ಶುಕ್ರವಾರ, ಮೇ 14, 2021
25 °C

`ನಮ್ಮ ಶಾಲೆಯಲ್ಲೂ ತೋಟ ಮಾಡ್ತೀವಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಪ್ರತಿಯೊಬ್ಬರ ಕೈಯಲ್ಲಿ ಸಸಿಯಿತ್ತು. ಕೆಲವರು ಸಸಿಯನ್ನು ಮಣ್ಣಿನಲ್ಲಿ ನೆಟ್ಟು ನೀರುಣಿಸಲು ಕಾತರರಾಗಿದ್ದರೆ, ಇನ್ನೂ ಕೆಲವರು ಸಸಿಗಳನ್ನು ಹೊತ್ತು ತರುವಲ್ಲಿ ಮಗ್ನರಾಗಿದ್ದರು. `ಇದು ನನ್ನ ಗಿಡ. ನಾನೇ ನೀರು ಹಾಕಿ, ಪ್ರತಿ ದಿನ ಆರೈಕೆ ಮಾಡ್ತೀನಿ' ಎಂದು ವಿದ್ಯಾರ್ಥಿನಿ ಹೇಳಿದರೆ, `ನಮ್ಮ ಮನೆ ಆವರಣದಲ್ಲಿ ಪುಟ್ಟ ಪುಟ್ಟ ಗಿಡಗಳನ್ನು ಬೆಳೆಸಿದ ಹಾಗೆಯೇ ಶಾಲೆಯಲ್ಲೂ ಚೆಂದದ ತೋಟ ಮಾಡ್ತೀನಿ' ಎಂದು ವಿದ್ಯಾರ್ಥಿ ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದ. ಅವಕಾಶ ಸಿಕ್ಕಿದರೆ, ಶಾಲೆಯ ಇಡೀ ಆವರಣವನ್ನೇ ಚೆಂದದ ಹೂದೋಟ ಮಾಡುವ ಉತ್ಸಾಹದಲ್ಲಿ ಅವರಿದ್ದರು.ವಿದ್ಯಾರ್ಥಿಗಳ ಈ ಸಂಭ್ರಮ-ಸಡಗರ ಕಂಡು ಬಂದಿದ್ದು, ತಾಲ್ಲೂಕಿನ ಗಿಡ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ. ಇದಕ್ಕೆ ಕಾರಣವಾಗಿದ್ದು, ವಿಶ್ವ ಪರಿಸರ ದಿನಾಚರಣೆ. ಶಾಲೆಯ ಶಿಕ್ಷಕರು ಮಕ್ಕಳಿಗೆ ಕೇವಲ ಪರಿಸರ ಪಾಠಗಳನ್ನು ಮಾಡದೆ ಅವರ ಕೈಯಿಂದಲೇ ಸಸಿಗಳನ್ನು ನೆಡೆಸಿದರು. ಒಂದೊಂದು ಜಾತಿ ಸಸಿಗಳನ್ನು ನೆಡುವಾಗಲೂ ಅದರ ಮಹತ್ವವನ್ನು ತಿಳಿಸಿದರು. ಸಸಿಗಳನ್ನು ನೆಡುವ ವಿದ್ಯಾರ್ಥಿಗೆ ಆಯಾ ಸಸಿಯ ಪೋಷಣೆ ಜವಾಬ್ದಾರಿ ನೀಡಲಾಯಿತು. ಪೋಷಣೆ ಕುರಿತು ಮಾಹಿತಿ ನೀಡಲಾಯಿತು.ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮೊದಲೇ ತೀರ್ಮಾನಿಸಿದ್ದ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಬೆಳಿಗ್ಗೆ ತಾಲ್ಲೂಕಿನ ಸುಲ್ತಾನಪೇಟೆಯ ಸಸ್ಯಕ್ಷೇತ್ರಕ್ಕೆ ತೆರಳಿ ಸುಮಾರು 200 ವಿವಿಧ ಜಾತಿಯ ಸಸಿಗಳನ್ನು ತಂದರು. ನಂತರ ಶಾಲಾ ಆವರಣದಲ್ಲಿ ಗುಂಡಿಯನ್ನು ತೋಡಿ, ಒಂದೊಂದೇ ಸಸಿಗಳನ್ನು ನೆಟ್ಟರು. ದೈನಂದಿನ ಪಾಠದ ಜೊತೆಗೆ ಪರಿಸರದ ಪಾಠವನ್ನು ಕಲಿತ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಚೆಂದದ ಹೂದೋಟ ಅಭಿವೃದ್ಧಿಪಡಿಸುವ ಕನಸನ್ನು ಹಂಚಿಕೊಂಡರು. ಅವರ ಕನಸುಗಳಿಗೆ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಜೀವ ತುಂಬುವಂತೆ ಪ್ರೋತ್ಸಾಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಮುಖ್ಯ ಶಿಕ್ಷಕಿ ಎಸ್.ಆರ್.ಪ್ರಮೀಳಾ, ಮಕ್ಕಳಿಗೆ ಪಠ್ಯಶಿಕ್ಷಣ ನೀಡಿದರೆ ಸಾಲದು, ಅವರಲ್ಲಿ ಪರಿಸರದ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದೇವೆ. ಸ್ವತಃ ಮಕ್ಕಳೇ ಗಿಡಗಳನ್ನು ನೆಟ್ಟು ಚೆಂದದ ತೋಟ ಅಭಿವೃದ್ಧಿಪಡಿಸಿದರೆ, ಅದು ಇನ್ನೂ ವಿಶೇಷವಾಗಿರುತ್ತದೆ. ಶಾಲೆ ಹೆಮ್ಮೆಗೂ ಕಾರಣವಾಗುತ್ತದೆ ಎಂದರು. ಶಿಕ್ಷಕರಾದ ಮುನಿರಾಜು, ಆನಂದ್, ನಾಗರಾಜ್, ಮಾಧವಿ, ಶಾರದಮ್ಮ, ದಯಾನಂದ, ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ, ಚಲಪತಿಗೌಡ, ವಿ.ಆರ್.ಬಿಂಬಾ, ಸಿಬ್ಬಂದಿ ವೆಂಕಟರಾಮ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.