ಗುರುವಾರ , ಮೇ 13, 2021
18 °C

ನಗೆಯ ಕಿರು ನಿಲ್ದಾಣ (ಚಿತ್ರ: ಕಳ್ಳ ಮಳ್ಳ ಸುಳ್ಳ)

ಎನ್ವಿ Updated:

ಅಕ್ಷರ ಗಾತ್ರ : | |

ನಗೆಯ ಕಿರು ನಿಲ್ದಾಣ (ಚಿತ್ರ: ಕಳ್ಳ ಮಳ್ಳ ಸುಳ್ಳ)

`ಚಾರ‌್ಲಿ ಚಾಪ್ಲಿನ್~ ಚಿತ್ರಗಳು ಕೇವಲ ಮೋಜು ಮಾಡುವ ಉದ್ದೇಶ ಇಟ್ಟುಕೊಂಡಿರಲಿಲ್ಲ. ಬದುಕಿನ ಹಲವು ಸತ್ಯಗಳನ್ನು ಅವು ವ್ಯಂಗ್ಯದ ಧಾಟಿಯಲ್ಲಿ ಕೂಡ ಹೇಳಿದವು. ಅವುಗಳ ವೇಗ, ಸಂಕಲನದ ಹೊಸತನ ಜಾಗತಿಕ ಸಿನಿಪ್ರೇಮಿಗಳನ್ನು ಕಾಡಿತ್ತು, ಈಗಲೂ ಕಾಡುವ ಗುಣವಿದೆ.

 

ಭಾರತದಲ್ಲಿ ಹಾಸ್ಯ ಪ್ರಧಾನ ಚಿತ್ರಗಳಿಗೆ ಇನ್ನೂ ಅಷ್ಟೊಂದು ಮಹತ್ವಾಕಾಂಕ್ಷೆ ಬಂದಿಲ್ಲವೇನೋ? ನಮ್ಮ ಚಿತ್ರ ಸೃಷ್ಟಿಕರ್ತರು ಗಂಡ-ಹೆಂಡತಿಯ ವಿರಸ, ವಿವಾಹೇತರ ಸಂಬಂಧದ ವಿಲಾಸ, ಅಂಗಚೇಷ್ಟೆ- ಇವನ್ನೇ ಕೇಂದ್ರೀಕರಿಸಿದ ಹಾಸ್ಯ ಚಿತ್ರಗಳನ್ನು ಕೊಟ್ಟಿದ್ದೇ ಹೆಚ್ಚು.ಕೆಲವೇ ವರ್ಷಗಳ ಹಿಂದೆ ತೆರೆಕಂಡಿದ್ದ ನಾಗೇಂದ್ರ ಮಾಗಡಿ ನಿರ್ದೇಶನದ `ಹನಿಮೂನ್ ಎಕ್ಸ್‌ಪ್ರೆಸ್~, ಹುಬ್ಬಳ್ಳಿ- ಧಾರಾವಾಡ ಭಾಷೆ ಬಳಕೆ ಹಾಗೂ ಕಮಲ ಹಾಸನ್ ಉಪಸ್ಥಿತಿಯ ಕಾರಣಕ್ಕೆ ಸಾಕಷ್ಟು ಜನಪ್ರಿಯವಾದ `ರಾಮ ಶಾಮ ಭಾಮ~ ಚಿತ್ರಗಳೂ ಅದೇ ಜಾಯಮಾನದವು.

 

ಬಹಳ ಹಿಂದಿನಿಂದಲೂ ವಿವಾಹೇತರ ಸಂಬಂಧದ ನೆಪದಲ್ಲಿ ಗಂಡಿನ ಮರ್ಕಟ ಮನಸ್ಸಿನ ಅನಾವರಣ ವಾಗಿರುವಚಿತ್ರಗಳು ಬರುತ್ತಲೇ ಇವೆ. ಅವುಗಳಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನಾಯಕ-ನಾಯಕಿಯರೇ ಹೆಚ್ಚಾಗಿ ಬಳಕೆಯಾಗಿರುವುದನ್ನು ಕಾಣುತ್ತೇವೆ. ಆದರೆ, `ಕಳ್ಳ ಮಳ್ಳ ಸುಳ್ಳ~ ಈ ವಿಷಯದಲ್ಲಿ ತುಸು `ಅಪ್‌ಡೇಟ್~ ಆಗಿರುವ ಹಾಸ್ಯಚಿತ್ರ. ಅದಕ್ಕೆ ಕಾರಣ ಅದು ಹಿಂದಿಯ `ನೋ ಎಂಟ್ರಿ~ ಚಿತ್ರದ ರೀಮೇಕ್ ಎಂಬುದು.ತುಸುವೂ ತರ್ಕವಿಲ್ಲದೆ, ಕಚಗುಳಿ ಇಡುವ ಹಾಸ್ಯಧಾರಾವಾಹಿಯಷ್ಟೇ ಸಲೀಸಾಗಿ ನೋಡಿಸಿಕೊಳ್ಳುವಂತೆ `ಕಳ್ಳ ಮಳ್ಳ ಸುಳ್ಳ~ರನ್ನು ನಿರ್ದೇಶಕ ಉದಯ್ ಪ್ರಕಾಶ್ ತೆರೆಗೆ ತಂದಿದ್ದಾರೆ.ಮುಗ್ಧ ಹೆಂಡತಿಯ ಕಣ್ಣಿಗೆ ಮಣ್ಣೆರಚುತ್ತಲೇ ಸಿಕ್ಕಸಿಕ್ಕ ಲಲನೆಯರ ಜೊತೆ ಸರಸವಾಡುವ ಉದ್ಯಮಿ ಒಬ್ಬ, ಬೇರೆಯವರ ಕಚ್ಚೆ ಕಳಚಿದ ಸುದ್ದಿಯನ್ನು `ಬ್ರೇಕ್~ ಮಾಡುವ ಭರದಲ್ಲಿ ತಾನೇ ಸಂದಿಗ್ಧ ಸ್ಥಿತಿಗೆ ಸಿಕ್ಕಿಕೊಳ್ಳುವ ಸಂಪಾದಕ ಇನ್ನೊಬ್ಬ, ಅವನ ಪೀಕಲಾಟದಲ್ಲಿ ಬಲಿಪಶುವಾಗುವ ವರದಿಗಾರ ಮತ್ತೊಬ್ಬ.ಈ ಮೂವರ ಬದುಕಿನಲ್ಲಿ ಸುಂದರ ಲಲನೆಯ ಆಗಮನಾನಂತರ ಆಗುವ ಪಲ್ಲಟಗಳನ್ನು ಕೇವಲ ಕಚಗುಳಿ ಇಡುವಂತೆ ಹೆಣೆಯಲಾಗಿದೆ. ದೃಶ್ಯ ಸಂಯೋಜನೆಯ ಬೀಸಿಗೆ ಮೂಲ ಚಿತ್ರದ ಕಾವೇ ಕಾರಣ. ಇಲ್ಲಿ ಗಮನ ಸೆಳೆಯುವುದು ಎಂ.ಎಸ್. ರಮೇಶ್ ಸಂಭಾಷಣೆ. ಆ್ಯಕ್ಷನ್ ಚಿತ್ರಗಳಿಗೆ ವೀರಾವೇಷದ ಮಾತುಗಳನ್ನು ಬರೆಯುವ ಜಾಯಮಾನದ ರಮೇಶ್ ಈ ಚಿತ್ರದಲ್ಲಿ ತುಸುವೂ ಸರ್ಕಸ್ ಮಾಡದೆ ಲೀಲಾಜಾಲವಾದ ಮಾತುಗಳನ್ನು ಕೇಳಿಸಿರುವುದು ಶ್ಲಾಘನೀಯ.ಇಂಥ ಪಾತ್ರಗಳಲ್ಲಿ ತಾವು ಎಂದೂ ತಮ್ಮದೇ ಶೈಲಿಯ ನಟ ಎಂಬುದನ್ನು ನೆನಪಿಸುವಂತೆ ರಮೇಶ್ ಅಭಿನಯಿಸಿದ್ದಾರೆ. ಬಿಪಾಶ ಬಸು ಅವರಷ್ಟು ಮಾದಕವಲ್ಲದಿದ್ದರೂ ಕನ್ನಡದ ಮಟ್ಟಿಗೆ ರಾಗಿಣಿಯ ಕಣ್ಣೋಟ ಕಂಡು ಅವರನ್ನು `ಸೆಕ್ಸಿ~ ಎಂದು ಕರೆಯಲಡ್ಡಿಯಿಲ್ಲ.ನಿಸ್ಸಂಕೋಚವಾಗಿ ಅವರು ಪಾತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಅವರ ಅಭಿನಯ ಶ್ರದ್ಧೆಗೂ ಕೆಲವು ಸುಳಿವುಗಳು ಸಿಗುತ್ತವೆ. ಆದರೆ, ರವಿಚಂದ್ರನ್ ಅನ್ಯಮನಸ್ಕರಂತೆ ಅಭಿನಯಿಸಿದ್ದಾರೆ. ಅವರು ಪಾತ್ರವನ್ನು ಜೀವಿಸಿಯೇ ಇಲ್ಲ. ಅವರಿಗಾಗಿಯೇ ಇರುವ ಒಂದು `ಕೊಲಾಜ್~ ಹಾಡೂ ಅನರ್ಥವಾಗಿದೆ.ಯಜ್ಞಾ ಶೆಟ್ಟಿ, ರಿಷಿಕಾ, ಮೋನಿಕಾ ಅಭಿನಯ, ಸೌಂದರ್ಯ- ಎಲ್ಲದರಲ್ಲೂ ಸಪ್ಪೆ. ಒದೆ ತಿನ್ನುವ ಸಣ್ಣ ಪಾತ್ರದಲ್ಲಿ ಮಂಡ್ಯ ರಮೇಶ್ ಮೆಚ್ಚಾಗುತ್ತಾರೆ. ಸ್ವಂತಿಕೆಯ ವಿಷಯ ಬದಿಗಿಟ್ಟರೆ ಹಾಡುಗಳಿಗೆ ಅಲೆಕ್ಸ್ ಪಾಲ್ ಹಾಕಿರುವ ಕೆಲವು ಮಟ್ಟುಗಳಿಗೆ ಕುಣಿಸುವ ಲಯವಿದೆ. ಜಿ.ಎಸ್.ವಿ.ಸೀತಾರಾಂ ಕ್ಯಾಮೆರಾ ಚಿತ್ರದ ತೀವ್ರತೆಯನ್ನು ಇನ್ನೂ ಹೆಚ್ಚಿಸಬಹುದಿತ್ತು. ಒಂದಿಷ್ಟು ನಕ್ಕು ಹಗುರಾಗಲು `ಕಳ್ಳ ಮಳ್ಳ ಸುಳ್ಳ~ ಸಣ್ಣ ನಿಲ್ದಾಣವಂತೂ ಹೌದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.