ಎ ಲೈಫ್ ಆಫ್ ಥ್ರೀ ಆಕ್ಟೇವ್ಸ್–ದಿ ಮ್ಯೂಸಿಕಲ್ ಜರ್ನಿ ಆಫ್ ಗಂಗೂಬಾಯಿ ಹಾನಗಲ್
ಲೇ: ದೀಪಾ ಗಣೇಶ್
ಪುಟ: 236; ಬೆ: ರೂ. 600
ಪ್ರ: ಥ್ರೀ ಎಸ್ಸೇಸ್ ಕಲೆಕ್ಟಿವ್, ಬಿ–957, ಪಾಲಮ್ ವಿಹಾರ್, ಗಡಗಾಂವ್ (ಹರಿಯಾಣ): 122 017.

ಸಂಗೀತಗಾರರ ಬದುಕಿನ ಕುರಿತ ಬರವಣಿಗೆ, ಆಯಾ ಸಂಗೀತಗಾರರ ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸುವುದಕ್ಕೇ ಸೀಮಿತವಾಗುವ ಅಥವಾ ವಿವರಗಳ ಅಡಕವಷ್ಟೇ ಆಗಿಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕನ್ನಡದಲ್ಲಿ ಬಂದಿರುವ ಸಂಗೀತಗಾರರ ಬಗೆಗಿನ ಕೆಲವು ಕೃತಿಗಳು ಈ ಸಾಲಿಗೆ ಸೇರಿದಂಥವು. ದೀಪಾ ಗಣೇಶ್ ಬರೆದಿರುವ ಇಂಗ್ಲಿಷ್ ಕೃತಿ ‘ಎ ಲೈಫ್ ಆಫ್ ಥ್ರೀ ಆಕ್ಟೇವ್ಸ್ – ದಿ ಮ್ಯೂಸಿಕಲ್ ಜರ್ನಿ ಆಫ್ ಗಂಗೂಬಾಯಿ ಹಾನಗಲ್’ ಇದಕ್ಕೆ ಅಪವಾದ.

ವೃತ್ತಿಯಿಂದ ಪರ್ತಕರ್ತರಾದ ದೀಪಾ ಗಣೇಶ್ ಅಕಡೆಮಿಕ್ ಆಗಿ ಸಂಗೀತ ಕಲಿತವರು. ಅದೇ ಕಾರಣಕ್ಕೋ ಏನೋ ಈ ಕೃತಿ ಗಂಗೂಬಾಯಿ ಹಾನಗಲ್ ಅವರ ಸಂಗೀತದ ಹೆಜ್ಜೆಗುರುತುಗಳನ್ನು ದಾಖಲಿಸುವ ಯತ್ನವಷ್ಟೇ ಆಗದೆ ಆ ಚೌಕಟ್ಟನ್ನು ಮೀರಿದೆ. ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಬೇರುಗಳನ್ನು ತಡಕುವುದರ ಜೊತೆಗೆ ಅಲ್ಲಿ ಮಹಿಳೆಯರು ಪಟ್ಟ ಪಡಿಪಾಟಲುಗಳನ್ನು ಪುಸ್ತಕ ಸಂಕ್ಷಿಪ್ತವಾಗಿ ಹೇಳುತ್ತದೆ.

ಹದಿನೈದು ಅಧ್ಯಾಯಗಳಾಗಿ ಅವರು ಕೃತಿಯನ್ನು ವಿಂಗಡಿಸಿಕೊಂಡಿರುವ ರೀತಿ ಕೂಡ ಗಮನಾರ್ಹ. ಇದು ಸಂಗೀತಗಾರರ ಬದುಕಿನ ಯಃಕಶ್ಚಿತ್ ಮಾಹಿತಿ ದಾಖಲೆಯಾಗದೆ ಚಿತ್ರಕಥಾ ಮಾದರಿಯ ನಿರೂಪಣೆಯನ್ನು ಒಳಗೊಂಡಿದೆ. ಕೃತಿಕಾರರು ಗಂಗೂಬಾಯಿ ಹಾನಗಲ್ ಅವರಿಂದ ಒಂದೊಂದು ಮಾತನ್ನೂ ಹೊರತೆಗೆಯಲು ಪಟ್ಟ ಕಷ್ಟವನ್ನು ಒಂದೇ ಸಾಲಿನಲ್ಲಿ ಬಿಚ್ಚಿಡುತ್ತಲೇ, ನಾಲ್ಕು ವರ್ಷಗಳಷ್ಟು ಸುದೀರ್ಘ ಮಾತುಕತೆಯ ಫಲ ಇದು ಎನ್ನುವುದನ್ನೂ ಉಲ್ಲೇಖಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಬೇಡುವ ರಿಯಾಜ್ ಹಾಗೂ ಸಾವಧಾನ ಈ ಕೃತಿ ರೂಪಿಸುವುದರಲ್ಲಿಯೂ ಇದೆ ಎನ್ನುವುದಕ್ಕೆ ಈ ಉಲ್ಲೇಖವೇ ಪುಷ್ಟಿ.

ಗಂಗೂಬಾಯಿ ಹಾನಗಲ್ ಅವರದ್ದು ತೊಂಬತ್ತಾರು ವರ್ಷಗಳ ಸುದೀರ್ಘ ಬದುಕು. ಹುಬ್ಬಳ್ಳಿ–ಧಾರಾವಾಡದ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಅವರ ಸಂಗೀತ ಸಾಧನೆಯನ್ನು ಕೃತಿಕಾರರು ಸಣ್ಣ ಸಣ್ಣ ವಿವರಗಳಲ್ಲಿ ಹಿಡಿದಿಟ್ಟಿದ್ದಾರೆ. ಅದನ್ನು ಸಂಗ್ರಹಿಸುವಲ್ಲಿ ಅವರಿಗೆ ದಕ್ಕಿರುವ ಗಂಗೂಬಾಯಿಯವರ ವಯೋಸಹಜ ಮುಗ್ಧತೆ, ಭೂತಕಾಲವನ್ನು ಈಗಲೂ ಅನುಭವಿಸುತ್ತಿರುವ ಅವರ ಮನಸ್ಥಿತಿ ಕೂಡ ಕೃತಿಯಲ್ಲಿ ಗುಪ್ತಗಾಮಿನಿಯಂತೆ ಹರಿದಿದೆ.

ಈ ಹರಿಯುವಿಕೆ ಕೃತಿಯ ಹರವನ್ನು ವಿಸ್ತರಿಸಿರುವುದರ ಜೊತೆಗೆ ಕಾದಂಬರಿಗೆ ಇರುವಂಥ ಚಿತ್ರಕ ಶಕ್ತಿಯನ್ನು ತುಂಬಿದೆ. ಉದಾಹರಣೆಗೆ: ಗಂಗೂಬಾಯಿ ಅವರಿಗೆ ತಮ್ಮ ತವರುಮನೆ ಮುಂದಿನ ತುಳಸೀಕಟ್ಟೆಯ ಮೇಲೆ ಈಗಲೂ ಕಾಳಜಿ. ಅಲ್ಲಿಗೆ ಹೋಗಿಬರುವ ಕೃತಿಕಾರರಿಗೆ ಅದು ಹಾಗೆಯೇ ಇದೆಯೇ ಎಂದು ಖಾತರಿಪಡಿಸುವಂತೆ ಗಂಗೂಬಾಯಿಯವರೇ ಕೇಳಿಕೊಳ್ಳುತ್ತಾರೆ. ಅದು ಹಾಗೆಯೇ ಇದೆ ಎಂದಾಗ ಅವರಲ್ಲಿ ಆಗುವ ಮಗುವಿನಂಥ ಖುಷಿಯೂ ಪುಸ್ತಕದ ಅಕ್ಷರಗಳಲ್ಲಿ ವ್ಯಕ್ತಗೊಂಡಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಹುಬ್ಬಳ್ಳಿಯಂಥ ಪರಿಸರದಲ್ಲಿ ಮಹಿಳೆಯರು ಹಿಂದೂಸ್ತಾನಿ ಸಂಗೀತ ಕಲಿಯಲು ಏನೆಲ್ಲಾ ಕಷ್ಟಪಡಬೇಕಾಯಿತು ಎಂಬ ಸೂಕ್ಷ್ಮ ವಿವರಗಳನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೃತಿಕಾರರು ದಾಖಲಿಸಿದ್ದಾರೆ. ಮೈಸೂರು ಒಡೆಯರ ಕಾಲದಲ್ಲಿ ಹೇಗೆ ಈ ಸಂಗೀತ ಪ್ರಕಾರಕ್ಕೆ ಪೋಷಣೆ ಸಿಕ್ಕಿತು ಎಂಬ ಅಗತ್ಯ ಮಾಹಿತಿಯ ಹಿನ್ನೆಲೆಯೂ ಇದೆ. ತುಳಸಿಕಟ್ಟೆಗೆ ಶ್ರದ್ಧೆಯಿಂದ ಪೂಜೆ ಮಾಡುವ ಗಂಗೂಬಾಯಿಯವರ ತಾಯಿಗೆ ಇದ್ದ ಸಂಗೀತಪ್ರೀತಿಯ ವಿವರಗಳು ‘ತಾಯಿಯಂತೆ ಮಗಳು’ ಎನ್ನುವುದಕ್ಕೆ ಸಾಕ್ಷಿ.

ತಮ್ಮ ಹದಿನಾರನೇ ವಯಸ್ಸಿಗೇ ಮೊದಲ ಮಗಳು ಕೃಷ್ಣಾಳನ್ನು ಹಡೆಯುವ ಗಂಗೂಬಾಯಿ, ಆಮೇಲೆ ಆ ಮಗಳು ಕ್ಯಾನ್ಸರ್ನಿಂದ ಕೊನೆಯುಸಿರು ಎಳೆಯುವವರೆಗೂ ಆ ‘ಮಗು’ವಿನ ಕೈಬೆರಳನ್ನು ಹಿಡಿದೇ ಇರುತ್ತಾರೆ. ದೈಹಿಕವಾಗಿ ದುರ್ಬಲರಾಗಿದ್ದ ಕೃಷ್ಣಾ ಔಪಚಾರಿಕ ಕಲಿಕೆ ಇಲ್ಲದೆಯೂ ತಾಯಿಯ ಸಂಗೀತದ ಅಲೆಗಳನ್ನು ತಮ್ಮದಾಗಿಸಿಕೊಂಡು ಹಾಡಿದ ಸಂಗೀತಪಯಣ ಹೃದಯಸ್ಪರ್ಶಿ.

ಗಂಗೂಬಾಯಿಯವರ ಪ್ರೀತಿಯ ಮಗಳು ಕೃಷ್ಣಾ ಅವರ ಕುರಿತಂತೆಯೇ ಒಂದು ಪ್ರತ್ಯೇಕ ಅಧ್ಯಾಯವಿದೆ. ಅದರ ಮಾನವೀಯ ಹಾಗೂ ಸೂಕ್ಷ್ಮ ಚಿತ್ರಣಗಳು ಭಾವದಲೆಗಳೇ ಹೌದು. ಒಂದು ಕೈಯಲ್ಲಿ ಮಗುವಿನ ತೊಟ್ಟಿಲು ತೂಗುತ್ತಾ, ಇನ್ನೊಂದು ಕೈಲಿ ಶ್ರುತಿಪೆಟ್ಟಿಗೆ ಹಿಡಿಯುವ ತಾಯಿಯ ಆಂತರ್ಯದ ಶಕ್ತಿಯನ್ನೂ ದೀಪಾ ಗಣೇಶ್ ಚಿತ್ರಿಕೆಯಂತೆ ಬರಹದ ಮೂಲಕ ಮೂಡಿಸಿದ್ದಾರೆ.

ಕೃತಿಯನ್ನು ಇಡಿಯಾಗಿ ಓದಿದಾಗ ಸಿಗುವಷ್ಟೇ ಖುಷಿ ಬಿಡಿಬಿಡಿ ಅಧ್ಯಾಯಗಳನ್ನು ಓದಿದಾಗಲೂ ದೊರೆಯುತ್ತದೆ. ಸರಳವಾದ ಭಾಷೆ, ಸಂಗೀತಕ್ಕೆ ಇರುವಂಥದ್ದೇ ಲಯದ ನಿರೂಪಣೆಯಿಂದಾಗಿ ಕೃತಿಯು ಸಲೀಸಾಗಿ ಓದಿಸಿಕೊಳ್ಳುತ್ತದೆ.

ಭವಬಂಧನದಲಿ ಸಿಲುಕಿದವರ ಸಂಗೀತ ಯಾನ ಹೇಗಿರುತ್ತದೆ ಎನ್ನುವ ಮನಕಲಕುವ ಮಾನವೀಯ ವಿವರಗಳು ಕೇವಲ ಗಂಗೂಬಾಯಿ ಅವರದ್ದಷ್ಟೇ ಅಲ್ಲವೇನೋ ಎನ್ನಿಸುವುದು ಕೃತಿಯ ಅರ್ಥಸಾಧ್ಯತೆಯ ವಿಸ್ತಾರವನ್ನು ಪುಷ್ಟೀಕರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.