ಭಾನುವಾರ, ಮೇ 9, 2021
19 °C

ನಾನು ರಾಜೀನಾಮೆ ನೀಡಿದ್ದೇಕೆಂದರೆ....

ಎಂ.ವೈ. ಘೋರ್ಪಡೆ Updated:

ಅಕ್ಷರ ಗಾತ್ರ : | |

ಎ‌ಲ್ಲಾ ಅಡೆತಡೆಗಳನ್ನು ಮೀರಿ ‌ಹೊಸತಾಗಿ ರೂಪುಗೊಂಡಿದ್ದ 5,600 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು 1993ರ ಡಿಸೆಂಬರ್‌ನಲ್ಲಿ ನಡೆಸಿದೆವು. ಈ ಪ್ರಕ್ರಿಯೆ ಜನರಲ್ಲಿ ಬಹಳ ಉತ್ಸಾಹಕ್ಕೆ ಕಾರಣವಾಯಿತು. 80,000 ಮಂದಿ ಸದಸ್ಯರು ಆಯ್ಕೆಯಾದರು. ಇದರಲ್ಲಿ ಶೇಕಡಾ 23ರಷ್ಟು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳಿಗೆ ಸೇರಿದವರು.ಶೇಕಡಾ 33ರಷ್ಟು ಇತರ ಹಿಂದುಳಿದ ಜಾತಿಗಳವರು. (ಎಲ್ಲಾ ಮೀಸಲು ಮತ್ತು ಸಾಮಾನ್ಯ ಸ್ಥಾನಗಳಲ್ಲಿಯೂ ಶೇಕಡಾ 33ರಷ್ಟು ಮಹಿಳಾ ಮೀಸಲಾತಿಯಿತ್ತು). ಒಟ್ಟು ಸದಸ್ಯರಲ್ಲಿ ಶೇಕಡಾ 43ರಷ್ಟು ಮಹಿಳೆಯರೇ ಇದ್ದರು. ಮಹಿಳೆಯರನ್ನು ರಾಜಕಾರಣದಿಂದ ದೂರವಿಡುವ ಪರಿಪಾಠವುಳ್ಳ ನಮ್ಮ ಸಾಮಾಜಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟು ಕೊಂಡರೆ ಇದೊಂದು ದೊಡ್ಡ ಸಾಧನೆಯೇ.

ಗ್ರಾಮ ಪಂಚಾಯಿತಿ ಚುನಾವಣೆಗಳೇನೋ ಸಾಂಗವಾಗಿ ನಡೆದವು. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯ ಇನ್ನೆರಡು ಅಂಗಗಳಾದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯ ವಿಚಾರ ಬಂದಾಗ ಶಾಸಕರ ಒಂದು ವಿಭಾಗ ಅದನ್ನು ವಿರೋಧಿಸ ತೊಡಗಿತು. ಇದರಿಂದ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಸ್ಥಾನವೂ ಅದುರ ಲಾರಂಭಿಸಿತು. ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿ ತಾವು ಆ ಸ್ಥಾನಕ್ಕೆ ಏರಬೇಕೆಂದಿದ್ದವರು ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದರು. ಈ ಉರುಳಿಸುವ ಆಟ ಒಂದು ಕಾಯಿಲೆಯಾಗಿಬಿಟ್ಟಿತು. ಇದಕ್ಕೆ ಬಲಿಯಾದದ್ದು ಹೊಸತಾಗಿ ರೂಪುಗೊಂಡಿದ್ದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆ. ಆಮೇಲೆ ನಡೆದದ್ದು ವಿಚಿತ್ರ ಎನಿಸುವಂಥ ಬೆಳವಣಿಗೆಗಳು. ಆ ಹೊತ್ತಿ­ಗಾಗಲೇ ರಾಜ್ಯ ಚುನಾವಣಾ ಆಯುಕ್ತರು ಚುನಾವಣೆಯ ದಿನಗಳನ್ನೂ ಘೋಷಿಸಿದ್ದರು. ಪಂಚಾಯಿತಿ ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮಾತುಕೊಟ್ಟಿದ್ದರ ಪರಿಣಾಮವಾಗಿ ಚುನಾವಣೆಯ ದಿನಾಂಕ ನಿಶ್ಚಯವಾಗಿತ್ತು. ರಾಜ್ಯ ಚುನಾವಣಾ ಆಯುಕ್ತರು ರಾಜ್ಯಪಾಲರಿಗೆ ನೀಡಿದ್ದ ವರದಿಯಲ್ಲಿ 1994ರ ಮೇ ತಿಂಗಳಿನಲ್ಲಿ ಚುನಾವಣೆ ನಡೆಸದೇ ಇದ್ದರೆ 1995ರ ಮೇ ತಿಂಗಳ ತನಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ನಾನಂತೂ 1994ರ ಮೇ ಅಂತ್ಯದೊಳಗೆ ಚುನಾವಣೆ ನಡೆಸದೆ ಅವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಯಾವ ಪ್ರಯತ್ನಕ್ಕೂ ಜೊತೆಯಾಗಲು ಸಾಧ್ಯವಿಲ್ಲ, ಅಂತಹ ಸಂದರ್ಭ ಬಂದರೆ ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದೆ.  ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೂ ತಿಳಿಸಿದ್ದೆ.ಏಪ್ರಿಲ್ 30ರಂದು ತುರ್ತು ಸಂಪುಟ ಸಭೆಗೆ ಆಹ್ವಾನ ಬಂತು. ಚುನಾವಣಾ ಆಯೋಗ ಮೇ 2ರಂದೇ ಘೋಷಿಸಿದಂತೆ 1994ರ ಮೇ 26 ಮತ್ತು 29ರಂದು ನಡೆಯಬೇಕಾಗಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಒಪ್ಪಿಗೆಗೆ ದೆಹಲಿಗೆ ಕಳುಹಿಸುವ ದುರದೃಷ್ಟಕರ ನಿರ್ಧಾರವೊಂದನ್ನು ಕೈಗೊಳ್ಳುವುದಕ್ಕೆ ಈ ಸಂಪುಟ ಸಭೆ ಏರ್ಪಾಡಾಗಿತ್ತು.  ಒಂದು ದಿನದ ಹಿಂದಷ್ಟೇ ಕರ್ನಾಟಕ ಹೈಕೋರ್ಟ್ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವುದಕ್ಕೆ ನಿರಾಕರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಏಪ್ರಿಲ್ 18ರಂದೇ ರಾಜಕೀಯ ವ್ಯವಹಾರಗಳ ಸಮಿತಿ ಒಪ್ಪಿದಂತೆ ಚುನಾವಣಾ ಆಯುಕ್ತರಾಗಿದ್ದ ಪಿ.ಎಸ್.ನಾಗರಾಜನ್ ಚುನಾವಣಾ ದಿನಾಂಕಗಳನ್ನು ಘೋಷಿಸಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಕೂಡಾ ಈ ನಿರ್ಧಾರವನ್ನು ಸ್ವಾಗತಿಸಿತ್ತು.ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳೂ ಏಪ್ರಿಲ್ 27 ಮತ್ತು 29ರಂದು ನಡೆದ ತಮ್ಮ ಸಭೆಗಳಲ್ಲಿ ಚುನಾವಣೆಯ ನಿರ್ಧಾರವನ್ನು ಸ್ವಾಗತಿಸಿದ್ದವು. ಎಲ್ಲಾ ಜಿಲ್ಲೆಗಳಲ್ಲಿಯೂ ಉಮೇದುವಾರರನ್ನು ಆರಿಸುವ ಪ್ರಕ್ರಿಯೆಯೂ ಆರಂಭಗೊಂಡಿತ್ತು. ಮೇ 4 ಅಥವಾ 5ರ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಂಡು ಮೇ 6ರಂದು ನಾಮಪತ್ರ ಸಲ್ಲಿಸುವಿಕೆಯೂ ಆರಂಭಗೊಳ್ಳಬೇಕಿತ್ತು. ಈ ಹೊತ್ತಿಗಾಗಲೇ ಚುನಾವಣಾ ಪ್ರಕ್ರಿಯೆಗಾಗಿ 16 ಕೋಟಿ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡಿತ್ತು. ಚುನಾವಣೆಗಳನ್ನು ನಡೆಸುವುದಕ್ಕೆ ಯಾವ ತೊಂದರೆಗಳೂ ಇರಲಿಲ್ಲ.ನನ್ನ ರಾಜೀನಾಮೆ ಕೇವಲ ವೈಯಕ್ತಿಕವಾದುದಾಗಿರಲಿಲ್ಲ. ಇದಕ್ಕೊಂದು ರಾಷ್ಟ್ರೀಯ ಆಯಾಮವಿತ್ತು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿಗೆ ತರಬೇಕಾದ ನಮ್ಮ ಸಾಮೂಹಿಕ ಇಚ್ಛಾಶಕ್ತಿಗೆ ಸಂಬಂಧಿಸಿದ್ದಾಗಿತ್ತು. ಸಂವಿಧಾನದ 73ನೇ ತಿದ್ದುಪಡಿ 1993ರ ಏಪ್ರಿಲ್ 24ರಿಂದ ಆರಂಭಗೊಳ್ಳುವ ಒಂದು ವರ್ಷದೊಳಗೆ ರಾಜ್ಯಗಳು ತಮ್ಮ ಕಾಯ್ದೆಗಳಿಗೆ ತಿದ್ದುಪಡಿ ತರಬೇಕೆಂದು ನಿರ್ದೇಶಿಸಿತ್ತಷ್ಟೇ ಅಲ್ಲದೆ ಅದಾದ ಆರು ತಿಂಗಳೊಳಗೆ ಚುನಾವಣೆಗಳನ್ನೂ ನಡೆಸಬೇಕೆಂದಿತ್ತು.ನಾನು ನನ್ನ ಸಚಿವ ಸ್ಥಾನಕ್ಕೆ 1994ರ ಮೇ 1ರಂದು ರಾಜೀನಾಮೆ ನೀಡಿದೆ. ಮುಖ್ಯಮಂತ್ರಿ ನನ್ನನ್ನು ಸಂಪರ್ಕಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯಲ್ಲಿ ಮುಂದುವರಿಯುವುದಕ್ಕೆ ಕಷ್ಟ ಎನಿಸಿದರೆ ಹಣಕಾಸು ಖಾತೆಯನ್ನು ನಿರ್ವಹಿಸಿ ಎಂದರು. ಇದು ಅವರ ಸದಾಶಯದ ಸಂಕೇತವಾಗಿತ್ತೆಂಬುದು ನಿಜ. ಆದರೆ ನಾನು ರಾಜೀನಾಮೆ ನೀಡಬೇಕಾದ ಸಂದರ್ಭ ಏಕೆ ಉದ್ಭವಿಸಿತು ಎಂಬುದು ಅವರಿಗೂ ಅರ್ಥವಾದಂತಿರಲಿಲ್ಲ.ಪಂಚಾಯಿತಿ ಚುನಾವಣೆಗಳನ್ನು ಅರ್ಧದಲ್ಲಿಯೇ ಅನಿರ್ದಿಷ್ಟಾವಧಿಗೆ ಮುಂದೂಡಿದ ಸರ್ಕಾರದಲ್ಲಿರಲು ನನಗೆ ಇಷ್ಟವಿರಲಿಲ್ಲ. ಸಹಜವಾಗಿಯೇ ಖಾತೆಯ ಬದಲಾವಣೆ ಒಂದು ಪರಿಹಾರ ಎನಿಸಲಿಲ್ಲ. ಆದರೆ ಜನರಿಗೆ ಮತ್ತು ಮಾಧ್ಯಮಗಳಿಗೆ ನನ್ನ ರಾಜೀನಾಮೆಯ ಕಾರಣವು ಸರಿಯಾಗಿ ಅರ್ಥವಾಯಿತು. ಇದು ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶವನ್ನು ಸಫಲಗೊಳಿಸಿತು.

ದಿ. ಎಂ.ವೈ. ಘೋರ್ಪಡೆಯವರ ಆತ್ಮಕಥೆ 'Down Memory Lane'ನಿಂದ ಆಯ್ದ ಭಾಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.