ಶುಕ್ರವಾರ, ಮೇ 14, 2021
28 °C

ನಾಚಿಕೆಗೇಡಿನ ಸಂಗತಿ: ಲಾರ್ಗಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಟಗಾರರು ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರುಹಾಜರಾಗುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಮಹೇಂದ್ರ ಸಿಂಗ್ ದೋನಿ ಬಳಗದ ವರ್ತನೆ `ನಾಚಿಕೆಗೇಡಿನ ಸಂಗತಿ~ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲಾರ್ಗಟ್ ಹೇಳಿದ್ದಾರೆ.ಈ ಸಮಾರಂಭದ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬಹಳ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಸೂಕ್ತ ಸಮಯದಲ್ಲಿ ಆಹ್ವಾನ ಪತ್ರಿಕೆ ಲಭಿಸದ ಕಾರಣ ಸಮಾರಂಭಕ್ಕೆ ಆಗಮಿಸಲು ಆಗಲಿಲ್ಲ ಎಂಬ ಕಾರಣವನ್ನು ಭಾರತ ತಂಡದ ಮ್ಯಾನೇಜರ್ ಶಿವಲಾಲ್ ಯಾದವ್ ನೀಡಿದ್ದರು.ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ರಾತ್ರಿ ಲಂಡನ್‌ನಲ್ಲಿ ನಡೆದಿತ್ತು. `ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್~ ಪ್ರಶಸ್ತಿ ಗೆದ್ದ ಮಹೇಂದ್ರ ಸಿಂಗ್ ದೋನಿ ಒಳಗೊಂಡಂತೆ ಭಾರತದ ಯಾರೂ ಸಮಾರಂಭದಲ್ಲಿ ಹಾಜರಿರಲಿಲ್ಲ.`ಕಳೆದ ರಾತ್ರಿ ನಡೆದ ಸಮಾರಂಭದಲ್ಲಿ ಭಾರತದ ಆಟಗಾರರು ಪಾಲ್ಗೊಳ್ಳದ್ದು ನಿರಾಸೆ ಉಂಟುಮಾಡಿದೆ. ನಾವು ಕೆಲವು ವಾರಗಳ ಹಿಂದೆಯೇ ಭಾರತ ತಂಡವನ್ನು ಈ ಸಮಾರಂಭಕ್ಕೆ ಆಹ್ವಾನಿಸಿದ್ದೆವು. ಮಾತ್ರವಲ್ಲ, ಸಮಾರಂಭದಲ್ಲಿ ಪಾಲ್ಗೊಳ್ಳುವ ಭರವಸೆಯನ್ನೂ ಬಿಸಿಸಿಐ ನೀಡಿತ್ತು. ಅದೇ ರೀತಿ ಭಾರತದ ಆಟಗಾರರು ಲಂಡನ್‌ನಲ್ಲಿ ಇರುವ ದಿನವನ್ನು ನೋಡಿಕೊಂಡೇ ಸಮಾರಂಭದ ದಿನಾಂಕ ನಿಗದಿಪಡಿಸಿದ್ದೆವು. ಏನೇ ಆಗಲಿ, ಭಾರತದ ಆಟಗಾರರು ಆಗಮಿಸಲಿಲ್ಲ. ಆದರೆ ಇಂಗ್ಲೆಂಡ್ ತಂಡದವರು ಪಾಲ್ಗೊಂಡಿದ್ದರು~ ಎಂದು ಲಾರ್ಗಟ್ ತಿಳಿಸಿದ್ದಾರೆ.`ಸಮಾರಂಭದಲ್ಲಿ ದೊಡ್ಡ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳು ನೆರೆದಿದ್ದರು. ಭಾರತದ ಆಟಗಾರರು ಆಗಮಿಸದ ಕಾರಣ ಎಲ್ಲರಿಗೂ ನಿರಾಸೆ ಉಂಟಾಯಿತು~ ಎಂದ ಲಾರ್ಗಟ್, `ಭಾರತದಂತಹ ತಂಡದಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.`ಇದು ನಾಚಿಕೆಗೇಡು ಹಾಗೂ ನಿರಾಸೆ ಉಂಟುಮಾಡುವ ವಿಚಾರ. ಏಕೆಂದರೆ ಭಾರತ ಇತ್ತೀಚಿನ ದಿನಗಳವರೆಗೆ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಅದೇ ರೀತಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಈ ಕಾರಣ ಹೆಚ್ಚಿನ ಅಭಿಮಾನಿಗಳು ಭಾರತದ ಆಟಗಾರರ ಆಗಮನದ ನಿರೀಕ್ಷೆಯಲ್ಲಿದ್ದರು~ ಎಂದರು.`ಸೋಮವಾರ ಮಧ್ಯಾಹ್ನ 12 ಗಂಟೆಗೆ ನಮಗೆ ಕಾರ್ಯಕ್ರಮದ ಆಹ್ವಾನ ಲಭಿಸಿದೆ. ಆ ವೇಳೆಗೆ ಹೆಚ್ಚಿನ ಆಟಗಾರರು ಶಾಪಿಂಗ್ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಟೆಲ್‌ನಿಂದ ಹೊರಹೋಗಿದ್ದರು. ಈ ಕಾರಣ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗಿಲ್ಲ~ ಎಂದು ತಂಡದ ಮ್ಯಾನೇಜರ್ ಶಿವಲಾಲ್ ಯಾದವ್ ಹೇಳಿದ್ದರು. ಆದರೆ ಅವರ ಮಾತನ್ನು ಐಸಿಸಿ ಒಪ್ಪುತ್ತಿಲ್ಲ. `ಕೆಲವು ವಾರಗಳ ಮುಂಚೆಯೇ ಬಿಸಿಸಿಐಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿತ್ತು. ಆಗಸ್ಟ್ 26 ರಂದು ಇ-ಮೇಲ್ ಕೂಡಾ ಕಳುಹಿಸಲಾಗಿದೆ. ಪ್ರಶಸ್ತಿಗೆ ಸಂಭವನೀಯರ ಅಂತಿಮ ಪಟ್ಟಿಯನ್ನು ಅದೇ ದಿನ ಪ್ರಕಟಿಸಲಾಗಿತ್ತು. ಇದು ಭಾರತದ ಎಲ್ಲ ಆಟಗಾರರಿಗೆ ತಿಳಿದಿರುವ ವಿಚಾರ~ ಎಂದು ಐಸಿಸಿಯ ಅಧಿಕಾರಿ ಕಾಲಿನ್ ಗಿಬ್ಸನ್ ಹೇಳಿದ್ದಾರೆ.`ಸಮಾರಂಭದ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಭಾರತದ ಆಟಗಾರರು ಸೋಮವಾರ ಬೆಳಿಗ್ಗೆಯೇ ಕಾರ್ಡಿಫ್‌ಗೆ ಪ್ರಯಾಣ ಬೆಳೆಸುತ್ತಿದ್ದರು. ಅವರು ಲಂಡನ್‌ನಲ್ಲಿ ತಂಗುತ್ತಿರಲಿಲ್ಲ~ ಎಂದು ಐಸಿಸಿಯ ಮೂಲಗಳು ಹೇಳಿವೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯ ಕಾರ್ಡಿಫ್‌ನಲ್ಲಿ ಶುಕ್ರವಾರ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.