ಶನಿವಾರ, ಮಾರ್ಚ್ 6, 2021
32 °C

ನಾಗಮಂಗಲ: 251 ಮತಕೇಂದ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: 251 ಮತಕೇಂದ್ರಗಳು

ನಾಗಮಂಗಲ: ಸುದ್ದಿ ಮಾಧ್ಯಮಗಳು ಕನ್ನಡಿ ಇದ್ದಂತೆ. ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದ ಓರೆಕೋರೆ ತಿದ್ದುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದು ಸಹಾಯಕ ಚುನಾವಣಾಧಿಕಾರಿ ಪುಷ್ಪಾ ಅಭಿಪ್ರಾಯಪಟ್ಟರು.ಪಟ್ಟಣದ ಮಿನಿವಿಧಾನಸೌಧದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಏಪ್ರಿಲ್‌ 17ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಕೆಲಸ ಸಮರ್ಪಕವಾಗಿ ನಡೆಯಲು ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ನುಡಿದರು.ನಾಗಮಂಗಲ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 251 ಮತಕೇಂದ್ರಗಳಿವೆ. ಒಟ್ಟು 2,03,930 ಮತದಾರರಿದ್ದಾರೆ. ಇವರಲ್ಲಿ 1,02,952 ಪುರುಷರು ಮತ್ತು 1,00,969 ಮಹಿಳೆಯರು ಹಾಗೂ 9 ಮಂದಿ ಇತರೆ ಮತದಾರರಿದ್ದಾರೆ. 1,200ಕ್ಕೂ ಹೆಚ್ಚು ಮತದಾರರಿರುವ ಮತಕೇಂದ್ರಗಳಲ್ಲಿ 10 ಸಹಾಯಕ ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. 251 ಮತಕೇಂದ್ರಗಳಲ್ಲಿ 53 ಅತಿಸೂಕ್ಷ್ಮ, 38 ಸೂಕ್ಷ್ಮ ಹಾಗೂ 160 ಸಾಮಾನ್ಯ ಮತಕೇಂದ್ರಗಳೆಂದು ಗುರುತಿಸಲಾಗಿದೆ ಎಂದರು.ಕ್ಷೇತ್ರದಾದ್ಯಂತ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು 15 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತಾಲ್ಲೂಕಿನ ಗಡಿ ಭಾಗಗಳಾದ ಕದಬಹಳ್ಳಿ, ಗೊಂದಿಹಳ್ಳಿ, ಚಿಣ್ಯ, ಅದ್ದೀಹಳ್ಳಿ ಕ್ರಾಸ್ ಹಾಗೂ ಚುಂಚನಹಳ್ಳಿ ಬಳಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ನಿಗಾವಹಿಸಲು 1 ವೀಡಿಯೋ ಜಾಗೃತದಳ ಹಾಗೂ 1 ವೀಡಿಯೋ ವಿಚಕ್ಷಣ ತಂಡ ರಚಿಸಲಾಗಿದೆ.251 ಮತಗಟ್ಟೆ ಹಾಗೂ 10 ಸಹಾಯಕ  ಮತಗಟ್ಟೆಗಳಿಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ, 3 ಮತಗಟ್ಟೆ ಸಿಬ್ಬಂದಿ ಮತ್ತು ಒಬ್ಬ ಗ್ರೂಪ್ ಡಿ. ನೌಕರ ಹಾಗೂ ಅಗತ್ಯತೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲು ಕ್ರಮ ವಹಿಸಲಾಗುವುದು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳಿಗೆ ಮತಗಟ್ಟೆ ಸಿಬ್ಬಂದಿಯನ್ನು ಕೊಂಡೊಯ್ಯಲು 32 ಬಸ್‌ಗಳು, 10 ಮ್ಯಾಕ್ಸಿಕ್ಯಾಬ್‌ಗಳು ಮತ್ತು 11 ಜೀಪ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು.ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ತಾಲ್ಲೂಕು ಕಚೇರಿಯಲ್ಲಿ ದೂರು ಸಲ್ಲಿಸಲು ಅಥವಾ ಯಾವುದೇ ಮಾಹಿತಿ ಪಡೆಯಲು ಸಹಾಯವಾಣಿ ಕೇಂದ್ರ ದೂ: (08234– 285045) ತೆರೆಯಲಾಗಿದೆ. ದೂರು ಸ್ವೀಕಾರಕ್ಕೆ 08234–-286033 ದೂರವಾಣಿ ಸ್ಥಾಪಿಸಲಾಗಿದೆ.ಕಾನೂನು ಬಾಹಿರ ಚುನಾವಣಾ ಚಟುವಟಿಕೆಗಳು ಕ್ಷೇತ್ರದ ಯಾವುದೇ ಮತಗಟ್ಟೆ ವ್ಯಾಪ್ತಿಯಲ್ಲಿ ಕಂಡುಬಂದಲ್ಲಿ ತಕ್ಷಣ ಕರೆ ಮಾಡಿ ದೂರು ನೀಡಲು ಮುಂದಾಗಬೇಕು.ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಶಿವಲಿಂಗಮೂರ್ತಿ, ಸಿಪಿಐ ವಸಂತ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.