ಗುರುವಾರ , ಫೆಬ್ರವರಿ 25, 2021
20 °C

ನಗರಸಭೆ ಸದಸ್ಯರಿಗೆ ದಿಢೀರ್ ಜ್ಞಾನೋದಯ!

ವಿಶೇಷ ವರದಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರಸಭೆ ಸದಸ್ಯರಿಗೆ ದಿಢೀರ್ ಜ್ಞಾನೋದಯ!

ಚಿಕ್ಕಬಳ್ಳಾಪುರ: ಸುಮಾರು ಒಂದು ತಿಂಗಳ ಹಿಂದೆ ನೀರು ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನೀಡಲು ಜನರು ಚಿಕ್ಕಬಳ್ಳಾಪುರ ನಗರಸಭೆ ಕಚೇರಿಗೆ ಹೋದರೆ, ನಗರಸಭೆ ಸದಸ್ಯರು ಕಾಣಸಿಗುತ್ತಿರಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗದ ಸದಸ್ಯರನ್ನು ಹುಡುಕುವುದೇ ದುಸ್ತರವಾಗಿತ್ತು.ಆದರೆ ಈಗ ನಗರಸಭೆ ಸದಸ್ಯರು ಎಲ್ಲಿ ಬೇಕೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರವು ತೀರ ಹಿಂದುಳಿದಿದೆ ಎಂಬುದು ಸದಸ್ಯರಿಗೆ ದಿಢೀರ್ `ಜ್ಞಾನೋದಯ~ವಾಗಿದ್ದು, ಅಭಿವೃದ್ಧಿಗಾಗಿ ಪದೇ ಪದೇ ಒತ್ತಾಯಿಸುತ್ತಿದ್ದಾರೆ.

ಅವಿಶ್ವಾಸ ಮಂಡನೆ ಮಾಡುವ ಮೂಲಕ ಬಿ.ಎ.ಲೋಕೇಶ್‌ಕುಮಾರ್ ಅವರನ್ನು ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೇ ತಡ, ಬಹುತೇಕ ಸದಸ್ಯರು ಅಭಿವೃದ್ಧಿಯ ಮಂತ್ರ ಜಪಿಸತೊಡಗಿದ್ದಾರೆ. ನಗರವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೆ ಇರುವುದಕ್ಕೆ ಅಧಿಕಾರಿಗಳೇ ಕಾರಣವೆಂದು ಸದಸ್ಯರು ದೂಷಿಸುತ್ತಿದ್ದಾರೆ.

 

`ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ~ ಎಂದು ಆರೋಪಿಸುವ ಸದಸ್ಯರು ಅವಕಾಶ ಸಿಕ್ಕಾಗಲೆಲ್ಲ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಿದ್ದಾರೆ.ಪ್ರಭಾರಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದ ತುರ್ತು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಒಬ್ಬೊಬ್ಬರಾಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

 

`ವಾರ್ಡ್ ಗಳಲ್ಲಿ ತಲೆ ಎತ್ತಿಕೊಂಡು ತಿರುಗಾಡಲಾರದ ಪರಿಸ್ಥಿತಿಯಿದೆ. ವಾರ್ಡ್‌ನ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದಲೇ ನಮ್ಮ ಸ್ಥಿತಿ ಹೀಗಾಗಿದೆ~ ಎಂದು ಸದಸ್ಯ ಎಂ.ಪ್ರಕಾಶ್ ಸೇರಿದಂತೆ ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು.ನಗರದ ಟಿ.ಚನ್ನಯ್ಯ ಉದ್ಯಾನಕ್ಕೆ ಗುರುವಾರ ಭೇಟಿ ನೀಡಿದ ಕೆಲ ಸದಸ್ಯರು ಉದ್ಯಾನದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. `ಉದ್ಯಾನ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಈ ಕಾರಣದಿಂದಲೇ ಉದ್ಯಾನ ಕಳೆಗುಂದಿದೆ. ನೀರು ಪೂರೈಕೆಯಿಲ್ಲದೆ ಹೂಗಿಡಗಳು ಒಣಗಿವೆ.ಈ ಸಮಸ್ಯೆಯನ್ನು ಬೇಗನೇ ಪರಿಹರಿಸಬೇಕು. ಕಾಮಗಾರಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು~ ಎಂದು ಅಧಿಕಾರಿಗಳಿಗೆ ತಾಕೀತು ಕೂಡ ಮಾಡಿದರು. ನಗರಸಭೆ ಸದಸ್ಯರು ಈಗ ದಿಢೀರನೇ ಚುರುಕಾಗಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.`ಬಿ.ಎ.ಲೋಕೇಶ್‌ಕುಮಾರ್ ಅಧ್ಯಕ್ಷರಾಗಿದ್ದ ವೇಳೆ ಈ ಪರಿ ಚುರುಕುತನ ತೋರದ ಸದಸ್ಯರು ಈಗ ಅಭಿವೃದ್ಧಿಯ ಬಗ್ಗೆ ಆಸಕ್ತಿ ತೋರುತ್ತಿರುವುದು ಅಚ್ಚರಿ ಮೂಡಿಸಿದೆ. ಇದೇ ಚುರುಕುತನ ಮೊದಲೇ ತೋರಿಸಿದ್ದರೆ, ಈ ಹೊತ್ತಿಗೆ ಚಿಕ್ಕಬಳ್ಳಾಪುರ ನಗರಸಭೆಯು ಚಿಂತಾಮಣಿ ನಗರಸಭೆ ಹಾಗೆ ಅತ್ಯುತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿತ್ತು, ಚಿಕ್ಕಬಳ್ಳಾಪುರ ಕೂಡ ಅಭಿವೃದ್ಧಿಯಾಗುತ್ತಿತ್ತು~ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಎನ್.ಶ್ರೀನಿವಾಸ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.