ಮಂಗಳವಾರ, ಜೂನ್ 15, 2021
27 °C
ಗರಿಗೆದರಿದೆ ರಾಜಕೀಯ...

ನಗರಸಭೆ ಅಧ್ಯಕ್ಷರ ಚುನಾವಣೆ 10ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರಸಭೆ ಸದಸ್ಯರ ಚುನಾವಣೆ ನಡೆದು ಒಂದು ವರ್ಷದ ಬಳಿಕ ಅಧ್ಯಕ್ಷ-–ಉಪಾಧ್ಯಕ್ಷರ ಚುನಾ­ವಣೆ ಮಾ.10ರಂದು ನಡೆಯಲಿದೆ. ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಶನಿವಾರ ರಾತ್ರಿಯಿಂದಲೇ ಗರಿಗೆದರಿವೆ.ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನದ ಮೇಲೆ ಎಲ್ಲರ ಕಣ್ಣೂ ಬಿದಿ್ದಿದೆ. ಬಹುಮತದ ಬೆಂಬಲ ಯಾರಿಗೆ ಎಂಬುದು ಮಾತ್ರ ರಹಸ್ಯವಾಗಿದೆ.ಬೆಂಬಲಕ್ಕಾಗಿ ಸದಸ್ಯರನ್ನು ಓಲೈಸುವ ರಾಜಕಾರಣವೂ ಶುರುವಾಗಿದೆ. ಕಾಂಗ್ರೆಸ್‍–ಜೆಡಿಎಸ್‍ ಪಕ್ಷದಲ್ಲಿ ಸಂಖ್ಯಾಬಲ ಹೊಂದಿಸುವ ಕಸರತ್ತು ಶುರುವಾಗಿದೆ. ಇದೇ ವೇಳೆ, ಪಕ್ಷೇತರರು ತಮ್ಮ ‘ಲಾಭಕ್ಕಾಗಿ’ ಎದುರು ನೋಡುತ್ತಿದ್ದಾರೆ.ಕಳೆದ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‍ 17 ಸ್ಥಾನ ಗಳಿಸಿತ್ತು. 18ನೇ ವಾರ್ಡ್‌ನ ಎಲ್.ನಸೀರ್ ಅಹ್ಮದ್ ಅನಾರೋಗ್ಯದಿಂದ ನಿಧನ ಹೊಂದಿದ ಬಳಿಕ ಆ ಸ್ಥಾನ ಖಾಲಿ ಉಳಿದಿದೆ. ಜೆಡಿಎಸ್‍ 16 ಸದಸ್ಯರ ಬಲ ಹೊಂದಿದೆ. ಪಕ್ಷದ ಬೆಂಬಲದೊಡನೆ ಸ್ಪರ್ಧಿಸಿ ಜಯಗಳಿಸಿದ 2 ನೇ ವಾರ್ಡ್‌ನ ಗಾಂಧಿನಗರ ನಾರಾಯಣಸ್ವಾಮಿ ಸೇರಿ ಒಟ್ಟು 17 ಸದಸ್ಯರ ಬಲವಿದೆ.ಅದೇ ಕಾರಣದಿಂದ ಪಕ್ಷದಲ್ಲಿ ಸಂಚಲನ ಮೂಡಿದೆ. ಐವರು ಪ್ರಬಲ ಆಕಾಂಕ್ಷಿಗಳ ನಡುವೆ ಪಕ್ಷವು ಅಧಿಕಾರಕ್ಕಾಗಿ ಸಕಲ ಪ್ರಯತ್ನಗಳನ್ನೂ ಆರಂಭಿಸಿದೆ.ಪಕ್ಷದ ಮುಖಂಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ನಗರದ ಮನೆಯಲ್ಲಿ ಭಾನುವಾರ ಎಲ್ಲ 17 ಸದಸ್ಯರು ಸಭೆ ಸೇರಿ ಚರ್ಚಿಸಿದ್ದಾರೆ.2ನೇ ವಾರ್ಡ್‌ನ ಗಾಂಧಿನಗರ ನಾರಾಯಣಸ್ವಾಮಿ, 3ನೇ ವಾರ್ಡ್‌ನ ಬಿ.ಎಂ.ಮುಬಾರಕ್, 11ನೇ ವಾರ್ಡ್‌ನ ಸಿ.ಎ.ಸುಕುಮಾರ್, 12ನೇ ವಾರ್ಡ್‌ನ ವಿ.ರವೀಂದ್ರ, 14ನೇ ವಾರ್ಡ್‌ನ ಎಸ್.ಆರ್‍.ಮುರಳಿಗೌಡ, ಮತ್ತು 17ನೇ ವಾರ್ಡ್‌ನ ಅಫ್ರೋಸ್ ಪಾಷಾ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ­ಗಳಾಗಿದ್ದೇವೆ ಎಂದು ಶ್ರೀನಿವಾಸಗೌಡ­ರಿಗೆ ತಿಳಿಸಿದ್ದಾರೆ. ಇದೇ ವೇಳೆ ಪಕ್ಷ ಬೆಂಬಲಿಸಿದರೆ ತಾವೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗಾಂಧಿನಗರ ನಾರಾಯಣಸ್ವಾಮಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೊರರಾಜ್ಯಕ್ಕೆ: ಗಾಂಧಿನಗರ ನಾರಾಯಣಸ್ವಾಮಿ ಹೊರತುಪಡಿಸಿ ಉಳಿದ 16 ಸದಸ್ಯರನ್ನು, ಒಗ್ಗಟ ್ಟು ಕಾಪಾಡುವ ಸಲುವಾಗಿ ಹೊರ ರಾಜ್ಯಕ್ಕೆ ಪ್ರವಾಸ ಕಳಿಸಲು ಸಿದ್ಧತೆ ನಡೆದಿದೆ. ಈ ಸದಸ್ಯರೆಲ್ಲರೂ, ಚುನಾವಣೆ ದಿನವಾದ ಮಾ.10ರಂದೇ ನಗರಕ್ಕೆ ಬರಲಿದ್ದಾರೆ.ಕಾಂಗ್ರೆಸ್‍: ಕಾಂಗ್ರೆಸ್‌ನಿಂದ ಗೆದ್ದಿರುವ 8 ಸದಸ್ಯರು, ಪಕ್ಷೇತರರಾದ ಸುಜಾತಾ, ಶಂಶೀರ್‍ ಮತ್ತು ರೌತ್ ಶಂಕರಪ್ಪ ಪಕ್ಷದೊಡನೆ ಗುರುತಿಸಿಕೊಂಡಿದ್ದಾರೆ. ಕೇಂದ್ರ ಸಚಿವ, ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್‍ ಸದಸ್ಯ ನಸೀರ್ ಅಹ್ಮದ್ ಮತಗಳು ನಮ್ಮೊಂದಿಗಿವೆ. ಆದರೂ 6 ಸದಸ್ಯರ ಬಲದ ಕೊರತೆ ಇದೆ. ಅದನ್ನು ತುಂಬಿಸಿಕೊಳ್ಳುವ ಪ್ರಯತ್ನ ನಡೆದಿದೆ. ಇನ್ನೂ ಕೆಲವು ಪಕ್ಷೇತರರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆದಿದೆ ಎನ್ನುತ್ತಾರ ಜಿಲ್ಲಾ ಕಾಂಗ್ರೆಸ್‍ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್‍.ವರ್ತೂರು ಪ್ರಕಾಶ್‍: ನಗರಸಭೆಯಲ್ಲಿ ಕೇವಲ ಐವರು ಪಕ್ಷೇತರ ಸದಸ್ಯರ ಬಲವಿರುವ ಶಾಸಕ ಆರ್‍.ವರ್ತೂರು ಪ್ರಕಾಶ್‍ ವಿಧಾನಸಭೆ ಚುನಾವಣೆ ಬಳಿಕ ಹೆಚ್ಚು ಕಾಣಿಸಿಕೊಂಡಿಲ್ಲ. ಕೆಲವೇ ಸಭೆಗಳಲ್ಲಿ ಕಾಣಿಸಿಕೊಂಡಿರುವ ಅವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವರ ನಡೆ ಏನಿರಬಹುದು ಎಂಬುದು ಸ್ಪಷ್ಟವಾಗಿಲ್ಲ. ನಗರಸಭೆಯಲ್ಲಿ ಪ್ರಾತಿನಿಧ್ಯವೇ ಇಲ್ಲದಿರುವುದರಿಂದ ಬಿಜೆಪಿ ನಿರುಮ್ಮಳವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.