ಸೋಮವಾರ, ಏಪ್ರಿಲ್ 19, 2021
26 °C

ನಗೆಬುಗ್ಗೆಯ ಚಿತ್ರದಲ್ಲಿ ಜೂಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂಹಿ ಚಾವ್ಲಾ ನವೆಂಬರ್‌ನಲ್ಲಿ ತೆರೆಕಾಣಲಿರುವ `ಸನ್ ಆಫ್ ಸರ್ದಾರ್~ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜಯ್ ದತ್ ಜೊತೆಗೆ ನಟಿಸಿರುವ ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿದೆ ಎಂದು ಜೂಹಿ ಹೇಳಿದ್ದಾರೆ.

ಬಹು ವರ್ಷಗಳ ನಂತರ ಇಂಥದ್ದೊಂದು ಚುಲ್‌ಬುಲಿ ಪಾತ್ರ ದೊರೆತಿದೆ. ಇಡೀ ಚಿತ್ರವನ್ನು ಆನಂದಿಸುತ್ತಲೇ ಚಿತ್ರೀಕರಿಸಿದ್ದೇವೆ. ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ.

`ಸಂಜೂಬಾಬಾ ಮತ್ತು ಜೂಹಿ 25 ವರ್ಷಗಳ ಹಿಂದೆಯೇ ಮದುವೆಯಾಗಬೇಕಾದ ಕತೆ ಅದು. ಆದರೆ ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಆದರೆ ಎರಡೂವರೆ ದಶಕಗಳ ನಂತರದ ಸನ್ನಿವೇಶಗಳೇ ಹಾಸ್ಯಮಯವಾಗಿವೆ~ ಎಂದು ಚಿತ್ರದ ಬಗ್ಗೆ ಹೇಳಿದ್ದಾರೆ.

`ಚಿತ್ರ ನಿರ್ಮಾಪಕ ಅಜಯ್ ದೇವಗನ್ ಕರೆ ಮಾಡಿ, ಇಂಥದ್ದೊಂದು ಚಿತ್ರ ನಿರ್ಮಿಸುತ್ತಿದ್ದೇವೆ. ಈ ಪಾತ್ರ ನಿಮಗಾಗಿಯೇ ಇದೆ ಎಂದಾಗ ಅರೆಕ್ಷಣ ಯೋಚಿಸಿದ್ದೆ. ಮುಖ್ಯ ವಾಹಿನಿಯ ದೊಡ್ಡ ಬಜೆಟ್‌ನ ಚಿತ್ರದಲ್ಲಿ ಪಾಲ್ಗೊಳ್ಳದೆ ಬಹಳ ವರ್ಷಗಳೇ ಕಳೆದು ಹೋಗಿದ್ದವು. ಆದರೆ ಹಾಸ್ಯ ಪಾತ್ರ ಎಂದೊಡನೆ ಮರುಮಾತಿಲ್ಲದೆ ಒಪ್ಪಿದೆ. ನನ್ನ ಹಳೆಯ ಚಿತ್ರಗಳ ಚಿತ್ರೀಕರಣದ ಸಂದರ್ಭಗಳನ್ನು ನೆನಪಿಸಿಕೊಳ್ಳುತ್ತಲೇ ಈ ಚಿತ್ರವನ್ನು ಪೂರೈಸಿದ್ದೇನೆ. ನಟಿಯಾಗಿ ನಾನು ಇಂಥದ್ದೇ ಪಾತ್ರಗಳು ಬೇಕು ಎಂದು ಬಯಸಿಲ್ಲ. ಆದರೆ ಸ್ಕ್ರಿಪ್ಟ್ ಇಷ್ಟವಾದ ನಂತರ ಪಾತ್ರವು ನನ್ನ ವ್ಯಕ್ತಿತ್ವಕ್ಕೆ ಹೊಂದುವಂತಿದ್ದರೆ ಯಾವುದೇ ಬಜೆಟ್‌ನದ್ದಾಗಿರಲಿ, ಕಲಾತ್ಮಕವಾಗಿರಲಿ, ಮನರಂಜನೆಯ ಚಿತ್ರವೇ ಆಗಿರಲಿ ಒಪ್ಪಿಕೊಂಡಿದ್ದೇನೆ. ಎಲ್ಲ ಬಗೆಯ ಪಾತ್ರಗಳ ಆಯ್ಕೆಯ ಅವಕಾಶ ನನಗೆ ದೊರೆತಿದ್ದಕ್ಕೆ ಸಂತೋಷವಿದೆ~ ಎಂದೂ ಜೂಹಿ ಹೇಳಿಕೊಂಡಿದ್ದಾರೆ.

ನವೆಂಬರ್‌ನಲ್ಲಿ ಅವರ ಸ್ನೇಹಿತ ಶಾರುಖ್ ಖಾನ್ ಚಿತ್ರ ಬಿಡುಗಡೆಯ ಬಗ್ಗೆ ಪ್ರಶ್ನಿಸಿದಾಗ, `ಈ ಬಗ್ಗೆ ನಾನು ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವಂತಿಲ್ಲ. ಅದು ದೀಪಾವಳಿ ಹಬ್ಬದ ಸಮಯ. ಚಿತ್ರ ಬಿಡುಗಡೆಗೆ ಸಮರ್ಪಕವಾದ ಅವಧಿ. ಅದೇ ಸಮಯದಲ್ಲಿ ಎಸ್‌ಆರ್‌ಕೆ ಚಿತ್ರವೂ ಬಿಡುಗಡೆಗೊಳ್ಳುವ ಬಗ್ಗೆ ನನಗೆ ತಿಳಿದಿಲ್ಲ~ ಎಂದೂ ಸ್ಪಷ್ಟಪಡಿಸಿದ್ದಾರೆ.

ಶಾರುಖ್ ಖಾನ್ ಜೊತೆಗೆ ಯಾವುದಾದರೂ ಚಿತ್ರ ಮಾಡಲು ಇಷ್ಟ ಪಡುವಿರಾ ಎಂಬ ಪ್ರಶ್ನೆಗೆ, `ಸದ್ಯದವರೆಗೆ ಯಾವುದೇ ಪ್ರಸ್ತಾಪಗಳು ಬಂದಿಲ್ಲ. ಆದರೆ ಖಂಡಿತವಾಗಿಯೂ ಎಸ್‌ಆರ್‌ಕೆ ಜೊತೆಗೆ ಕೆಲಸ ಮಾಡುವುದು ಖುಷಿ ಕೊಡುವ ಸಂಗತಿಯಾಗಿದೆ~ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.