ಮಂಗಳವಾರ, ಮೇ 11, 2021
27 °C

ನಾಗರಿಕ ಪ್ರಜ್ಞೆಯಿಂದ ರಾಜಕೀಯ ಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರಿಕ ಪ್ರಜ್ಞೆಯಿಂದ ರಾಜಕೀಯ ಅರಿವು

ಬೆಂಗಳೂರು: `ಜಾತಿ ಹಾಗೂ ಹಣ ಬಲ ಹೊಂದಿರುವವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡದಂತೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕರೆ ನೀಡಿದರು.ಬೆಂಗಳೂರು ವಿಶ್ವವಿದ್ಯಾಲಯವು ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಂಗಳೂರು ನಾಗರಿಕ ಪ್ರಜ್ಞೆ ದಿನ ಕುರಿತ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.`ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ ರಾಜಕೀಯ ಅರಿವು ಸಹ ಮೂಡಲಿದೆ. ಭ್ರಷ್ಟಾಚಾರ ಎಂಬುದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಇದನ್ನು ತಡೆಗಟ್ಟಲು ಯತ್ನಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾಯಿಸುವುದು ದುರದೃಷ್ಟಕರ~ ಎಂದರು.`ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ದನಿಯೆತ್ತಿದಾಗ ಕೆಲವರು ನನ್ನನ್ನು ರಾಜಕಾರಣಿ ಎಂದು ನಿಂದಿಸಿದರು. ಹೌದು. ಈ ಸ್ಥಾನಕ್ಕೆ ಬರುವ ಮುನ್ನ ನಾನು ರಾಜಕಾರಣಿಯೇ~ ಎಂದು ತಿರುಗೇಟು ನೀಡಿದರು.`ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದಾಗಲೂ ಹಲವೆಡೆ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸರ್ಕಾರದ ಮುಖ್ಯಸ್ಥರ ವಿರುದ್ಧ ಈ ರೀತಿ ಪ್ರತಿಭಟನೆ ನಡೆಸುವುದು ಸರಿಯೇ~ ಎಂದರು.ಬಿಬಿಎಂಪಿ ವಿಫಲ: `ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪಾಲಿಕೆ ವಿಫಲವಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದಾಗ ಹಣದ ಕೊರತೆ ಇರುವುದಾಗಿ ತಿಳಿಸಿದರು. ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುತ್ತೇನೆ~ ಎಂದರು.`ಮೆಟ್ರೊ ರೈಲು ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಯೋಜನಾ ಆಯೋಗವು ಹಣ ಬಿಡುಗಡೆ ಮಾಡಿದ್ದು, ಸಮರ್ಪಕ ಬಳಕೆಗೆ ಮುಂದಾಗಬೇಕು~ ಎಂದು ಹೇಳಿದರು.ಜನಾಗ್ರಹ ಸಂಸ್ಥೆಯ ಸಹ ಸಂಸ್ಥಾಪಕ ರಮೇಶ್ ರಾಮನಾಥನ್, `ಬೆಂಗಳೂರಿನ ಸಮಸ್ಯೆಗಳಿಗೆ ಬಿಬಿಎಂಪಿ ಅಥವಾ ಇತರೆ ಸಂಸ್ಥೆಯನ್ನು ನಿಂದಿಸುವುದು ಸರಿಯಲ್ಲ. ವ್ಯವಸ್ಥೆಯ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು. ಆ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.

 

ಬೆಂಗಳೂರು ವಿ.ವಿ ಆರಂಭಿಸಲಿರುವ ನಾಗರಿಕ ಪ್ರಜ್ಞೆ ಕುರಿತ ವಿಷಯಕ್ಕೆ ಪಠ್ಯ ಹಾಗೂ ಇತರೆ ಪೂರಕ ಮಾಹಿತಿಯನ್ನು ಸಂಸ್ಥೆ ಜನವರಿ ವೇಳೆಗೆ ನೀಡಲಿದೆ~ ಎಂದರು. ಬೆಂಗಳೂರು ವಿ.ವಿ ಕುಲಪತಿ ಡಾ.ಎನ್. ಪ್ರಭುದೇವ, ಕುಲಸಚಿವ ಡಾ.ಎನ್. ರಂಗಸ್ವಾಮಿ, ಕುಲಸಚಿವ (ಮೌಲ್ಯಮಾಪನ) ಡಾ.ಟಿ.ಆರ್. ಸುಬ್ರಮಣ್ಯ ಉಪಸ್ಥಿತರಿದ್ದರು.ಸ್ವಯಂಪ್ರೇರಿತ ಕ್ರಮವಿಲ್ಲ


`ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ ಕೇಳಿಬಂದಿರುವ ಆರೋಪದ ಹಿನ್ನೆಲೆಯಲ್ಲಿ ನಾನು ಯಾವುದೇ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವುದಿಲ್ಲ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರತಿಕ್ರಿಯಿಸಿದರು. `ಯೋಗೀಶ್ವರ್ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡರೆ ಬಳಿಕ ನನ್ನ ವ್ಯಾಪ್ತಿಯಲ್ಲಿನ ಪ್ರಕ್ರಿಯೆಯನ್ನು ವಿಳಂಬ ಮಾಡದೇ ನಿರ್ವಹಿಸುತ್ತೇನೆ~ ಎಂದರು.ರಾಜ್ಯ ಮಾಹಿತಿ ಆಯುಕ್ತ ಎಚ್.ಎನ್. ಕೃಷ್ಣ ಅವರ ಜಾಮೀನು ಅರ್ಜಿ ವಜಾಗೊಂಡಿದ್ದರೂ ಸೇವೆಯಲ್ಲಿ ಮುಂದುವರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಗಮನ ಹರಿಸಲಾಗುವುದು~ ಎಂದು ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.