ಗುರುವಾರ , ಮೇ 28, 2020
27 °C

ನಾಡೋಜ ಬರಗೂರರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬರಗೂರು ರಾಮಚಂದ್ರಪ್ಪ ಅವರು ಬಂಡಾಯ ಸಾಹಿತ್ಯದ ಮೂಲಕ ಸಮಾಜದಲ್ಲಿ ಮಾತನಾಡಲು ಹಿಂಜರಿದವರಿಗೆ ಧ್ವನಿಯಾಗಿದ್ದಾರೆ. ಸಮುದಾಯವನ್ನೂ ಮೀರಿ ಸಮಾಜದೆಡೆಗೆ ಹೋಗುವ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಮುರಿಗೆಪ್ಪ ಶ್ಲಾಘಿಸಿದರು.ಕನ್ನಡ ಶ್ರೀಸಾಮಾನ್ಯರ ಕೂಟವು ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಕನ್ನಡ ವಿ.ವಿ ‘ನಾಡೋಜ’ ಗೌರವ ನೀಡಿರುವ ಪ್ರಯುಕ್ತ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತೋಷ ಸಮಾರಂಭದಲ್ಲಿ ಅವರು ಮಾತನಾಡಿದರು.‘ಬರಗೂರು ಅವರು ಯಾವುದೇ ಒಂದು ಪ್ರಾದೇಶಿಕ ವಲಯಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಅವರನ್ನು ಗುರುತಿಸಿ, ಗೌರವಿಸುವ ಸಮುದಾಯವಿದೆ. ‘ನಾಡೋಜ’ ಗೌರವ ಸಿಗುವುದಕ್ಕೂ ಮೊದಲೇ ನಾಡ ಗುರುವಿನ ಪಟ್ಟವನ್ನು ಅವರು ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.‘ಯಾವುದೇ ಒಂದು ಕೆಲಸವನ್ನು ಜಾಗೃತವಾಗಿ ನಿರ್ವಹಿಸುವ ಚಾಕಚಕ್ಯತೆಯನ್ನು ಅವರು ಹುಟ್ಟಿನಿಂದಲೇ ಗಳಿಸಿಕೊಂಡಿದ್ದಾರೆ. ವಿಷಯಗಳಲ್ಲಿ ಸ್ಪಷ್ಟತೆ ಇರುವ ಕಾರಣದಿಂದಲೇ ನಿರರ್ಗಳವಾಗಿ ಮಾತನಾಡುವ ಶಕ್ತಿಯನ್ನು ಗಳಿಸಿಕೊಂಡಿದ್ದಾರೆ. ಇತರರ ಒತ್ತಡಗಳಿಗೆ ಮಣಿದು ಅವರಿಗೆ ನಾಡೋಜ ಗೌರವ ನೀಡಿಲ್ಲ. ಅವರ ವ್ಯಕ್ತಿತ್ವ, ನಾಡಿಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಆ ಗೌರವ ನೀಡಲಾಯಿತು’ ಎಂದು ತಿಳಿಸಿದರು.‘ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಈ ನಾಡೋಜ ಗೌರವವನ್ನು ನನಗೆ ಕೀರ್ತಿ ತಂದುಕೊಟ್ಟ ಹೆಸರಿಲ್ಲದ ಅನಾಮಧೇಯ ಸಾಮಾಜಿಕ ವಲಯಕ್ಕೆ ಸಮರ್ಪಿಸುತ್ತಿದ್ದೇನೆ.ಈ ಅನಾಮಧೇಯರೇ ನನ್ನ ಸಿನಿಮಾ ಮತ್ತು ಸಾಹಿತ್ಯದ ಧಾತುಗಳು’ ಎಂದರು.‘ನಾಡೋಜ ಗೌರವವು ನನಗೆ ದೊರೆತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇದಕ್ಕೆ ವಿಶೇಷವಾದ ಶಕ್ತಿ, ಘನತೆ ಮತ್ತು ಅರ್ಥವಿದೆ. ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿಗಳನ್ನು ಅರ್ಹರಿಗೆ ನೀಡುತ್ತಿಲ್ಲ. ಅದನ್ನು ನೀಡುವಾಗ ವಿವೇಕವಿರಬೇಕು’ ಎಂದು ಹೇಳಿದರು.‘ಅಭಿನಂದನೆ ಎಂಬುದು ಇಂದು ಕ್ಲೀಷೆಯಾಗಿದೆ. ಅದು ಹೀನಾಯ ಸ್ಥಿತಿಗೆ ಇಳಿದಿದ್ದು, ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಹಾಗೆಯೇ ಸಂತೋಷವು ಅನುಭವಕ್ಕೆ ಬರುವ ಬದಲು ಬೆನ್ನತ್ತಿ ಹೋಗುವ ಮೌಲ್ಯವಾಗಿದೆ. ನನಗೆ ಮೇಷ್ಟ್ರು ಎಂದು ಕರೆಸಿಕೊಳ್ಳಲು ಬಹಳ ಇಷ್ಟ. ಈಗಿನ ಪ್ರಾಧ್ಯಾಪಕರು ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು.ವಿಮರ್ಶಕ ಡಾ. ಬಸವರಾಜ ಕಲ್ಗುಡಿ, ‘ಬರಗೂರು ರಾಮಚಂದ್ರಪ್ಪ ಅವರು 70ರ ದಶಕದಿಂದಲೂ ಎಡಪಂಥೀಯ ಧಾರೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಸಾಮಾಜಿಕ ಚಿಂತನೆಗಳ ಮೂಲಕ ಸಾಹಿತ್ಯ ಬೆಳೆಯಬೇಕೆಂಬುದೇ ಅವರ ಆಶಯವಾಗಿದೆ’ ಎಂದರು.‘ಮಾನವೀಯತೆ, ಮುಗ್ಧತೆ, ಕೋಮಲತೆಯನ್ನು ಅವರ ಸೃಜನಶೀಲ ಕೃತಿಗಳಲ್ಲಿ ಕಥೆ, ಕಾದಂಬರಿ, ಕವನಗಳಲ್ಲಿ ಕಾಣಬಹುದಾಗಿದೆ. ಅನೇಕ ಚಿಂತಕರಿಗೆ ಅವರು ಧಾತುವಾಗಿದ್ದಾರೆ.ಕನ್ನಡದ ಪ್ರಶ್ನೆಯನ್ನು ಅನ್ನದ ಪ್ರಶ್ನೆಯಾಗಿ ನೋಡಿದವರು. ಕನ್ನಡವನ್ನು ಈ ರೀತಿ ನೋಡದಿದ್ದಲ್ಲಿ ಕನ್ನಡ ಜೀವಂತ ಕ್ರಿಯೆಯಾಗಿ ಉಳಿಯಲು ಸಾಧ್ಯವಿಲ್ಲವೆಂಬುದನ್ನು ತಿಳಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ, ಡಾ. ಜಿ.ರಾಮಕೃಷ್ಣ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.