ಶುಕ್ರವಾರ, ಮೇ 14, 2021
29 °C

ನಾನು ಕಂಡ ವಿವೇಕಾನಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತ್ಯದ ಅನ್ವೇಷಣೆಯಲ್ಲಿ...ಸತ್ಯವನ್ನೇ ಹೇಳಬೇಕು ಮತ್ತು ಪ್ರಾಮಾಣಿಕರಾಗಿ ಇರಬೇಕು ಎಂದು ಚಿಕ್ಕಂದಿನಲ್ಲಿ ನಮಗೆಲ್ಲ ಹೇಳಿಕೊಟ್ಟಿರುತ್ತಾರೆ. ಇದರಿಂದ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವು ನಮಗೆ ಇದ್ದೇ ಇರುತ್ತದೆ.

 

ನಮ್ಮ ತಂದೆ ತಾಯಿ, ಕುಟುಂಬದ ಸದಸ್ಯರು ಮತ್ತು ಶಿಕ್ಷಕರು ಸತ್ಯವನ್ನೇ ಹೇಳುವಂತೆ ನಮಗೆ ಬುದ್ಧಿವಾದ ಹೇಳುತ್ತಾರೆ. ಆದರೆ ನಾವು ಬೆಳೆಯುತ್ತಾ ಬಂದಂತೆ, ನಮಗೆ ಅನುಕೂಲಕ್ಕೆ ತಕ್ಕಂತೆ ನಾವು ಸತ್ಯವಂತರು ಮತ್ತು ಪ್ರಾಮಾಣಿಕರು ಆಗಿರಬೇಕು ಎಂಬುದನ್ನೂ ಇದೇ ವಾತಾವರಣವೇ ನಮಗೆ ಕಲಿಸಿಕೊಡುತ್ತದೆ.ಸತ್ಯವಂತರಾಗಿ ಇರುವುದು ನಮ್ಮ ನೆಮ್ಮದಿ ಕೆಡಿಸಿದರೆ ಅದರಿಂದ ನಮಗೆ ಆಘಾತವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸತ್ಯದ ಬಗ್ಗೆ ಗಾಢ ನಂಬಿಕೆ ಇಟ್ಟವರು ಅಪರೂಪದಲ್ಲಿ ನಮಗೆ ಕಾಣಸಿಗುತ್ತಾರೆ. ಇಂತಹ ಅಸಾಮಾನ್ಯ ವ್ಯಕ್ತಿಗಳು ಚರಿತ್ರೆಯ ಗತಿಯನ್ನೇ ಬದಲಿಸಬಹುದಾದಷ್ಟು ಪ್ರಭಾವಶಾಲಿಗಳಾಗಿರುತ್ತಾರೆ.ಅವರು ಮಹಾತ್ಮ ಗಾಂಧೀಜಿಯೇ ಆಗಿರಲಿ ಸ್ವಾಮಿ ವಿವೇಕಾನಂದರೇ ಆಗಿರಲಿ ಸತ್ಯದ ಬಗೆಗಿನ ಅವರ ಪ್ರೀತಿಯ ಬಗ್ಗೆ ಸಾಕಷ್ಟು ದಂತಕತೆಗಳೇ ಇವೆ. ಸತ್ಯ ಯಾರಿಗೂ ಗೌರವ ತೋರಿಸುವುದಿಲ್ಲ, ಬದಲಿಗೆ ಸಮಾಜವೇ ಸದಾಕಾಲ ಸತ್ಯಕ್ಕೆ ಗೌರವ ಸಲ್ಲಿಸುತ್ತದೆ ಎಂದು ಸ್ವಾಮಿ ವಿವೇಕಾನಂದರು ಸದಾ ಕಾಲ ಹೇಳುತ್ತಿದ್ದರು.ಬಾಲಕ ನರೇಂದ್ರ ಶಾಲೆಯಲ್ಲಿದ್ದಾಗ ನಡೆದ ಒಂದು ಘಟನೆ ನನಗೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಅವರದು ಕತೆ ಹೇಳುವುದರಲ್ಲಿ ಎತ್ತಿದ ಕೈ.ಅವರು ಸಂಗತಿಗಳನ್ನು ವಿವರಿಸಲು ಆರಂಭಿಸಿದರೆಂದರೆ ಅವರ ಸ್ನೇಹಿತರು ಮೈಮರೆತು ಕುಳಿತು ಅದನ್ನು ಕೇಳುತ್ತಿದ್ದರು. ಒಮ್ಮೆ ಹೀಗೆಯೇ ಅವರು ಶಾಲೆಯ ತರಗತಿಯಲ್ಲಿ ಸಹಪಾಠಿಗಳಿಗೆ ಕತೆಯೊಂದನ್ನು ವಿವರಿಸುತ್ತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಅವರ ಶಿಕ್ಷಕರು ತರಗತಿ ಪ್ರವೇಶಿಸಿ ಪಾಠ ಹೇಳಲು ಶುರು ಮಾಡಿದರು.ಆದರೂ ನರೇಂದ್ರರ ಕತಾ ಪ್ರಪಂಚ ಮಾತ್ರ ಪಿಸುದನಿಯಲ್ಲೇ ಮುಂದುವರಿದಿತ್ತು. ವಿದ್ಯಾರ್ಥಿಗಳ ಕಿವಿ, ಮನಸ್ಸೆಲ್ಲಾ ನರೇಂದ್ರರ ಕತೆಯತ್ತಲೇ ಇತ್ತಾದ್ದರಿಂದ ಪಾಠದತ್ತ ಅವರ ಚಿತ್ತ ಹರಿದಿರಲಿಲ್ಲ. ಗುಸುಗುಸು ದನಿ ಕೇಳಿದ ಶಿಕ್ಷಕರಿಗೆ ಸಿಟ್ಟು ಬಂತು. ನಾನು ಈವರೆಗೆ ಏನು ಪಾಠ ಹೇಳಿದೆ ಎಂದು ಹೇಳಿ ನೋಡೋಣ ಎಂದು ವಿದ್ಯಾರ್ಥಿಗಳನ್ನು ಕೇಳಿದರು.

 

ಆದರೆ ನರೇಂದ್ರ ಒಬ್ಬರನ್ನು ಬಿಟ್ಟು ಉಳಿದವರ‌್ಯಾರಿಗೂ ಉತ್ತರಿಸಲು ಸಾಧ್ಯವಾಗಲಿಲ್ಲ. ಒಂದೇ ಸಮಯದಲ್ಲಿ ಎರಡೂ ಕಡೆ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ನರೇಂದ್ರ ಅವರಿಗೆ ಇತ್ತು. ಅವರು ಗೆಳೆಯರಿಗೆ ಕತೆ ಹೇಳುತ್ತ ಹೇಳುತ್ತಲೇ ಶಿಕ್ಷಕರು ಹೇಳುತ್ತಿದ್ದ ಪಾಠವನ್ನೂ ಅಂತರ್ಗತ ಮಾಡಿಕೊಳ್ಳಬಲ್ಲವರಾಗಿದ್ದರು.ತರಗತಿಯಲ್ಲಿ ಮಾತನಾಡುತ್ತಾ ಪಾಠಕ್ಕೆ ಅಡ್ಡಿಪಡಿಸುತ್ತಿದ್ದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಶಿಕ್ಷಕರು ಮುಂದಾದರು. ಎಲ್ಲ ವಿದ್ಯಾರ್ಥಿಗಳೂ ನರೇಂದ್ರರತ್ತಲೇ ಬೊಟ್ಟು ಮಾಡಿದರು. ಆದರೆ ಅದನ್ನು ನಂಬಲು ಮಾತ್ರ ಶಿಕ್ಷಕರು ತಯಾರಿರಲಿಲ್ಲ.ಅವರು ನರೇಂದ್ರ ಒಬ್ಬರನ್ನು ಬಿಟ್ಟು ಉಳಿದವರೆಲ್ಲರಿಗೂ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ ವಿಧಿಸಿದರು. ಆಗ ಸದ್ದಿಲ್ಲದೇ ನರೇಂದ್ರ ಸಹ ಬೆಂಚನ್ನು ಏರಿದರು. ಏನೂ ತಪ್ಪು ಮಾಡಿಲ್ಲದ್ದರಿಂದ ಕೆಳಗೆ ಕುಳಿತುಕೊಳ್ಳುವಂತೆ ಶಿಕ್ಷಕರು ನರೇಂದ್ರರಿಗೆ ತಿಳಿಸಿದರು.ಆದರೆ ಅದಕ್ಕೆ ನರೇಂದ್ರ `ಇಲ್ಲ ಸರ್, ನಾನು ನಿಂತುಕೊಳ್ಳಲೇ ಬೇಕು, ಏಕೆಂದರೆ ಅವರೊಂದಿಗೆ ಮಾತನಾಡುತ್ತಿದ್ದವನು ನಾನೇ~ ಎಂದು ಉತ್ತರಿಸಿದರು. ತನ್ನ ತಪ್ಪಿಗಾಗಿ ಸ್ನೇಹಿತರು ಶಿಕ್ಷೆ ಅನುಭವಿಸುತ್ತಿರುವಾಗ ಸದ್ದಿಲ್ಲದೇ ಕುಳಿತುಕೊಳ್ಳುವುದು ನರೇಂದ್ರರಿಗೆ ಸಾಧ್ಯವಾಗಲಿಲ್ಲ.

 

ತರಗತಿಗೆ ಅಡ್ಡಿಪಡಿಸಿದ್ದು ತಾವೇ ಆದ್ದರಿಂದ ತಮಗೆ ಶಿಕ್ಷೆಯಾಗಲೇಬೇಕು ಎಂಬುದು ಅವರ ನಿಲುವಾಗಿತ್ತು. ಶಿಕ್ಷೆಯಿಂದ ಆಗುವ ತೊಂದರೆಯಾಗಲೀ, ಕಿರಿಕಿರಿಯಾಗಲೀ ಸತ್ಯದಿಂದ ಅವರನ್ನು ಹಿಮ್ಮೆಟ್ಟುವಂತೆ ಮಾಡುವುದು ಸಾಧ್ಯವಿರಲಿಲ್ಲ.ವಿವೇಕಾನಂದರು ಬಾಲ್ಯದಿಂದಲೇ ಸತ್ಯದ ಅನ್ವೇಷಣೆಯಲ್ಲಿ ನಿರತರಾಗಿದ್ದಕ್ಕೆ ಇದು ಒಂದು ಉದಾಹರಣೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ಅವರು ಒಮ್ಮೆ ಹೀಗೆ ಗುಡುಗಿದ್ದರು: `ಸತ್ಯಕ್ಕೆ ಮಾತ್ರ ಜಯವೇ ಹೊರತು ಅಸತ್ಯಕ್ಕಲ್ಲ. ಸತ್ಯ ಮಾತ್ರ ದೇವರ ಬಳಿಗೆ ಹೋಗುವ ಮಾರ್ಗವನ್ನು ತೋರುತ್ತದೆ.

 

ಸತ್ಯ ಪಸರಿಸಲು ಒಂದಿಷ್ಟು ಸುಳ್ಳನ್ನು ಬೆರೆಸಬೇಕು ಎಂಬುದು ಕೆಲವರ ಅನಿಸಿಕೆ. ಆದರೆ ಒಂದು ಹನಿ ವಿಷ ಉಳಿದೆಲ್ಲವನ್ನೂ ಹಾಳುಗೆಡವುವಂತೆ ಒಂದು ಸುಳ್ಳು, ಉದ್ದೇಶವನ್ನೇ ಅನರ್ಥಗೊಳಿಸುತ್ತದೆ ಎಂಬ ಅರಿವು ಅಂತಹವರಿಗೆ ನಂತರ ಆಗುತ್ತದೆ...

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.