ಭಾನುವಾರ, ಮೇ 9, 2021
18 °C

ನಾಯಕನ ನಿರಂತರ ಉಸಿರಾಟ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಕಾರ್ಪೊರೇಟ್ ಕಂಪೆನಿಯೊಂದರ ಕ್ರಿಕೆಟ್ ತಂಡ. ಸುಮಾರು ವರ್ಷಗಳಿಂದ ಅದರಲ್ಲಿ ಆಡುತ್ತಿರುವ ಒಬ್ಬರಿದ್ದಾರೆ. ಕಂಪೆನಿಯಿಂದ ಕಂಪೆನಿಗೆ ಕೆಲಸ ಬದಲಿಸುವುದು ಅವರಿಗೆ ಮಾಮೂಲು. ಅವರೀಗ ಕೆಲಸ ಮಾಡುತ್ತಿರುವುದು ಅವರ ವೃತ್ತಿ ಬದುಕಿನ ಹತ್ತನೇ ಕಂಪೆನಿ.

 

ಇಲ್ಲಿ ಮಾತ್ರ ಆರು ವರ್ಷಗಳಿಂದ ನೆಲೆಗೊಂಡಿದ್ದಾರೆ. ಅವರು ಎಲ್ಲೇ ಇದ್ದರೂ ಕ್ರಿಕೆಟ್ ಆಡುವುದನ್ನು ಮಾತ್ರ ಬಿಟ್ಟಿಲ್ಲ. ಒಂದೆರಡು ಕಂಪೆನಿಗಳಲ್ಲಿ ತಂಡಗಳೇ ಇರಲಿಲ್ಲ. ಅವನ್ನು ರೂಪಿಸಿದ್ದೇ ಅವರು. ಈಗಿನ ತಂಡದಲ್ಲಿ ಅವರು ನಾಯಕರಲ್ಲ. ಆದರೆ, ವರ್ಷಗಳಿಂದ ಅವರನ್ನು ನೋಡುತ್ತಿರುವ ಇತರೆ ತಂಡಗಳ ನಾಯಕರಿಗೆಲ್ಲಾ ಅವರ ಪರಿಚಯವಿದೆ. ನಾಯಕನಲ್ಲದಿದ್ದರೂ ಅವರೇ ನಾಯಕ ಎಂಬ ಅರಿವಿದೆ.ಐಪಿಎಲ್ ಕ್ರಿಕೆಟ್ ಕಾರಂಜಿ ಮತ್ತೆ ಚಿಮ್ಮತೊಡಗಿರುವ ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ತಾವು ಇಷ್ಟಪಡುವ ಅನುಭವಿ ಸ್ಪಿನ್ನರ್ ಹರಭಜನ್ ಸಿಂಗ್ ಕೈಗೆ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ.

 

ಅದನ್ನು ಹರಭಜನ್ ಕೂಡ ತುಂಬು ಮನಸ್ಸಿನಿಂದ ಸ್ವೀಕರಿಸಿದ್ದಾರೆ. ಅವರಿಗೆ ಇರುವ ಸಂತೋಷವೆಂದರೆ, ಸಚಿನ್ ತಂಡದಲ್ಲಿ ಈಗಲೂ ಇರುತ್ತಾರೆಂಬುದು. ಅಂದರೆ, ಸಚಿನ್ ಶಾಶ್ವತ ನಾಯಕ ಎಂಬ ಭಾವ ಹರಭಜನ್ ಅವರದ್ದು.ಸಾಂಘಿಕ ಆಟದಲ್ಲಿ ಕೆಲವರ ಉಪಸ್ಥಿತಿಯೇ ದೊಡ್ಡ ಮಟ್ಟದ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಸಚಿನ್ ಉಪಸ್ಥಿತಿಯದ್ದೂ ಅದೇ ಜಾಯಮಾನ. ಸಚಿನ್ ದೇಶ ಇಷ್ಟಪಡುವ ಆಟಗಾರ. ದೇಶಕ್ಕಾಗಿ ಆಡುವ ಆಟಗಾರ. ಸದಾ ಟೀಕೆಗಳ ಭಾರ ಹೊತ್ತ ಆಟಗಾರ. ತಂಡದ ಇತರೆ ಆಟಗಾರರೆಲ್ಲಾ ವಿಫಲರಾದ ಸಂದರ್ಭದಲ್ಲಿ ಚೆನ್ನಾಗಿ ಆಡಿಯೂ ಸೋತು, ಅದರ `ಗೂಬೆ~ಯನ್ನೂ ಹೊರಿಸಿಕೊಂಡ ಆಟಗಾರ.ಸರಿಯಾದ ತಾಳಮೇಳವಿಲ್ಲದ ತಂಡ ಕಟ್ಟಿಕೊಂಡು ಏಗಲು ಪರದಾಡಿ ಹಿಂದೊಮ್ಮೆ ಭಾರತ ತಂಡದ ನಾಯಕತ್ವದ ನೊಗವನ್ನು ಸ್ವಇಚ್ಛೆಯಿಂದ ಇಳಿಸಿದ ಆಟಗಾರ. ನೂರನೇ ಶತಕ ಗಳಿಸಲು ವರ್ಷಕ್ಕೂ ಮಿಗಿಲಾಗಿ ಹೆಣಗಾಡಿದ ಆಟಗಾರ. ವಿಶ್ವಕಪ್ ಗೆದ್ದು ಬೀಗಿದ ಯುವಶಕ್ತಿ ತಂಡದ ಭಾಗವಾದ ಆಟಗಾರ.ಸಚಿನ್ ಕ್ರಿಕೆಟ್ `ಗ್ರಾಫ್~ನ ಮೇಲೆ ಕಣ್ಣಾಡಿಸಿದಾಗ ಅದರಲ್ಲಿ ಏರಿಳಿತಗಳು ಕಾಣುತ್ತವೆ. ಪೃಷ್ಠದ ಕೆಳಭಾಗದ ಮೂಳೆಯಲ್ಲಿ ಬಿಟ್ಟ ಬಿರುಕು ತಂದ ನೋವಿನ ಸಂಗತಿ ಗೊತ್ತಾಗುತ್ತದೆ. `ಟೆನ್ನಿಸ್ ಎಲ್ಬೋ~ ಶಸ್ತ್ರಚಿಕಿತ್ಸೆಯ ಚರ್ಚೆ ಇಣುಕುತ್ತದೆ. ನೂರನೇ ಶತಕ ಗಳಿಸಲು ಪರದಾಡುತ್ತಿದ್ದಾಗ ಮೂಡಿದ ಅಣಕಿಸುವ ಕಾರ್ಟೂನು ಗೆರೆಗಳು ರಾಚುತ್ತವೆ.`ನಿಂದಕರಿರಬೇಕು~ ಎಂಬಂತೆ ಸಚಿನ್ ಬಂದದ್ದೆಲ್ಲವನ್ನೂ ಒಂದಿಷ್ಟು ದೂರದಲ್ಲೇ ನಿಂತು ಕಣ್ಣರಳಿಸುತ್ತಾರೆ. ಪತ್ರಿಕೆಗಳ ಪುಟ ತೆರೆದು ತಮ್ಮ ಬಗೆಗಿನ ಟೀಕೆ ಓದಿ ನಸುನಗುತ್ತಾರೆ. ಬದಲಾವಣೆಗೆ ತಾವೂ ಸಿದ್ಧ ಎಂಬಂತೆ ತುಸು ಗುಂಗುರಾದ ಕೂದಲುಗಳನ್ನು ನೇರ ಮಾಡಿಸಿಕೊಳ್ಳುತ್ತಾರೆ.ಕ್ಯಾಮೆರಾ ಎದುರು ನಿಂತು ಮುಂಬೈ  ತಂಡದ ಒಡತಿ ನೀತಾ ಅಂಬಾನಿ ಜೊತೆ ಅಪರೂಪಕ್ಕೆ ವಿಚಿತ್ರವಾದ ಪೋಸ್ ಕೊಡಲೂ ಹಿಂದೇಟು ಹಾಕುವುದಿಲ್ಲ.

ಸಚಿನ್‌ಗೆ ನಾಯಕತ್ವದ ಗುಣ ಮೊದಲಿನಿಂದಲೂ ಇದೆ. ಅವರು ಹೈಸ್ಕೂಲಿನಲ್ಲಿದ್ದಾಗ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಆ ಹೊಣೆಗಾರಿಕೆ ಸಿಕ್ಕ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿ ತಂಡಕ್ಕೆ ಗೆಲುವು ತಂದಿತ್ತಿದ್ದರು.ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಂಬಟಿ ರಾಯುಡು, ಸೌರಭ್ ತಿವಾರಿ (ಈಗ ಆರ್‌ಸಿಬಿ ತಂಡದಲ್ಲಿದ್ದಾರೆ) ತರಹದ ಹುಡುಗರಿಗೆ ಬ್ಯಾಟ್ಸ್‌ಮನ್‌ಷಿಪ್ ಪಾಠದ ಜೊತೆಗೆ ತಾಳ್ಮೆಯನ್ನೂ ಕಲಿಸಿದವರು ಸಚಿನ್. ಕೆಲವು ಒತ್ತಡದ ಸಂದರ್ಭಗಳಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಬೇಕಾದಾಗ ತಾವೇ ಖುದ್ದಾಗಿ ಚೆಂಡು ಕೈಗೆತ್ತಿಕೊಂಡವರೂ ಅವರೇ.ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್ ಮೊದಲಾದವರು ವಿವಿಧ ಸಂದರ್ಭಗಳಲ್ಲಿ ನಾಯಕರಾಗಿದ್ದೂ ಸಚಿನ್ ಒಳಗಿನ ನಿರಂತರ ನಾಯಕತ್ವದ ಗುಣದ ಬಗ್ಗೆ ಮಾತನಾಡಿದ್ದಾರೆ.ನೂರನೇ ಶತಕ ಗಳಿಸಿದ ನಂತರ ಶೂನ್ಯ ದಿಂದಲೇ ಮತ್ತೆ ಆಟ ಪ್ರಾರಂಭ ಎಂಬ ಭಾವದಲ್ಲಿ ಮಾತನಾಡಿದ ಸಚಿನ್, ಯುವ ಪ್ರತಿಭೆಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ತಮ್ಮ ದಾಖಲೆ ಮುರಿಯಬಲ್ಲ ಗುಣವಿರುವವರು ಎಂದೂ ಹೇಳಿದರು. ಒಬ್ಬ ಅನುಭವಿ  ಬ್ಯಾಟ್ಸ್‌ಮನ್  ಯುವಕರಿಗೆ ಕೊಡಬಹುದಾದ ಆತ್ಮವಿಶ್ವಾಸದ ಟಾನಿಕ್ ಇದು.ಯುವಕರ ಉತ್ಸಾಹವನ್ನು ಸಾಂಘಿಕ ಹೋರಾಟವಾಗಿ ಪರಿವರ್ತಿಸಬಲ್ಲ ಜಾಣ್ಮೆ ಸಚಿನ್‌ಗೆ ಇದೆ. ಅವರ ಮಾತನ್ನು ಆರೂವರೆ ಅಡಿಯ ದೈತ್ಯ ಕೀರನ್ ಪೊಲಾರ್ಡ್ ಕೂಡ ಕೈಕಟ್ಟಿಕೊಂಡು ಕೇಳುವ ರೀತಿಯೇ ಇದಕ್ಕೆ ಸಾಕ್ಷಿ.ಇಷ್ಟರ ನಂತರವೂ ಸಚಿನ್ ಬಾಟಮ್‌ಹ್ಯಾಂಡ್ ಸಾಮರ್ಥ್ಯ ಬಳಸಿ ಸಲೀಸಾಗಿ ಈಗಲೂ ಸಿಕ್ಸರ್ ಹೊಡೆಯ್ತಿದ್ದಾರೆ. ವೃತ್ತಾಕಾರವಾಗಿ ನಿಲ್ಲುವ ಯುವಕರ ಕಿವಿಗೆ ತಮ್ಮ ಅನುಭವ ಕಲಿಸಿಕೊಟ್ಟ ತಂತ್ರವನ್ನು ಹಾಕುತ್ತಿದ್ದಾರೆ.ಇಡೀ ದೇಶದ ಅಭಿಮಾನಿಗಳ ಅತಿಯಾದ ಹೊಗಳಿಕೆ, ವ್ಯಾಪಕವಾದ ಟೀಕೆ- ಎರಡನ್ನೂ ಸಮಚಿತ್ತದಿಂದ ನೋಡುತ್ತಲಿದ್ದಾರೆ. ಇಂಥ ಕ್ರಿಕೆಟ್ ಪ್ರೇಮ ಶಾಶ್ವತವಾಗಿ ಉಳಿದಿರುವಲ್ಲಿ ಅವರೊಳಗೆ ನಿರಂತರವಾಗಿ ಉಸಿರಾಡುತ್ತಿರುವ ನಾಯಕನ ಕೊಡುಗೆ ಇದೆ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.