ಶುಕ್ರವಾರ, ಮೇ 14, 2021
21 °C
ಜಿಎಸ್‌ಎಸ್ ಕಾವ್ಯದ ಸಂವೇದನೆ: ಬರಗೂರು ಬಣ್ಣನೆ

ನವೋದಯದ ರಮ್ಯತೆ, ಬಂಡಾಯದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನವೋದಯ ಸಾಹಿತ್ಯದ ರಮ್ಯತೆ ಹಾಗೂ ಬಂಡಾಯದ ಆಕ್ರೋಶದವರೆಗೆ ಜಿ.ಎಸ್.ಶಿವರುದ್ರಪ್ಪ ಅವರ ಸಂವೇದನೆ ಹರಡಿದೆ' ಎಂದು ವಿಮರ್ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯವು ಜ್ಞಾನಭಾರತಿ ಆವರಣದಲ್ಲಿರುವ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ `ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಸಮಗ್ರ ಸಾಹಿತ್ಯ' ವಿಷಯ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ವೈಪರೀತ್ಯವಲ್ಲದ ಆಧುನಿಕ ಅಂಶಗಳು ಹಾಗೂ ಜಡತ್ವವಿಲ್ಲದ ಆಧುನಿಕ ಪೂರ್ವ ವಿಚಾರಗಳು ಒಟ್ಟಿಗೆ ಸೇರಿ ಜಿಎಸ್‌ಎಸ್ ಅವರ ದೃಷ್ಟಿಕೋನ ರೂಪುಗೊಂಡಿದೆ. ಚರಿತ್ರೆಯ ಪರಂಪರೆಯ ಜತೆಯಲ್ಲಿ ಹೆಜ್ಜೆ ಹಾಕುತ್ತಲೇ ಜಡತ್ವವನ್ನು  ಮೀರಿದ ಚಲನಶೀಲತೆಯನ್ನು ಅವರು ಉಳಿಸಿಕೊಂಡಿದ್ದಾರೆ. ಹಾಗಾಗಿ ಅವರದ್ದು ಎಲ್ಲರೂ ಒಪ್ಪಬಹುದಾದ ಹದಗೊಂಡ ಚಿಂತನೆ' ಎಂದು ವ್ಯಾಖ್ಯಾನಿಸಿದರು.`ಇಂದಿಗೂ ಜಿಎಸ್‌ಎಸ್‌ಯೆಂದರೆ `ಸಮನ್ವಯ ಕವಿ' ಎಂಬ ಮಾತಿದೆ. ಈ ಮಾತನ್ನು ಕೇಳಿದರೆ ಸ್ವತಃ ಜಿಎಸ್‌ಎಸ್‌ಗೂ ಕೋಪ ಬರಬಹುದು. ಆಧುನಿಕತೆ ಮತ್ತು ಪರಂಪರೆಯ ನಡುವೆ ಅವರೆಂದೂ ತೇಪೆ ಹಾಕುವ ಕೆಲಸ ಮಾಡಲಿಲ್ಲ. ಸಮನ್ವಯ ಕವಿ ಎನ್ನುವುದಕ್ಕಿಂತಲೂ ಬದಲಾದ ಸಾಂಸ್ಕೃತಿಕ ಸನ್ನಿವೇಶದೊಂದಿಗೆ ಅನುಸಂಧಾನ ನಡೆಸಿದ ಕವಿ ಎಂದು ಬಣ್ಣಿಸಬಹುದು' ಎಂದರು.`ಕೃಷಿ ಪ್ರಧಾನವೆಂದು ಹೇಳಿಕೊಳ್ಳುವ ಈ ದೇಶವು ಉದ್ಯಮ ಪ್ರಧಾನವಾಗುತ್ತಿದ್ದು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಅಲ್ಲಗೆಳೆಯುವ ದೊಡ್ಡಪಡೆಯೊಂದು ಸೃಷ್ಟಿಯಾಗಿದೆ. ಪುಸ್ತಕಗಳನ್ನು ಕೊಂಡುಕೊಳ್ಳುವ ಪ್ರವೃತ್ತಿಯ ನಡುವೆ `ಕಂಡುಕೊಳ್ಳುವವರ' ಸಂಖ್ಯೆ ಹೆಚ್ಚಾಗಬೇಕು' ಎಂದರು.`ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಿದ ಜಿಎಸ್‌ಎಸ್ ಇತರೆ ವಿಶ್ವವಿದ್ಯಾಲಯಗಳು ಬೆಂಗಳೂರು ವಿ.ವಿ ಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದರು. ಕಾವ್ಯದ ಜತೆಯಲ್ಲಿಯೇ ವಿಮರ್ಶೆ, ಮೀಮಾಂಸೆ ಕ್ಷೇತ್ರದಲ್ಲಿ ಕೈಯಾಡಿಸುವ ಮೂಲಕ ಹೊಸ ಮಾದರಿ ಒದಗಿಸಿದರು' ಎಂದರು.ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಮಾತನಾಡಿ, `ಎರಡು ವರ್ಷಗಳಿಗೊಮ್ಮೆ ಬದಲಾಗುವ ಅಥವಾ ಪೀಠಾಧ್ಯಕ್ಷರಾಗಿಯೇ ಬೇರೂರುವ ಅಕಾಡೆಮಿ, ಅಧ್ಯಯನ ಕೇಂದ್ರಗಳ ನಿರ್ದೇಶಕರುಗಳ ಸಾಲಿಗೆ ಜಿ.ಎಸ್.ಶಿವರುದ್ರಪ್ಪ ಸೇರದೇ ಕನ್ನಡ ಅಧ್ಯಯನ ಕೇಂದ್ರದ ಬೆಳವಣಿಗೆಗೆ ಹೊಸ ದಿಕ್ಸೂಚಿಯನ್ನು ಒದಗಿಸಿದರು' ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿ.ಬಿ.ಹೊನ್ನು ಸಿದ್ದಾರ್ಥ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.