ಸೋಮವಾರ, ಜನವರಿ 20, 2020
26 °C

ನವಮಾಸದ ಬಳಿಕ ಕಲ್ಮಾಡಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್ಎಸ್): 2010ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಕ್ರೀಡಾಕೂಟ ಸಂಘಟನಾ ಸಮಿತಿಯ ಮಾಜಿ ಮುಖ್ಯಸ್ಥ, ಸಂಸತ್ ಸದಸ್ಯ ಸುರೇಶ ಕಲ್ಮಾಡಿ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತು.ಕಲ್ಮಾಡಿ ಅವರ ಸಹಾಯಕ ವಿ.ಕೆ. ವರ್ಮಾ ಅವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಐದು ಲಕ್ಷ ರೂಪಾಯಿಗಳ ವೈಯಕ್ತಿಕ ಖಾತರಿ ಮತ್ತು ಅಷ್ಟೇ ಮೊತ್ತದ ಭದ್ರತಾ ಖಾತರಿ ಆಧಾರದಲ್ಲಿ ಜಾಮೀನು ನೀಡಲು ನ್ಯಾಯಾಲಯ ಅನುಮತಿ ನೀಡಿತು.ಕಲ್ಮಾಡಿ ಅವರನ್ನು ಕಳೆದ ವರ್ಷ ಏಪ್ರಿಲ್ 26ರಂದು 141 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಸ್ವಿಸ್ ಟೈಮ್ಸ್ ಒಮೆಗಾ ಸಂಸ್ಥೆಗೆ ಟೈಮಿಂಗ್ ಸ್ಕೋರಿಂಗ್ ರಿಸಲ್ಟ್ ಸಿಸ್ಟಮ್ ಅಳವಡಿಕೆ ಗುತ್ತಿಗೆ ನೀಡಿಕೆಯಲ್ಲಿ ವಹಿಸಿದ ಪಾತ್ರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈ ಗುತ್ತಿಗೆಯಿಂದಾಗಿ ಸರ್ಕಾರಿ ಬೊಕ್ಕಸಕ್ಕೆ 95 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಟವಾಗಿದೆ ಎಂದು ಆಪಾದಿಸಲಾಗಿತ್ತು.ಕೇಂದ್ರೀಯ ತನಿಖಾ ದಳವು (ಸಿಬಿಐ) ಕಲ್ಮಾಡಿ ಮತ್ತು ಅವರ ಸಹಾಯಕ ವರ್ಮಾ ಅವರಿಗೆ ಜಾಮೀನು ಮಂಜೂರಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು.2ಜಿ ತರಂಗಾಂತರ ಪ್ರಕರಣದಲ್ಲಿ ~ಜಾಮೀನು ನಿಯಮವಾಗಬೇಕು ಮತ್ತು ಸೆರೆವಾಸ ಅಪವಾದವಾಗಬೇಕು~ ಎಂಬುದಾಗಿ ಸುಪ್ರೀಂಕೋರ್ಟ್ ವಿಶ್ಲೇಷಿಸಿದ್ದನ್ನು ಆಧರಿಸಿ ಕಲ್ಮಾಡಿ ಮತ್ತು ವರ್ಮಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ವಿಚಾರಣಾ ನ್ಯಾಯಾಲಯವು ಕಳೆದ ವರ್ಷ ಜೂನ್ ತಿಂಗಳಲ್ಲಿ ಕಲ್ಮಾಡಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಧಿಗಳ ಅಡಿಯಲ್ಲಿ ಆಪಾದಿತರು ಮತ್ತು ಎರಡು ಕಂಪೆನಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಒಳಸಂಚು, ಫೋರ್ಜರಿ ಆರೋಪಗಳಿಗಾಗಿ ಪ್ರಕರಣ ದಾಖಲಿಸಲಾಗಿತ್ತು.

ಪ್ರತಿಕ್ರಿಯಿಸಿ (+)