ಸೋಮವಾರ, ಜೂನ್ 21, 2021
30 °C

ನಾಡಕಚೇರಿ ವೆಬ್‌ಸೈಟ್ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಾಡಕಚೇರಿಯಲ್ಲಿ ನೀಡಲಾಗುವ 25 ವಿವಿಧ ಬಗೆಯ ಪ್ರಮಾಣಪತ್ರಗಳಿಗೆ ಅಂತರ್ಜಾಲದ ಮೂಲಕ ಅರ್ಜಿ ಸಲ್ಲಿಸುವ ಮಹತ್ವಕಾಂಕ್ಷಿ ಯೋಜನೆಗೆ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಚಾಲನೆ ನೀಡಿದರು.‘ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಭೂ ಹಿಡುವಳಿ ದೃಢೀಕರಣ ಪತ್ರ ಸೇರಿದಂತೆ 25 ವಿವಿಧ ಬಗೆಯ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದ್ದು, ಅವುಗಳಿಗೆ ಅರ್ಜಿ ಸಲ್ಲಿಸಲು ಇನ್ನು ತಾಲ್ಲೂಕು ಕಚೇರಿಗಳಿಗೆ ಅಲೆಯುವಂತಿಲ್ಲ. http://www.nadakacheri.karnataka.gov.inಅಂತರ್ಜಾಲ ತಾಣದಲ್ಲಿ ಅರ್ಜಿ ಸಲ್ಲಿಸಿದರೆ ಪ್ರಮಾಣಪತ್ರದ ಸಂಖ್ಯೆಯನ್ನು ಎಸ್‌ಎಂಎಸ್ ಮೂಲಕ ನೀಡಲಾಗುತ್ತದೆ. ಸ್ಪೀಡ್‌ಪೋಸ್ಟ್ ಮೂಲಕ ಪ್ರಮಾಣಪತ್ರವನ್ನು ಅರ್ಜಿದಾರರಿಗೆ ಕಳುಹಿಸಲಾಗುತ್ತದೆ. ಅರ್ಜಿ ಶುಲ್ಕವನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ’ ಎಂದು ತಿಳಿಸಿದರು.ಕಾಗದರಹಿತ ಪ್ರಮಾಣಪತ್ರಗಳ ವ್ಯವಸ್ಥೆ: ಈ ಯೋಜನೆಯ ಮೂಲಕ ಬೇರೆ ಇಲಾಖೆಯಲ್ಲಿನ ಸೇವೆ ಪಡೆಯಲು ಇನ್ನು ಮುಂದೆ ಪ್ರಮಾಣಪತ್ರಗಳ ನಕಲು ಪ್ರತಿಯನ್ನು ನೀಡಬೇಕಾಗಿಲ್ಲ. ಅದರ ಬದಲಿಗೆ ಗಣಕೀಕೃತ ಎಸ್‌ಎಂಎಸ್‌ ಮೂಲಕ ನೀಡಲಾಗುವ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಿದರೆ ಸಾಕು. ಇದರ ಸಿಂಧುತ್ವವನ್ನು ಸಂಬಂಧಪಟ್ಟ ಇಲಾಖೆಯವರು ನಾಡಕಚೇರಿಯ ದತ್ತಾಂಶದ ಮೂಲಕ ಪಡೆದು ಪರಿಶೀಲಿಸುವ ವ್ಯವಸ್ಥೆ ಇದೆ. ‘ಈಗಾಗಲೇ ಮುದ್ರಿಸಿದ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಬಾರದು ಎಂಬ ನಿರ್ದೇಶನವನ್ನು ಇತರ ಇಲಾಖೆಗಳಿಗೆ ನೀಡಲಾಗಿದೆ. ಇದರಿಂದ ನಕಲಿ ಪ್ರಮಾಣಪತ್ರಗಳ ಹಾವಳಿಯನ್ನು ತಡೆಯಬಹುದು ಹಾಗೂ ಕಾಗದದ ಉಳಿತಾಯ ಮಾಡುವ ಪರಿಸರಸ್ನೇಹಿ ಯೋಜನೆ ಇದಾಗಿದೆ’ ಎಂದು ತಿಳಿಸಿದರು.ಅಂತಿಮ ಪಿಆರ್ ಕಾರ್ಡ್ ವಿತರಣಾ ಯೋಜನೆ: ಜಮೀನಿಗೆ ನೀಡಲಾಗುವ ಆರ್‌ಟಿಸಿಯಂತೆಯೇ ನಗರಪ್ರದೇಶದ ಆಸ್ತಿಗಳಿಗೆ ಶಾಸನಬದ್ದ ಹಕ್ಕುದಾಖಲೆ  ಪಿ.ಆರ್. ಕಾರ್ಡ್‌ನ್ನು ಕೆಲವು ನಾಗರಿಕರಿಗೆ ಸಚಿವ ಪ್ರಸಾದ್ ವಿತರಿಸಿದರು. ‘ಇದು ಎಲ್ಲಾ ಮಾಹಿತಿಗಳನ್ನು ಒಳಗೊಂಡ ಒಂದೇ ದಾಖಲೆಯಾಗಿರುತ್ತದೆ. ಆಸ್ತಿ ಮೇಲಿನ ಸಾಲದ ಮಾಹಿತಿ, ಆಸ್ತಿಯ ನಕ್ಷೆ, ಪ್ರಸ್ತುತ ಮಾಲೀಕರಿಗೆ ಆಸ್ತಿ ಲಭ್ಯವಾದ ಮಾಹಿತಿ, ಅನುಭೋಗದ ಹಕ್ಕು ಮೊದಲಾದ ಅವಶ್ಯಕ ಮಾಹಿತಿಗಳು ಇದರಲ್ಲಿರುತ್ತವೆ. ಜತೆಗೆ ಯುಪಿಒಆರ್ ಯೋಜನೆಯಲ್ಲಿ ಖಾತಾ ಬದಲಾವಣೆಗೆ ಸ್ವಯಂಚಾಲಿತ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು’ ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದರು.ಅಧಿಕಾರಿಗಳ ವಿರುದ್ದ ಹರಿಹಾಯ್ದ ಸಚಿವರು:  ‘ಬೆಂಗಳೂರು ಒಂದರಲ್ಲೇ 6 ಸಾವಿರಕ್ಕೂ ಹೆಚ್ಚು ಭೂವಿವಾದಗಳಿವೆ. 11 ಲಕ್ಷ ಎಕರೆ ಒತ್ತುವರಿಯಾಗಿದೆ. ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳೇ ಕಾರಣ’ ಎಂದು ಶ್ರೀನಿವಾಸ್‌ ಪ್ರಸಾದ್ ಕಿಡಿಕಾರಿದರು.

‘ಎಲ್ಲಾ ಯೋಜನೆಗಳ ಅನುಷ್ಠಾನದ ಭಾರ ಅಧಿಕಾರಿಗಳ ಮೇಲೆ ಇರುತ್ತದೆ. ಅವರೇ ಭ್ರಷ್ಟಾಚಾರದಲ್ಲಿ ತೊಡಗಿದರೆ ಯೋಜನೆ ನಿರೀಕ್ಷಿತ ಗುರಿ ಮುಟ್ಟುವುದಿಲ್ಲ.

ಗ್ರಾಮ ಲೆಕ್ಕಿಗರೂ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಾರೆ. ಹಳ್ಳಿಯಲ್ಲಿನ ಬಡವನಿಗೆ ಸಣ್ಣದೊಂದು ಪ್ರಮಾಣಪತ್ರ ನೀಡಲು ಹಣ ಕೀಳುತ್ತಾರೆ ಎಂದರೆ ಮಾನವೀಯತೆ ಇದೆಯೇ ಎಂಬುದರ ಬಗ್ಗೆ ಸಂದೇಹ ಮೂಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.‘ಸದ್ಯ, ರಾಜ್ಯದಲ್ಲಿ ಎಲ್ಲರ ಆಸ್ತಿಪಾಸ್ತಿಯ ಕುರಿತು ಮರು ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ರೂ 600 ಕೋಟಿ ಬೇಕಾಗುತ್ತದೆ. ಕೇಂದ್ರ ಸರ್ಕಾರ ಶೇ 50ರಷ್ಟು ಅನುದಾನ ನೀಡಲು ಒಪ್ಪಿದೆ. ಈಗಾಗಲೇ 90 ಕೋಟಿ ಬಿಡುಗಡೆಯಾಗಿದೆ. ಈ ಉದ್ದೇಶಕ್ಕಾಗಿಯೇ ಇಲಾಖೆಗೆ 2 ಸಾವಿರ ಮಂದಿ ಸರ್ವೆಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಪರವಾನಗಿಯುಳ್ಳ ಸರ್ವೆಯರ್‌ಗಳನ್ನು ನೇಮಕ ಮಾಡಲಾಗುವುದು. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿವರೆಗಿನ ಕಂದಾಯ ಇಲಾಖೆಯ ಸಾಧನೆಗಳನ್ನು ಶ್ವೇತಪತ್ರದ ಮೂಲಕ ಹೊರತರಲಾಗುವುದು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.