ಶನಿವಾರ, ಮಾರ್ಚ್ 6, 2021
28 °C

ನಟಿ ಎನ್ನಿ, ಉದ್ಯಮಿ ಎನ್ನದಿರಿ: ಶಿಲ್ಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಎನ್ನಿ, ಉದ್ಯಮಿ ಎನ್ನದಿರಿ: ಶಿಲ್ಪಾ

ಒಂದು ಕಾಲದಲ್ಲಿ ತಮ್ಮ ವಯ್ಯಾರದಿಂದಲೇ ಪ್ರೇಕ್ಷಕರ ಮನಗೆದ್ದಿದ್ದ ಶಿಲ್ಪಾ ಶೆಟ್ಟಿ ಅವರಿಗೆ ಅಭಿನಯದ ಅವಕಾಶಗಳು ಈಗ ವಿರಳ. ಹಾಗಿದ್ದೂ ತಮ್ಮನ್ನು ನಟಿ ಎಂದೇ ಜನ ಗುರ್ತಿಸುವುದು ಅವರಿಗೆ ಈಗಲೂ ಖುಷಿಯ ಸಂಗತಿ. ಕೆಲವರು ಅವರನ್ನು ಉದ್ಯಮಿ ಎಂದು ಕರೆಯತೊಡಗಿದ್ದು, ಅದರಿಂದ ಅವರಿಗೆ ಕಿರಿಕಿರಿ ಎನಿಸುತ್ತಿದೆಯಂತೆ.‘ನಾನು ಎಂದಿಗೂ ನಟಿ. ಈಗಲೂ ಅಭಿನಯಕ್ಕೆ ವಿದಾಯ ಹೇಳಿಲ್ಲ. ಮದುವೆಯಾದ ಬಳಿಕ ಪತಿಯ ಹಿನ್ನೆಲೆಯಿಂದಾಗಿ ಕೆಲವು ಉದ್ಯಮಗಳಲ್ಲಿ ತೊಡಗಿಕೊಂಡೆ. ಮೂಲತಃ ನಾನು ನಟಿ. ಜನ ನನ್ನನ್ನು ನಟಿ ಎಂದು ಗುರ್ತಿಸಿದರೆ ಸಂತೋಷವಾಗುತ್ತದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನವದೆಹಲಿಯ ಖಾಸಗಿ ಸ್ಪಾ ಒಂದು ‘ಆರೋಗ್ಯದ ಚಿಲುಮೆಯಂಥ ಅಮ್ಮ’ ಎಂಬ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿತು. ಅದನ್ನು ಸ್ವೀಕರಿಸಿದ ಸಂದರ್ಭದಲ್ಲಿ ಶಿಲ್ಪಾ ತಮ್ಮ ಅಭಿಪ್ರಾಯ ಹಂಚಿಕೊಂಡರು.ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಮದುವೆಯಾದ ಬಳಿಕ ಶಿಲ್ಪಾ ಪತಿಯ ಜೊತೆಗೇ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಐಪಿಎಲ್‌ ಕ್ರಿಕೆಟ್‌ನಲ್ಲಿ ತಂಡವೊಂದರ ಮಾಲೀಕರ ಪತ್ನಿ ಎಂಬ ಅಗ್ಗಳಿಕೆಯೂ ಅವರದ್ದಾಯಿತು. ಆದರೆ ಅವೆಲ್ಲಕ್ಕಿಂತ ಶಿಲ್ಪಾ ಅವರಿಗೆ ಹೆಚ್ಚು ಖುಷಿ ಕೊಟ್ಟಿದ್ದು ತಾಯ್ತನ. ‘ಎಲ್ಲ ಅಮ್ಮಂದಿರಂತೆ ನನಗೂ ಮಗ ವಿವಾನ್‌ ಎಂದರೆ ಪ್ರಾಣ. ಅವನಿಗೆ ಈ ತಿಂಗಳು ಎರಡು ವರ್ಷ ತುಂಬಲಿದೆ. ಜುಲೈನಿಂದ ಅವನು ಶಾಲೆಗೆ ಹೋಗಲಿದ್ದಾನೆ. ಅವನ ಕಡೆ ನಿಗಾ ಮಾಡುವುದು ಈಗ ನನ್ನ ಆದ್ಯತೆ. ಹಾಗೆಂದು ಅಭಿನಯದಿಂದ ಸಂಪೂರ್ಣ ವಿಮುಖಳಾಗುವ ಉದ್ದೇಶವೂ ನನಗಿಲ್ಲ. ಉತ್ತಮ ಪಾತ್ರಗಳು ಸಿಕ್ಕರೆ ಬಣ್ಣ ಹಚ್ಚಲು ಸಿದ್ಧ’ ಎಂದು ಅವಕಾಶಗಳಿಗೆ ತಾವು ತೆರೆದುಕೊಂಡಿರುವುದನ್ನು ಅವರು ಸೂಚ್ಯವಾಗಿ ಹೇಳಿಕೊಂಡರು.‘ಡಿಷ್ಕಿಯಾಂ’ ಹಿಂದಿ ಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಶಿಲ್ಪಾ ಅನುಭವ ಪಡೆದುಕೊಂಡರು. ಸನ್ನಿ ದೇವಲ್‌ ಹಾಗೂ ಹರ್ಮನ್‌ ಬವೇಜಾ ಅಭಿನಯದ ಆ ಚಿತ್ರದಲ್ಲಿ ಒಂದು ಹಾಡಿಗೆ ಅವರು ಹೆಜ್ಜೆ ಹಾಕಿದ್ದರು. ಆ ಚಿತ್ರ ಪ್ರೇಕ್ಷಕರನ್ನು ಆಕರ್ಷಿಸಲಿಲ್ಲ. ‘ಸ್ಕ್ರಿಪ್ಟ್‌ ನಂಬಿ ಆ ಸಿನಿಮಾ ಮಾಡಿದೆ. ಅದರಿಂದ ಸಾಕಷ್ಟು ಪಾಠ ಕಲಿತೆ. ಸಾಕಷ್ಟು ಅಳೆದೂ ತೂಗಿ ಸಿನಿಮಾ ಮಾಡಬೇಕು ಎನ್ನುವುದು ನಿಜ. ಕೆಲವೊಮ್ಮೆ ತಪ್ಪು ನಡೆಗಳಿಂದಲೇ ನಾವು ಸರಿಯಾದ ತೀರ್ಮಾನ ತೆಗೆದುಕೊಳ್ಳುವುದನ್ನು ಕಲಿಯುತ್ತೇವೆ’ ಎಂದು ನಿರ್ಮಾಪಕಿಯಾಗಿ ತಮ್ಮ ಸೋಲಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.