ಶುಕ್ರವಾರ, ಏಪ್ರಿಲ್ 23, 2021
22 °C

ನಾಟಿ ವೈದ್ಯರಿಗೆ ಅನುಮತಿ ಪರಿಶೀಲನೆಗೆ ಸಮಿತಿ

ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಆಯುಷ್ ವೈದ್ಯರಿಗೆ ಅಲೋಪಥಿ ಔಷಧಿಗಳನ್ನು ನೀಡಲು ಅನುಮತಿ ನೀಡಬೇಕೋ, ಬೇಡವೋ ಎಂದು ಪರಿಶೀಲನೆ ನಡೆಸಿ ವರದಿ ನೀಡುವ ಸಂಬಂಧ ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮಿತಿಯನ್ನು ರಚಿಸಿ, ಆಯುಷ್ ವೈದ್ಯರ ಬೇಡಿಕೆಗಳ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಬಹುಶಃ 20 ದಿನಗಳ ಒಳಗೆ ವರದಿ ನೀಡುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ನಿರ್ದೇಶಕರು, ಆಯುಷ್ ಇಲಾಖೆ ನಿರ್ದೇಶಕರು, ಕಾನೂನು ಇಲಾಖೆಯ ಕಾರ್ಯದರ್ಶಿ, ರಾಜೀವ್ ಗಾಂಧಿ ಆರೋಗ್ಯವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳು ಸಮಿತಿಯಲ್ಲಿದ್ದಾರೆ.ಸುಮಾರು 12 ರಾಜ್ಯಗಳಲ್ಲಿ ಆಯುಷ್ ವೈದ್ಯರಿಗೆ ಅಲೋಪತಿ ಔಷಧಿ ನೀಡಲು ಅವಕಾಶ ನೀಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಅವಕಾಶ ನೀಡಬೇಕು ಎಂದು ಆಯುಷ್ ವೈದ್ಯರ ನಿಯೋಗವು ಗುರುವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಅವರ ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಸರ್ಕಾರ ಸಮಿತಿ ರಚಿಸಿದೆ.ಡ್ರಗ್ಸ್ ಅಂಡ್ ಕಾಸ್ಮೆಟಿಕ್ ನಿಯಮಗಳ ಪ್ರಕಾರ, ಆಯುಷ್ ವೈದ್ಯರಿಗೆ ಅಲೋಪತಿ ಔಷಧಿ ನೀಡಲು ಅವಕಾಶ ಇದೆ ಎಂಬುದು ಆಯುಷ್ ವೈದ್ಯರ ವಾದ. ಇದು ತುಂಬಾ ಸೂಕ್ಷ್ಮವಾದ ವಿಚಾರ. ಸಮಿತಿ ನೀಡುವ ವರದಿಯನ್ನು ಆಧರಿಸಿ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.ಆಯುರ್ವೇದ, ಯುನಾನಿ, ಹೋಮಿಯೋಪಥಿ ಇತ್ಯಾದಿ ವಿಷಯಗಳಲ್ಲಿ ಪದವಿ ಪಡೆದು ನೋಂದಣಿ ಮಾಡಿಸಿಕೊಂಡಿರುವ ವೈದ್ಯರಿಗೆ ಮಾತ್ರ ಭಾರತೀಯ ವೈದ್ಯಪದ್ಧತಿಯ ಔಷಧ ನೀಡಲು ಅವಕಾಶ ಇದೆ.ಇಲಾಖೆಯ ನಿಯಮಾವಳಿಗಳ ಪ್ರಕಾರ ಅವರನ್ನು (ನಾಟಿ ವೈದ್ಯರು) ನಕಲಿ ವೈದ್ಯರು ಎಂದೇ ಪರಿಗಣಿಸಲಾಗುತ್ತದೆ. ಅಂತಹವರು ಚಿಕಿತ್ಸೆ ನೀಡುತ್ತಿರುವುದು ಕಂಡುಬಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಲಿದೆ ಎಂದರು.ನೋಂದಣಿ ಮಾಡಿಸದೆ ಚಿಕಿತ್ಸೆ ನೀಡಿದರೆ ಇಲಾಖೆಯ ದೃಷ್ಟಿಯಲ್ಲಿ ಅವರು ನಕಲಿ ವೈದ್ಯರಾಗುತ್ತಾರೆ. ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಕರ್ನಾಟಕ ಆಯುರ್ವೇದ, ಯುನಾನಿ ವೈದ್ಯ ನೋಂದಣಿ ಮಂಡಳಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಇದೆ ಎಂದು ಅವರು ನುಡಿದರು.ನಾಟಿ ವೈದ್ಯರಿಗೆ ನೋಂದಣಿ ಮಾಡಿಸಲು ಎಲ್ಲಿಯೂ ಅವಕಾಶ ಇಲ್ಲ. ಪಾರಂಪರಿಕವಾಗಿ ಗಿಡಮೂಲಿಕೆಗಳಿಂದ ಔಷಧ ತಯಾರಿಸಿ ಕೊಡುವಂತಹವರಿಗೆ ಸುಮಾರು ಒಂದೂವರೆ ವರ್ಷ ತರಬೇತಿ ನೀಡಿ ಅವರನ್ನು ಪ್ಯಾರಾ ಮೆಡಿಕಲ್ ಸಿಬ್ಬಂದಿ ಎಂದು ಪರಿಗಣಿಸುವ ಪದ್ಧತಿ ಆಂಧ್ರಪ್ರದೇಶದಲ್ಲಿ ಇದೆ. ಆದರೆ ಅವರನ್ನು `ವೈದ್ಯ~ ಎಂದು ಕರೆಯುವಂತಿಲ್ಲ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.