ಸೋಮವಾರ, ಮೇ 23, 2022
28 °C

ನಾಡಹಬ್ಬ ದಸರೆಯ ಗೊಂಬೆ ಪ್ರದರ್ಶನ

ಸುರೇಶ ರಾಜೇನವರ Updated:

ಅಕ್ಷರ ಗಾತ್ರ : | |

ನಾಡ ಹಬ್ಬ `ದಸರಾ~ವನ್ನು ಹರಿಹರ ನಗರದಲ್ಲಿ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಹರಿಹರ ತಾಲ್ಲೂಕು ಮಧ್ಯ ಕರ್ನಾಟಕದ ಭಾಗ. ನಗರದಲ್ಲಿ ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉತ್ತರ ಭಾರತದ ವಿವಿಧ ಸಂಸ್ಕೃತಿಯ ಜನರು ವಾಸಿಸುತ್ತಿರುವುದರಿಂದ ಎಲ್ಲಾ ಬಗೆಯ ಹಬ್ಬಗಳ ಆಚರಣೆಯನ್ನು ನೋಡಲು ಸಾಧ್ಯವಿದೆ.ದಸರಾ ಹಬ್ಬ ಎಂದೊಡನೆ ತಕ್ಷಣಕ್ಕೆ ಮನಸ್ಸಿಗೆ ಮೂಡುವುದು, ಮೈಸೂರಿನ ಜಂಬೂ ಸವಾರಿ ಹಾಗೂ ಗೊಂಬೆಗಳ ಪ್ರದರ್ಶನ. ನಗರದಲ್ಲಿ ದಸರಾ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸಾಂಪ್ರದಾಯಿಕವಾದ 9 ದಿನ ಕಾಲ ನಂದಾದೀಪ, ಘಟ ಸ್ಥಾಪನೆ, ದುರ್ಗಾ ಪಾರಾಯಣ, ವ್ರತಾಚರಣೆ, ಗೊಂಬೆಗಳ ಪ್ರದರ್ಶನ ಉತ್ತರ ಭಾರತ ನಿವಾಸಿಗಳ ಗರ್ಭಾ ನೃತ್ಯ, ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಮುಖವಾದವು.ನಗರದ ಎಚ್‌ಎಸ್ ಬಡಾವಣೆ ಹೈಸ್ಕೂಲ್ ಹಿಂಭಾಗದಲ್ಲಿರುವ ಎಸ್.ಎಸ್. ಅಯ್ಯರ್, ಮಹಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದ ಹತ್ತಿರದ ರಾಜಣ್ಣ (ಬೇಕರಿ), ಸಾಹಿತಿ ಲಲಿತಮ್ಮ ಡಾ.ಚಂದ್ರಶೇಖರ್ ಹಾಗೂ ಇನ್ನು ಅನೇಕ ಮನೆಗಳಲ್ಲಿ ಹಲವಾರು ವರ್ಷಗಳಿಂದ ದಸರಾ ಗೊಂಬೆ ಪ್ರದರ್ಶನದ ನಡೆಸುತ್ತಾರೆ.ಮೊರದಲ್ಲಿರುವ ಬಾಲಕೃಷ್ಣನ್ನು ತಲೆಯ ಮೇಲೆ ಹೊತ್ತು ಹೋಗುತ್ತಿರುವ ವಾಸುದೇವ, ಭಕ್ತಿ ಭಾವದಲ್ಲಿ ಮೈಮರೆತ ಮೀರಾದೇವಿ, ಕೊಡುಗೆಗಳ ಗಂಟು ಹೊತ್ತ ಸಾಂತಾಕ್ಲಾಸ್, ಶೇಷಶಯನ ಮಹಾವಿಷ್ಣು, ಶಿವ-ಪಾರ್ವತಿ, ಬಿಚ್ಚೋಲೆ ಗೌರಮ್ಮ, ರೈತ, ತಪಸ್ಸಿಗೆ ಕುಳಿತ ಋಷಿ, ಬಾಲಕೃಷ್ಣ, ಬಾಲಗಣಪತಿ ವಿವಿಧ ದೇವತಾ ಮೂರ್ತಿಗಳು ಒಂದೆಡೆಯಾದರೆ, ಜೋಕಾಲಿ ಆಡುತ್ತಿರುವ ಮಗು, ದೇಶದ ವಿವಿಧ ಭಾಗಗಳ ಉಡುಗೆ ಹಾಗೂ ಸಂಸ್ಕೃತಿ ಬಿಂಬಿಸುವ ದಂಪತಿ ಗೊಂಬೆಗಳು, ಚನ್ನಪಟ್ಟಣದ ಚಂದನದ ಗೊಂಬೆಗಳು, ಕಾಡುಮೃಗಗಳು, ಸಾಕು ಪ್ರಾಣಿಗಳು, ಗ್ರಾಮೀಣ ಬದುಕನ್ನು ಬಿಂಬಿಸುವ ಗೊಂಬೆಗಳ ಸಂಗ್ರಹ, ವಿದೇಶದಿಂದ ತಂದ ಗೊಂಬೆಗಳು, ಆಧುನಿಕ ಗೊಂಬೆಗಳು - ಹೀಗೆ ವಿವಿಧ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಗೊಂಬೆಗಳು ನೋಡುಗರ ಮನ ಸೂರೆಗೊಳ್ಳುತ್ತವೆ.`ಮೈಸೂರಿನ ಕಡೆ ಮದುವೆ ಸಂದರ್ಭದಲ್ಲಿ ಮದುಮಗಳಿಗೆ ತವರು ಮನೆಯಿಂದ ಗೊಂಬೆಗಳನ್ನೂ ಬಳುವಳಿಯಾಗಿ ನೀಡುವ ಸಂಪ್ರದಾಯ ಇಂದಿಗೂ ಪ್ರಚಲಿತದಲ್ಲಿದೆ. ಹೀಗೆ ತವರಿನಿಂದ ಬಳುವಳಿಯಾಗಿ ಬಂದ ಸುಮಾರು 60-70 ವರ್ಷಗಳಷ್ಟು ಪುರಾತನವಾದ ಚಂದನದ ಹಾಗೂ ಕಟ್ಟಿಗೆಯ ಗೊಂಬೆಗಳನ್ನು ನೋಡಬಹುದು. ದಸರಾ ಗೊಂಬೆ ಪ್ರದರ್ಶನ ಕೇವಲ ಪ್ರತಿಷ್ಠೆಗಲ್ಲ. ಅಂದು ಹಾಗೂ ಇಂದಿನ ತಲೆಮಾರಿನ ಗೊಂಬೆಗಳ ರಚನೆ ವೈವಿಧ್ಯತೆ ಹಾಗೂ ವಿಶೇಷತೆ ಬಿಂಬಿಸುವ ಪ್ರದರ್ಶನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.