ಮಂಗಳವಾರ, ಮೇ 17, 2022
25 °C

ನಮ್ಮ ಮೆಟ್ರೊಗೆ ಬೆಸ್ಕಾಂ ವಿದ್ಯುತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್‌ನ ತೀವ್ರ ಕೊರತೆ ಹಾಗೂ ಬೇಡಿಕೆ ನಡುವೆಯೂ ಇದೇ ತಿಂಗಳ 20ರಂದು ಉದ್ಘಾಟನೆಗೊಳ್ಳಲಿರುವ `ನಮ್ಮ ಮೆಟ್ರೊ~ ರೈಲು ಸಂಚಾರಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು (ಬೆಸ್ಕಾಂ) ಎರಡು ಮೆಗಾವಾಟ್ ವಿದ್ಯುತ್ ಪೂರೈಸುವ ಭರವಸೆ ನೀಡಿದೆ.ಇದರೊಂದಿಗೆ ಬಹುನಿರೀಕ್ಷಿತ `ನಮ್ಮ ಮೆಟ್ರೊ~ ರೈಲು ಸಂಚಾರಕ್ಕೆ ಯಾರು ವಿದ್ಯುತ್ ಪೂರೈಸುತ್ತಾರೆ ಎಂಬ ಪ್ರಶ್ನೆಗೆ ತೆರೆ ಬಿದ್ದಂತಾಗಿದೆ.`ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಮೊದಲ ಹಂತದ ಯೋಜನೆಗೆ (42.30 ಕಿ.ಮೀ.) ಒಟ್ಟು 19 ಮೆಗಾವಾಟ್ ವಿದ್ಯುತ್‌ನ ಅವಶ್ಯಕತೆಯಿದೆ. ಆದರೆ, ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ `ರೀಚ್-1~ಕ್ಕೆ (6.7 ಕಿ.ಮೀ. ಉದ್ದದ ಮಾರ್ಗ) 2 ಮೆಗಾವಾಟ್ ವಿದ್ಯುತ್ ಸಾಕು. ಇಷ್ಟು ವಿದ್ಯುತ್‌ನಿಂದಲೇ ಮೊದಲ ಹಂತದ ಯೋಜನೆಯನ್ನು ನಿರ್ವಹಿಸಬಹುದು~ ಎಂದು `ಬೆಸ್ಕಾಂ~ನ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ತಿಳಿಸಿದರು.ವಿದ್ಯುತ್‌ನ ಕೊರತೆ ನಡುವೆಯೂ ಬಿಎಂಆರ್‌ಸಿಎಲ್‌ಗೆ ವಿದ್ಯುತ್ ಪೂರೈಸಲು ಸಾಧ್ಯವೇ ಎಂಬ ಪ್ರಶ್ನೆಗೆ, `ಐಟಿಪಿಎಲ್‌ನಂತಹ ಇತರ ಹಲವು ಯೋಜನೆಗಳಿಗೆ ನಾವು 10 ಮೆಗಾವಾಟ್‌ವರೆಗೆ ವಿದ್ಯುತ್ ಪೂರೈಸುತ್ತಿರುವುದರಿಂದ `ನಮ್ಮ ಮೆಟ್ರೊ~ಗೆ ಕೇವಲ ಎರಡು ಮೆಗಾವಾಟ್ ವಿದ್ಯುತ್ ನೀಡುವುದು ಸಮಸ್ಯೆಯೇನಲ್ಲ~ ಎಂದು ಪ್ರತಿಕ್ರಿಯಿಸಿದರು.ಕಡಿಮೆ ದರದಲ್ಲಿ ವಿದ್ಯುತ್ ಪೂರೈಸುವ ಸಂಬಂಧ ಬಿಎಂಆರ್‌ಸಿಎಲ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಣಿವಣ್ಣನ್ ಗಮನಸೆಳೆದಾಗ, `ಇದೇನು ವಾಣಿಜ್ಯ ಯೋಜನೆಯಲ್ಲ, ಸಾರ್ವಜನಿಕ ಸೇವಾ ಯೋಜನೆ. ಹೀಗಾಗಿ, ಪ್ರತಿ ಯೂನಿಟ್‌ಗೆ 5.50 ರೂಪಾಯಿ ದರದಲ್ಲಿಯೇ ವಿದ್ಯುತ್ ಪೂರೈಸುತ್ತಿದ್ದೇವೆ~ ಎಂದು ಹೇಳಿದರು.ಈ ಮಧ್ಯೆ, `ಮೆಟ್ರೊ ನಿಲ್ದಾಣಗಳಲ್ಲಿ ಸ್ಥಾಪನೆಯಾಗುವ ವಾಣಿಜ್ಯ ಮಳಿಗೆಗಳು ವಾಣಿಜ್ಯ ದರದಲ್ಲಿಯೇ ವಿದ್ಯುತ್ ದರ ಪಾವತಿಸಬೇಕಾಗುತ್ತದೆ. ಏಕೆಂದರೆ, ಇವೆಲ್ಲಾ ನಮ್ಮ ಮೆಟ್ರೊ ಯೋಜನೆಯಿಂದ ಪ್ರತ್ಯೇಕವಾದ ಸ್ವತಂತ್ರ ಸಂಸ್ಥೆಗಳು~ ಎಂದು ಮಣಿವಣ್ಣನ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.