ಲಕ್ಷ ಮಕ್ಕಳು ಜನಿಸಿದರೆ, ಐಯೊಡಿನ್ ಕೊರತೆ ಕಾರಣಕ್ಕೆ 66 ಲಕ್ಷದಷ್ಟು ಬುದ್ಧಿಮಾಂದ್ಯ ಮಕ್ಕಳು ಜನಿಸುತ್ತಾರೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ. ಪೋಷಕಾಂಶ ಕೊರತೆಯಿಂದ ಉದ್ಭವಿಸುವ ಅಪೌಷ್ಟಿಕತೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ತುರ್ತು ಅಗತ್ಯ ಈಗ ಉದ್ಭವಿಸಿದೆ.

ಈ ಕಾರಣಕ್ಕೆ ತುರ್ತಾಗಿ ಕೆಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪೋಷಕಾಂಶಗಳ ಕೊರತೆಯಿಂದ ಬಳಲುವವರು ಎದುರಿಸುವ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಯೋಜನೆ ಮತ್ತು ಪರಿಣಾಮಕಾರಿ ಯಾದ ಕಾರ್ಯತಂತ್ರ ರೂಪಿಸಿ, ಅದರ ಜಾರಿಗೆ ಗುರಿ ನಿಗದಿಪಡಿಸಿ ತುರ್ತಾಗಿ ಕಾರ್ಯಪ್ರವೃತ್ತವಾಗ ಬೇಕಾಗಿದೆ.ಇದಕ್ಕೆ ಪೂರಕವಾಗಿ ಅಗತ್ಯವಾದ ಸಂಶೋಧನೆ, ಅಭಿವೃದ್ಧಿ, ಸಂವಹನ ಮತ್ತು ಕಾರ್ಯಕ್ರಮ ಜಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ ಮಕ್ಕಳ ಪೌಷ್ಟಿಕತೆಯ ವಿಭಾಗದ ವೈದ್ಯೆ ಅನುಜಾ ಅಗರವಾಲ್ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.