ಮಂಗಳವಾರ, ಮೇ 17, 2022
25 °C

ನನ್ನ ನೆಮ್ಮದಿ ನನ್ನ ಕೈಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜಕ್ಕೆ ಮತ್ತು ವಾತಾವರಣಕ್ಕೆ ಹೊಂದಿಕೊಂಡು ಬಾಳಿದರೆ ಮನಸ್ಸು ಘರ್ಷಣೆಗೆ ಒಳಪಡದೇ ನಿಶ್ಚಿಂತೆಯಿಂದ ಕೆಲಸ ಮಾಡುತ್ತದೆ. ಮನಸ್ಸಿನಲ್ಲಿ ಕಿರಿಕಿರಿ ಇಲ್ಲದಿದ್ದಾಗ ದೇಹವೂ ಆರಾಮಾಗಿರುತ್ತದೆ. ಉದಾ- ಪ್ರತಿ ಸಾರಿ ನೀವು ಗಾಬರಿಗೊಂಡಾಗ, ಚಿಂತೆಗೀಡಾದಾಗ ದೇಹದಲ್ಲಿ ಮತ್ತು ವಿಶೇಷವಾಗಿ ರಕ್ತಚಲನೆಯಲ್ಲಿ  ವ್ಯತ್ಯಾಸ ಉಂಟಾಗುತ್ತದೆ - ಎದೆ ಬಡಿತ ಏರುಪೇರಾಗುತ್ತದೆ, ಮೈ ಬಿಸಿಯಾಗುತ್ತದೆ, ನರಗಳಲ್ಲಿ ಜುಂ ಎನ್ನುವ ಭಾವನೆ ಬರುತ್ತದೆ, ಸ್ನಾಯುಗಳಲ್ಲಿ ಸೆಳೆತ ಉಂಟಾಗುತ್ತದೆ, ಮೈ ಬೆವರುತ್ತದೆ. ಹಾಗೆಯೇ, ಒಬ್ಬ ವ್ಯಕ್ತಿ ಕಾರಣವಿಲ್ಲದೇ ಗಾಬರಿಗೊಂಡಾಗಲೂ, ದೇಹದಲ್ಲಿ ಈ ರೀತಿಯ ಅನಾವಶ್ಯಕ ಪ್ರತಿಕ್ರಿಯೆಗಳು ಉಂಟಾಗಿ ದೇಹಕ್ಕೆ ತ್ರಾಸವಾಗುತ್ತದೆ. ದೇಹವನ್ನು ವಿಪರೀತ ಒತ್ತಡಕ್ಕೆ ಒಳಪಡಿಸಿದಂತಾಗುತ್ತದೆ.ದಿನಕ್ಕೆ ಹತ್ತು ಬಾರಿ ಗಾಬರಿಗೊಂಡರೆ, ಭಯದಿಂದಲೇ ಎಲ್ಲರೊಡನೆ ವ್ಯವಹರಿಸುತ್ತಿದ್ದರೆ! ಮನಸ್ಸಿನಲ್ಲಿ ಶಾಂತಿ ಇಲ್ಲದೆ, ದೇಹದಲ್ಲಿ ಒತ್ತಡ ಹೆಚ್ಚಾಗಿ ಆರೋಗ್ಯ ಕೆಡುತ್ತದೆ. ಭಯ, ಆತಂಕ, ಕಿರಿಕಿರಿ, ಖಿನ್ನತೆ, ದುಗುಡ, ಬೇಸರ ಮಾನವನನ್ನು ಒಳಗಿನಿಂದಲೇ ದುರ್ಬಲನನ್ನಾಗಿಸುತ್ತವೆ.ಇದರಿಂದ ಅನೇಕ ವ್ಯಕ್ತಿಗಳು ಅನೇಕ ದೋಷಗಳಿಗೆ ಗುರಿಯಾಗಿ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ಇಂಥವರು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮನಸ್ಸಿನ ಹಿತಾವಸ್ಥೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಅನುಸರಿಸಬಹುದಾದ ಸರಳ ಸೂತ್ರಗಳು-* ಇಡೀ ವಿಶ್ವವೇ ನಿಮ್ಮ ವಿರುದ್ಧ ಇದೆ ಎಂಬ ಭಾವನೆಯನ್ನು ಬಿಡಿ. ಎಲ್ಲರಿಗೂ ಅವರವರ ಕೆಲಸಗಳಿವೆ. ಪ್ರಪಂಚಕ್ಕೆ ನಿಮ್ಮ ಬಗ್ಗೆ ಮಾತ್ರ ಚಿಂತಿಸಲು ಸಮಯವೂ ಇಲ್ಲ, ಆಸಕ್ತಿಯೂ ಇಲ್ಲ.* ಎಲ್ಲರೂ ನಿಮ್ಮನ್ನು ಟೀಕೆ ಮಾಡುವವರೇ ಎಂದುಕೊಳ್ಳಬೇಡಿ. ಎಲ್ಲರೂ ಟೀಕಾಕಾರರಲ್ಲ ಮತ್ತು ಎಲ್ಲರ ಟೀಕೆಗೂ ಕಿವಿಗೊಡುವ ಅವಶ್ಯಕತೆ ಇಲ್ಲ.ಹಾಗೆಯೇ ಕೆಲವರಿಗೆ ಅನಾವಶ್ಯಕವಾಗಿ ಟೀಕೆ ಮಾಡುವ ಚಟವಿರುತ್ತದೆ. ಅಂಥವರ ಕೆಟ್ಟ ಅಭ್ಯಾಸದ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಮ್ಮ ಜೀವನದ ಮತ್ತು ಆಸಕ್ತಿಗಳ ಬಗ್ಗೆ ಗಮನ ಕೊಡಿ. ನೀವು ಭಯಪಡುವಂತಹ ಕೆಲಸ ಮಾಡಿಲ್ಲವಾದಲ್ಲಿ ನೀವು ಯಾವುದಕ್ಕೂ ಭಯ ಪಡುವ ಆವಶ್ಯಕತೆ ಇರುವುದಿಲ್ಲ. ಎಚ್ಚರಿಕೆಯಿಂದ ಇರುವುದಕ್ಕೂ, ಭಯಪಡುವುದಕ್ಕೂ ವ್ಯತ್ಯಾಸವಿದೆ.  * ಎಲ್ಲರೂ ನಿಮ್ಮಂತೆಯೇ ಇಲ್ಲ, ಇರಲಾಗುವುದೂ ಇಲ್ಲ, ಇರಬಾರದೂ ಕೂಡ. ಏಕೆಂದರೆ, ಮಾನವ ಒಬ್ಬ ವಿಶಿಷ್ಟ ಜೀವಿ. ಮಾನವನಿಗೆ ಚಿಂತಿಸುವ, ವಿಶ್ಲೇಷಿಸುವ ಮತ್ತು ನಿರ್ಧರಿಸುವ ಸಾಮರ್ಥ್ಯವಿದೆ. ಆದ್ದರಿಂದ, ಪ್ರತಿಯೊಬ್ಬರೂ ಅವರವರ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಬೌದ್ಧಿಕ, ದೈಹಿಕ, ಸಾಮರ್ಥ್ಯದ ಹಿನ್ನೆಲೆಯ ಆಧಾರದಲ್ಲಿ ಅವರವರ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುತ್ತಾರೆ.* ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿಂತನೆಗೆ ಕಾರಣವಾಗಿರುವ ಅವೆಲ್ಲಾ ಅಂಶಗಳು, ಇನ್ನೊಬ್ಬ ವ್ಯಕ್ತಿಯಲ್ಲಿ ಅದೇ ಅನುಪಾತದಲ್ಲಿ ಇರಲು ಸಾಧ್ಯವಿಲ್ಲದ ಕಾರಣ ಒಬ್ಬನಂತೆ ಇನ್ನೊಬ್ಬ ವ್ಯಕ್ತಿ ಇರಲು ಸಾಧ್ಯವಿಲ್ಲ. ಅದನ್ನೇ ಸ್ವತಂತ್ರ ವ್ಯಕ್ತಿತ್ವ ಎಂದು ಗುರುತಿಸುತ್ತೇವೆ. ಆದ್ದರಿಂದ ಬೇರೆಯವರೂ ನಮ್ಮಂತೆಯೇ ಚಿಂತಿಸಬೇಕೆಂಬುದು ಅಸಮ್ಮತ. ಬೇರೆಯವರು ನಮ್ಮ ಇಚ್ಛೆಯಂತೆ ವರ್ತಿಸಬೇಕು, ಅವರು ನಮ್ಮೆಲ್ಲಾ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಬೇಕು ಎಂದೆಲ್ಲಾ ಅಂದುಕೊಳ್ಳುವುದು ಸೂಕ್ತವಲ್ಲ. ತಂದೆಯಂತೆ ಮಗನಿರಬೇಕಾಗಿಲ್ಲ, ಅಥವಾ ತಾಯಿಯಂತೆ ಮಗಳಿರಬೇಕಾಗಿಲ್ಲ ಎಂದ ಮೇಲೆ ನಮಗೆ ಸಂಬಂಧವಿಲ್ಲದಂತಹ ವ್ಯಕ್ತಿಗಳೂ ನಮ್ಮ ರೀತಿಯಲ್ಲೇ ಚಿಂತಿಸಬೇಕು, ನಡೆಯಬೇಕೆಂಬುದು ಬಾಲಿಶ.ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಸಹನೆ ಮತ್ತು ಗೌರವಗಳಿದ್ದರೆ, ಆ ಸಂಬಂಧಗಳು ಬಲಿಷ್ಠ ಮತ್ತು ಅರ್ಥಪೂರ್ಣವಾಗಿರುತ್ತವೆ. ಮನಸ್ಸಿನಲ್ಲಿ ಅನುಮಾನ, ಅಸಹನೆ ಮತ್ತು ಅಹಂನಿಂದ ಬರುವ ಕಿರಿಕಿರಿ ಮತ್ತು ಅಶಾಂತಿಯನ್ನು ನಿವಾರಣೆ ಮಾಡಿಕೊಳ್ಳಲು ಅವು ಪೂರಕವಾಗುತ್ತವೆ. ನನಗಿಂತ ಉತ್ತಮರಿಲ್ಲ, ಸಮರೂ ಇಲ್ಲ  ಎನ್ನುವ ಭಾವನೆಯನ್ನು ಬಿಡಿ. ನೀವು ಅಂದುಕೊಂಡಿರುವ ಹಾಗೆ ನಿಮ್ಮ ಕೀರ್ತಿ ಯಾವ ಕಾರಣದಿಂದಾಗಿದೆ ಎಂದು ಅನ್ನಿಸುತ್ತಿದೆಯೋ, ಅದೇ ಕಾರಣಗಳಿಂದ ಇತರರೂ ಅವರ ಜೀವನದಲ್ಲಿ ಹೆಗ್ಗಳಿಕೆ ಪಡೆಯಬೇಕಾಗಿಲ್ಲ. ಅವರ ಸಾಧನೆಯ ಕ್ಷೇತ್ರ ಮತ್ತು ಮಿತಿ ಬೇರೆಯದೇ ಆಗಿರಬಹುದು.ಎಲ್ಲರಲ್ಲೂ ಉತ್ತಮ ಅಂಶಗಳಿರುತ್ತವೆ ಮತ್ತು ಸಾಮರ್ಥ್ಯಗಳೂ ಇರುತ್ತವೆ. ನೀವು ಒಂದೆರಡು ಅಂಶಗಳಲ್ಲಿ ಇತರರಿಗಿಂತ ಉತ್ತಮರಾಗಿದ್ದರೆ, ಉಳಿದವರು ಇನ್ಯಾವುದೋ ವಿಷಯದಲ್ಲಿ ನಿಮಗಿಂತ ಉತ್ತಮರಾಗಿರಬಹುದು. ಬೇರೆಯವರಲ್ಲೂ ವಿಶೇಷತೆ ಮತ್ತು ಗೌರವಿಸಬಹುದಾದ ಗುಣಗಳಿವೆ ಎನ್ನುವ ಭಾವನೆಯನ್ನು ತಳೆದರೆ, ನಿಮ್ಮ ವ್ಯಕ್ತಿತ್ವ ಕೂಡ ವಿಕಸನಗೊಳ್ಳುತ್ತದೆ.ಜೀವನ ಯಾರು ಮೇಲು ಯಾರು ಕೀಳೆಂದು ನಿರ್ಧರಿಸುವ ಸ್ಪರ್ಧೆಯಲ್ಲ. ಅದು ಇತರರೊಂದಿಗೆ ಮತ್ತು ವಿಶೇಷವಾಗಿ ನಮಗಿಂತ ವಿಭಿನ್ನರಾಗಿರುವವರೊಂದಿಗೆ ಹೊಂದಿಕೊಂಡು ಯಶಸ್ವಿಯಾಗಿ ಬಾಳುವ ಅನುಭವ. ಬೇರೆಯವರ ಬಗ್ಗೆ ಸಿಟ್ಟು, ಅಸೂಯೆ, ಅಸಹನೆ ವ್ಯಕ್ತಪಡಿಸಲಿಕ್ಕೇ ಜೀವನವನ್ನು ಮುಡಿಪಾಗಿಟ್ಟರೆ, ನಿಮ್ಮ ಜೀವನವನ್ನು ನೀವೇ ನಿಮ್ಮ ಕೈಯಾರೆ ಅಪೂರ್ಣ ಮತ್ತು ಅನರ್ಥಗೊಳಿಸಿದಂತಾಗುತ್ತದೆ.ಈ ಜೀವನ ನಿಮಗೆ ಸಿಕ್ಕ ಅತ್ಯುನ್ನತ ಬಳುವಳಿ ಎಂಬ ಭಾವನೆಯೊಂದಿಗೆ, ತಾಳ್ಮೆ, ಪ್ರೀತಿ ಮತ್ತು ಪರಸ್ಪರ ಗೌರವಾದರಗಳಿಂದ ಕೂಡಿದ ಪರಿಪೂರ್ಣ ಬಾಳನ್ನು ನಡೆಸಲು ಪ್ರಯತ್ನ ಪಟ್ಟರೆ, ನಿಮ್ಮ ಜೀವನ ನೆಮ್ಮದಿ ಮತ್ತು ಶಾಂತಿಪೂರ್ಣವಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.