ಗುರುವಾರ , ಮೇ 26, 2022
23 °C

ನವಯುಗ ವಿಕಾಸದ ಕಾರ್ಯ ಅನುಕರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಪರಿಸರ ನೈರ್ಮಲೀಕರಣ, ಶಾಲೆಗಳ ಸುಧಾರಣೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಬಡವರಿಗೆ ನೆರವು ಮುಂತಾದ ಹತ್ತು ಹಲವು ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಟ್ಟಣದ ಪ್ರಭುವಾಡಿಯ ನವಯುಗ ವಿಕಾಸ ಕಮಿಟಿಯ ಸಾಮಾಜಿಕ ಸೇವೆ ಅನುಕರಣೀಯವಾಗಿದೆ.ಸುಮಾರು 100 ಜನ ಸಮಾನ ಮನಸ್ಕ ಯುವಕರ ತಂಡ ಕಳೆದ ನಾಲ್ಕಾರು ತಿಂಗಳುಗಳಿಂದ ತೆರೆಮರೆಯಲ್ಲಿಯೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದು, ಪರಿಸರದಲ್ಲಿ ಸ್ವಚ್ಛತೆ, ಶಾಲೆಗಳಿಗೆ ಮತ್ತು ಮಂದಿರಗಳ ಆವರಣಗಳನ್ನು ಶುಚಿಗೊಳಿಸಿ ಸುಣ್ಣಬಣ್ಣ ಬಳಿಯುವುದು ಮುಂತಾದ ಕಾರ್ಯಗಳನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.ಇದಕ್ಕೆಲ್ಲಾ ತಾವು ದುಡಿದು ಸಂಪಾದಿಸಿದ ಹಣದಲ್ಲಿಯೇ ಸ್ವಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿ ವಿನಿಯೋಗಿಸುತ್ತಾರೆ.ಈ ಯುವಕರ ಕಾರ್ಯಗಳಿಗೆ ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಪ್ರಭುವಾಡಿಯ ಹಿರಿಯರು ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತಿದ್ದಾರೆ. ಪಟ್ಟಣದ ಎನ್-ಎಂ. ರಸ್ತೆಗೆ ಹೊಂದಿಕೊಂಡಿರುವ ಈರಪ್ಪ ದೇವರ ಮಂದಿರದ ಪರಿಸರವನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಹಚ್ಚಿ ಅಲಂಕೃತಗೊಳಿಸಿದ್ದಾರೆ. ಈ ಮಂದಿರಕ್ಕೆ ಆವರಣ ಗೋಡೆ ಮತ್ತು ಶೆಡ್ ನಿರ್ಮಿಸಲು ಪುರಸಭೆ ಸಹಕಾರ ನೀಡಬೇಕು ಎಂದು ಕಮಿಟಿ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರಭುವಾಡಿಯ ತೆರೆದ ಬಾವಿ, ಶಾಲೆ ಪರಿಸರವನ್ನೂ ಯುವಕರು ಶ್ರಮದಾನದ ಮೂಲಕ ಶುಚಿಗೊಳಿಸಿದ್ದಾರೆ.ವಿಶೇಷವೆಂದರೆ ಈ ಸಂಘಟನೆಯಲ್ಲಿ ಜಾತಿಮತ ಭೇದವನ್ನು ಮರೆತು ಎಲ್ಲಾ ಯುವಕರು ಒಂದಾಗಿ ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ವಾರದಲ್ಲಿ ಒಂದೆರಡು ದಿನ ಎಲ್ಲ ಯುವಕರು ಸೇರಿ ಶ್ರಮದಾನ ಮಾಡುತ್ತಾರೆ. ಈ ಸೇವೆಯನ್ನು ನಿರಂತರವಾಗಿ ಮುಂದುವರಿಸಿ ಕೊಂಡು ಪಟ್ಟಣದಾದ್ಯಂತ ವಿಸ್ತರಿಸುವುದಾಗಿ ಕಮಿಟಿ ಸದಸ್ಯರು ಹೇಳುತ್ತಾರೆ.ಸಾಮಾಜಿಕ ಸೇವೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಎಂಬ ಭಾಷಣಗಳನ್ನು ಕೇಳುತ್ತೇವೆ. ಆದರೆ, ಪಟ್ಟಣದಲ್ಲಿ ಅಂತಹ ಆಶಯಗಳನ್ನು ನವಯುವ ವಿಕಾಸ ಕಮಿಟಿಯ ಮೂಲಕ ಯುವಕರು ಸಾಕಾರಗೊಳಿಸುತ್ತಿದ್ದಾರೆ. ನಿಜವಾಗಿಯೂ ಇವರಿಗೆ ಶಹಬ್ಬಾಷ್ ! ಹೇಳಲೇ ಬೇಕೆಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.