ಗುರುವಾರ , ಮೇ 19, 2022
20 °C

ನಾದ ಲೋಕದ ರಸನಿಮಿಷಗಳು: ವಾದ್ಯಗಳು ಅನಾಥವಾಗಿವೆ ಪ್ರಭೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳಕೃಷ್ಣಬುವಾ ಈಚಲಕರಂಜೀಕರ ಗ್ವಾಲಿಯರ್ ಘರಾಣೆಯ ಅಪ್ರತಿಮ ಗಾಯಕರಲ್ಲಿ ಒಬ್ಬರು. ಅವರು ಈಚಲಕರಂಜಿಯ ಸಂಸ್ಥಾನದಲ್ಲಿ ಆಶ್ರಯವನ್ನು ಹೊಂದಿದ್ದರು. ಸಂಸ್ಥಾನಿಕ ಶ್ರೀಮಂತ ಬಾಬಾಸಾಹೇಬರು ಬಾಳಕೃಷ್ಣಬುವಾ ಅವರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ತಮ್ಮೊಡನೆ ನಿತ್ಯ ಸಹಭೋಜನ ಮಾಡುವ ಗೌರವವನ್ನು ಅವರಿಗೆ ನೀಡಿದ್ದರು. ಬಾಳಕೃಷ್ಣಬುವಾ ಅವರಿಗೆ ವಾಡೆಯಿಂದ ಮಾಸಿಕ ವೇತನ, ಮನೆಯ ಖರ್ಚಿಗಾಗಿ ಹಣ, ಕಾಳು-ಕಡಿ ಸಂದಾಯವಾಗುತ್ತಿತ್ತು.ಬಾಬಾಸಾಹೇಬರು ಪರಿಣತ ಸಿತಾರ ವಾದಕರಾಗಿದ್ದರು. ಹೀಗಾಗಿ ಅವರಿಗೆ ಸಂಗೀತ ಹಾಗೂ ಸಂಗೀತಗಾರರ ಮೇಲೆ ಅಪಾರವಾದ ಪ್ರೀತಿ ಇರುವುದು ಸಹಜವೇ ಆಗಿತ್ತು. ಇಂಥ ಅನೇಕ ಸಂಗೀತ ಪ್ರೇಮಿ ಸಂಸ್ಥಾನಿಕರು ಆ ಕಾಲದಲ್ಲಿ ಭಾರತೀಯ ಸಂಗೀತ ಉನ್ನತ ಮಟ್ಟಕ್ಕೇರಲು ಕಾರಣರಾದರು.ಸಮಯ ಪಾಲನೆಯಲ್ಲಿ ಬಾಬಾಸಾಹೇಬರದು ಅತ್ಯಂತ ಶಿಸ್ತು. ನಿತ್ಯದ ದಿನಚರಿಗಳು ಒಂದಿಷ್ಟೂ ಆಚೆ-ಈಚೆ ಆಗುವಂತಿರಲಿಲ್ಲ. ನಿತ್ಯ ಬೆಳಗಿನ ಜಾವ ವಾಡೆಯ ಆವರಣದಲ್ಲಿ ಸುತ್ತಾಡಿ, ಏಳೂವರೆ ವೇಳೆಗೆ ತಮ್ಮ ಕೋಣೆಗೆ ಬರುತ್ತಿದ್ದರು. ಅಂದಿನ ‘ಟೈಮ್ಸ್’ ಪತ್ರಿಕೆಯನ್ನು ಓದಿದ ನಂತರ ಮುಂದಿನ ಕಾರ್ಯಗಳಿಗೆ ಅಣಿಗೊಳ್ಳುತ್ತಿದ್ದರು. ಒಂದು ದಿನ ಪತ್ರಿಕೆಯನ್ನು ಓದುತ್ತ ಕುಳಿತಿರುವಾಗ, ಹೊರಗಿನಿಂದ ಬಾಳಕೃಷ್ಣಬುವಾ ಧ್ವನಿ ಕೇಳಿಸಿತು. ತಮ್ಮನ್ನು ಒಳಗೆ ಬಿಡುವಂತೆ ವಿನಂತಿಸುತ್ತಿದ್ದ ಅವರನ್ನು ಪರಿಚಾರಕ ತಡೆಯುತ್ತಿರುವುದು ಗಮನಕ್ಕೆ ಬಂತು. ಬುವಾ ಅವರನ್ನು ಒಳಗೆ ಕಳುಹಿಸುವಂತೆ ಬಾಬಾಸಾಹೇಬರು ಹೇಳಿದರು.ಒಳಗೆ ಬಂದ ಬಾಳಕೃಷ್ಣಬುವಾ ವಿನಂತಿಸಿಕೊಂಡರು: ‘ಪ್ರಭು, ನಾನು ಮುಂಬೈಗೆ ಹೋಗುವುದಾಗಿ ನಿರ್ಧರಿಸಿದ್ದೇನೆ’.

ಪ್ರಭುಗಳು ಆಶ್ಚರ್ಯಚಕಿತರಾಗಿ ಕೇಳಿದರು: ‘ಯಾಕೆ, ನಮ್ಮ ಆಶ್ರಯ ಬೇಸರ ತರಿಸಿತೆ?’‘ಕ್ಷಮಿಸಿ ಪ್ರಭು. ಆ ವಿಚಾರ ಕನಸಿನಲ್ಲಿಯೂ ಸುಳಿಯುವುದು ಸಾಧ್ಯವಿಲ್ಲ. ತಮ್ಮಂಥ ಮರ್ಮಜ್ಞ ಶ್ರೋತೃಗಳು ಸಿಗುವುದೇ ಅಪರೂಪ’.

‘ಮತ್ತೆ ಈ ವಿಚಾರವೇಕೆ?’‘ಪ್ರಭು, ತಮಗೆ ಗೊತ್ತಿದೆ. ಸಂಗೀತಗಾರರಿಗೆ ಅವರ ವಾದ್ಯಗಳೇ ಜೀವಾಳ. ನನಗಾದ ನೋವನ್ನು ನಾನು ಸಹಿಸಿಕೊಳ್ಳಬಲ್ಲೆ. ನನ್ನ ವಾದ್ಯಗಳಿಗೆ ಏನಾದರೂ ಆದರೆ ಸಹಿಸುವುದು ಕಷ್ಟವಾಗುತ್ತದೆ. ಅವು ನನ್ನ ಪಂಚಪ್ರಾಣಗಳಿದ್ದಂತೆ’.‘ಏನಾಗಿದೆ ನಿಮ್ಮ ಪಂಚಪ್ರಾಣಗಳಿಗೆ?’

‘ನನ್ನ ವಾದ್ಯಗಳು ಅನಾಥವಾಗಿವೆ ಪ್ರಭು’.

‘ಏನಾಯಿತು ವಿವರಿಸಿ’.ಬಾಳಕೃಷ್ಣಬುವಾ ಧೈರ್ಯ ಒಗ್ಗೂಡಿಸಿಕೊಂಡು ಹೇಳಿದರು- ‘ಪ್ರಭು ನನ್ನ ವಾದ್ಯಗಳ ಪೋಷಣೆಗಾಗಿ ವಾಡೆಯಿಂದ ಪ್ರತಿ ತಿಂಗಳೂ ಒಂದು ಲೋಟ ಬೆಣ್ಣೆ ಹಾಗೂ ಒಂದು ಲೋಟ ಅರಿಷಿಣ ಮನೆಗೆ ಸಂದಾಯವಾಗುತ್ತಿತ್ತು. ಈಗದು ಅರ್ಧಲೋಟಕ್ಕೆ ಇಳಿದಿದೆ. ಇದರಿಂದ ವಾದ್ಯಗಳನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನ ವಾದ್ಯಗಳು ಅನಾಥವಾಗಿವೆ’.‘ಯಾರು ಈ ಕಡಿತವನ್ನು ಜಾರಿಗೆ ತಂದವರು?’

‘ಗೊತ್ತಿಲ್ಲ ಪ್ರಭು’.ಸಂಸ್ಥಾನಿಕರು ತಕ್ಷಣ ಸಂಬಂಧಪಟ್ಟವರನ್ನು ಕರೆಸಿ ವಿಚಾರಿಸಿದರು. ಸಂಸ್ಥಾನದ ಆರ್ಥಿಕ ಸ್ಥಿತಿಯ ಕಾರಣದಿಂದ ಈ ರೀತಿ ಮಾಡಲಾಗಿದೆ ಎಂಬ ಉತ್ತರ ದೊರೆಯಿತು. ತಕ್ಷಣ ಬಾಬಾಸಾಹೇಬ್‌ರು, ಸಂಗೀತ ಹಾಗೂ ಸಂಗೀತಗಾರರಿಗೆ ಯಾವ ಕೊರತೆಯೂ ಉಂಟಾಗದಂತೆ ಜಾಗ್ರತೆ ವಹಿಸಲು ಆಜ್ಞಾಪಿಸಿದರು.ಬಾಳಕೃಷ್ಣಬುವಾ ಮತ್ತೆ ಅದೇ ಸಂಸ್ಥಾನದಲ್ಲಿ ಮುಂದುವರಿದರು. ತಮ್ಮ ಅಮೋಘ ಸಂಗೀತದಿಂದ ಬಾಬಾಸಾಹೇಬರನ್ನು ರಂಜಿಸಿದರು.ಅಂದಿನ ಆಳರಸರು ಕಲಾವಿದರನ್ನು ತಮ್ಮ ಮಕ್ಕಳಂತೆ ಪಾಲಿಸುತ್ತಿದ್ದರಿಂದಲೇ ಅನೇಕ ಪ್ರಖ್ಯಾತ ಕಲಾವಿದರು ರೂಪುಗೊಳ್ಳಲು ಸಾಧ್ಯವಾಯಿತು ಎನ್ನುವುದಕ್ಕೆ ಈ ಘಟನೆ ಉದಾಹರಣೆಯಂತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.