ಭಾನುವಾರ, ಜನವರಿ 26, 2020
31 °C
ವಿಮಾ ಕಂಪೆನಿಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಪರಿಶೀಲನೆ

ನಾಡು, ನುಡಿಯ ತಾತ್ಸಾರ ಸಲ್ಲ: ‘ಮುಖ್ಯಮಂತ್ರಿ’ ಚಂದ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತ್ರಿಭಾಷಾ ಸೂತ್ರದ ಪ್ರಕಾರ ವಿಮಾ ಕಂಪನಿಗಳು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸ­ಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ತಾಕೀತು ಮಾಡಿದರು.ಕೇಂದ್ರ ಸರ್ಕಾರಿ ಸ್ವಾಮ್ಯದ  ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್‌ ಕಂಪೆನಿ, ಕೃಷಿ ವಿಮಾ ನಿಗಮ ಕಚೇರಿ, ಭಾರತೀಯ ಜೀವ ವಿಮಾ ನಿಗಮ ಹಾಗೂ ನ್ಯೂ ಇಂಡಿಯಾ ಇನ್ಸೂ­ರೆನ್ಸ್‌ ಕಂಪೆನಿಗಳಿಗೆ ಬುಧವಾರ ಭೇಟಿ ನೀಡಿ, ಕನ್ನಡ ಅನುಷ್ಠಾನ ಹಾಗೂ ತ್ರಿಭಾಷಾ ಸೂತ್ರ ಆಳವಡಿಕೆ ಕುರಿತು ದಾಖಲೆ­ಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.ಸರ್ಕಾರ ಗ್ರಾಮೀಣ ಪ್ರದೇಶದ ಜನರಿ­ಗಾಗಿ ಉತ್ತಮ ವಿಮಾ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅದರ ವಿವರ­ಗಳೆಲ್ಲಾ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿವೆ. ಸಾಮಾನ್ಯ ಜನರು ಇದನ್ನು ಅರ್ಥ­ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ವ್ಯವಹಾರ ಹಾಗೂ ಭಾಷೆ ಬೆಳವಣಿಗೆ ದೃಷ್ಟಿ­ಯಿಂದ ಕನ್ನಡ ಭಾಷೆಯ ಅಳ­ವಡಿಕೆ ಕಡ್ಡಾಯವಾಗಬೇಕು ಎಂದು ಚಂದ್ರು ಸೂಚಿಸಿದರು.ಕಂಪೆನಿಯ ಆಡಳಿತ ಹಾಗೂ ವ್ಯವಹಾರದಲ್ಲಿ ತ್ರಿಭಾಷಾ ಸೂತ್ರ ಆಳವಡಿಕೆ ಮಾಡಿಕೊಳ್ಳದಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಮೂರು ತಿಂಗ­ಳೊಳಗೆ ಕೇಂದ್ರ ಸರ್ಕಾರದ ನಿಯಮ­ದಂತೆ ತ್ರಿಭಾಷಾ ಸೂತ್ರ ಆಳ­ವಡಿಸಬೇಕು. ಇಲ್ಲದಿದ್ದರೆ ಕಂಪೆನಿ ವಿರುದ್ಧ ಕೇಂದ್ರ ಸರ್ಕಾರಕ್ಕೆ ವರದಿ ನೀಡ­ಲಾಗುವುದು. ಕನ್ನಡ ನಾಡು, ನುಡಿಯ ಬಗ್ಗೆ ಉದಾ­ಸೀನ ಮಾಡುವುದು ಸರಿಯಲ್ಲ ಎಂದು ಹೇಳಿದರು.ಪ್ರಾಧಿಕಾರವು ನಿಗದಿಪಡಿಸಿದ ಸಮಯ­ದೊಳಗೆ ಕಂಪೆನಿ ತನ್ನ ಎಲ್ಲಾ ಕೆಲಸ ಕಾರ್ಯ­ಗಳು, ನಾಮಫಲಕ, ಅರ್ಜಿ­ನಮೂನೆಗಳು, ರಾಜ್ಯದೊಳಗಿನ ಪತ್ರ­ವ್ಯವಹಾರ, ವೆಬ್‌ಸೈಟ್‌– ಎಲ್ಲದರಲ್ಲೂ ಕನ್ನಡ ಬಳಸಬೇಕು. ಕಚೇರಿಗಳಲ್ಲಿ  ಹಿಂದಿ ಘಟಕದಂತೆ ಕನ್ನಡ ಘಟಕವನ್ನೂ ಆರಂಭಿಸಬೇಕು ಎಂದು ಸಲಹೆ ನೀಡದರು. ರಾಜ್ಯೋತ್ಸವ­ವನ್ನು ಆಚರಿಸಿ, ಭಾಷಾಭಿ­ಮಾನವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸ­ಬೇಕು ಎಂದು ಅವರು ಹೇಳಿದರು.ಕೆಲಸಕ್ಕೆ ಸೇರಿ ವರ್ಷ ಕಳೆದರೂ ಕನ್ನಡ ಕಲಿಯದ ಕನ್ನಡೇತರರ ಬಗ್ಗೆ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಇವರಿಗೆ ಕನ್ನಡದ ಜಲ, ನೆಲ, ಸೌಲಭ್ಯ ಇವೆಲ್ಲಾ ಬೇಕು. ಆದರೆ ಇಲ್ಲಿನ ಭಾಷೆ ಬೇಡ ಎಂಬ ಮನೋಭಾವಕ್ಕೆ ನಮ್ಮ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು.ಸಂಸ್ಥೆಯಲ್ಲಿರುವ ಕನ್ನಡೇತ­ರರಿಗೆ ಸರಳ, ಸುಲಭ, ವ್ಯಾವ­ಹಾರಿಕ ಕನ್ನಡ ಕಲಿಸಬೇಕು. ಇದಕ್ಕೆ ಪ್ರಾಧಿಕಾರ ಸಹಕಾರ ನೀಡಲಿದೆ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್‌ ಕಂಪೆನಿಗೆ ಭೇಟಿ ನೀಡಿದಾಗ  ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದು­ಕೊಂಡ ಮುಖ್ಯಮಂತ್ರಿ ಚಂದ್ರು ಅವರು, ತಾವು ಕನ್ನಡದಲ್ಲಿ ಪತ್ರ ಬರೆದು ಪರಿವೀಕ್ಷಣೆಗೆ ಬರುವುದಾಗಿ ತಿಳಿಸಿದ್ದರೂ, ಕಂಪೆನಿ ಮಾತ್ರ ಇಂಗ್ಲಿಷ್‌ನಲ್ಲಿ ಪ್ರತ್ಯುತ್ತರ ನೀಡಿ ಅವಮಾನ ಮಾಡಿದೆ. ಇದರಿಂದ ಕನ್ನಡದ ಬಗ್ಗೆ ಕಂಪೆನಿಗೆ ಇರುವ ತಾತ್ಸಾರ, ಉದಾಸೀನ ಭಾವ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.ಪರಿಶೀಲನಾ ತಂಡದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ್‌, ಕರ್ನಾಟಕ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿದ್ಧಯ್ಯ, ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ಬೆಂಗಳೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಎನ್‌. ಸಿರ್ಸಿಕಾರ, ಕಾರ್ಮಿಕ ಇಲಾಖೆಯ ಉಪ ಆಯುಕ್ತ ಉಮೇಶ್‌, ಗಣಕ ಪರಿಷತ್‌ ಅಧ್ಯಕ್ಷ ಜಿ.ಎನ್‌.ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)