ಸೋಮವಾರ, ಮೇ 23, 2022
20 °C

ನಾರಾಯಣಮೂರ್ತಿ ಬಾಯಿ ಬಿಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿರುವ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಸಾರಸ್ವತ ಲೋಕದ ಹಲವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.

ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವರು ಎತ್ತಿದ ಪ್ರಶ್ನೆಗಳ ಬಗೆಗೆ ನಾನೇನೂ ಹೇಳಲಾರೆ. ಇದಕ್ಕೆ ನಾರಾಯಣಮೂರ್ತಿ ಅವರೇ ಉತ್ತರಿಸಬೇಕು’ ಎಂದರು.

‘ಈಗ ಎದ್ದಿರುವ ವಿಷಯಗಳ ಕುರಿತು ತಮ್ಮ ನಿಲುವು ಏನು ಎಂಬುದನ್ನು ಮೂರ್ತಿ ಅವರು ಬಹಿರಂಗ ಪಡಿಸಬೇಕು’ ಎಂದು ಅವರು ತಿಳಿಸಿದರು.

ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಆಗ್ರಹ

  ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸುವ ಕುರಿತು ವಿವಾದ ಹುಟ್ಟಿಕೊಂಡಿದ್ದು, ಅವರು ಕನ್ನಡ ನಾಡು, ಭಾಷೆಯ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ  ಆಗ್ರಹಿಸಿದೆ.

ಈ ಸಂಬಂಧ ಸಮಿತಿಯ ಮುಖಂಡರು ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಈ ಹಿಂದೆ ನಾರಾಯಣಮೂರ್ತಿ ಅವರು ಮೊದಲನೇ ತರಗತಿಯಿಂದ ಇಂಗ್ಲಿಷ್ ಬೋಧಿಸಬೇಕು ಎಂದು ಸೂಚಿಸಿದ್ದರು. ಜತೆಗೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಲಹೆ ಮಾಡಿದ್ದರು. ಈ ಎರಡೂ ಹೇಳಿಕೆಗಳು ಕನ್ನಡ ಭಾಷೆ ಹಾಗೂ ನಾಡಿಗೆ ವಿರೋಧಿಯಾಗಿವೆ. ಕಾರಣ ನಾರಾಯಣಮೂರ್ತಿ ಅವರು ಪ್ರಸ್ತುತ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಮುಖಂಡರಾದ ರಮೇಶ ಸೊಂಟಕ್ಕಿ, ಶಂಕರ ಬಾಗೇವಾಡಿ, ಪದ್ಮರಾಜ ವೈಜನ್ನವರ, ಎಂ.ಜಿ. ಮಕಾನದಾರ, ಟಿ.ಟಿ.ಮುರಕಟನಾಳ, ಶ್ಯಾಮ ಢವಳಿ, ರಾಜು ಟೊಪಗಿ ಮತ್ತಿತರರು ಒತ್ತಾಯಿಸಿದ್ದಾರೆ.

ಪ್ರಸ್ತುತ ನಾರಾಯಣಮೂರ್ತಿ ಅವರು, ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರೆ ಉದ್ಘಾಟನೆಗೆ ಅರ್ಥ ಬರುತ್ತದೆ. ಜತೆಗೆ ಸಮ್ಮೇಳನದಲ್ಲಿ ನಾಡಿನ ಎಲ್ಲ ಸಾಹಿತಿಗಳು ಭಾಗವಹಿಸುವಂತಾಗಬೇಕು. ಸರ್ಕಾರ ಆ ದಿಸೆಯಲ್ಲಿ ಗತ್ತು ತೋರಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ನಾಡಿನ ಖ್ಯಾತ ಸಾಹಿತಿಗಳಾದ ಡಾ. ಪಾಟೀಲ ಪುಟ್ಟಪ್ಪ, ಚಂಪಾ, ಬರಗೂರು ರಾಮಚಂದ್ರಪ್ಪ, ಡಾ. ಚಿದಾನಂದ ಮೂರ್ತಿ, ಚೆನ್ನವೀರ ಕಣವಿ, ಎಂ.ಎಂ.ಕಲಬುರ್ಗಿ ಮೊದಲಾದವರನ್ನು ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವಂತೆ ಸರ್ಕಾರ ಅಧಿಕೃತವಾಗಿ ಕೋರಬೇಕು. ಆ ಮೂಲಕ ಕನ್ನಡದ ಕಳಕಳಿಯನ್ನು ಪ್ರದರ್ಶಿಸಬೇಕು ಎಂದು ಅವರು ಕೋರಿದ್ದಾರೆ.

 ಬಾರದ ಆಮಂತ್ರಣ: ಗೊಂದಲ

ವಿಶ್ವ ಕನ್ನಡ ಸಮ್ಮೇಳನಕ್ಕೆ ಐದು ದಿನಗಳು ಮಾತ್ರ ಬಾಕಿ ಇದ್ದು, ಆಮಂತ್ರಣ ಪತ್ರಿಕೆ ಈಗಲೂ ಹೊರಬರದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಸಮ್ಮೇಳನ ಸಮಿತಿಯ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಉಮೇಶ ಕತ್ತಿ ಹಾಗೂ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿನಿತ್ಯ ಹೇಳಿಕೆ ನೀಡಿ ಆಮಂತ್ರಣ ಪತ್ರಿಕೆ ಬರುತ್ತದೆ ಎಂದು ಹಲವಾರು ಸಲ ಗಡುವು ನೀಡಿದ್ದರು. ಆದರೆ ಅವರು ಹೇಳಿಕೆಯ ಫಲಶ್ರುತಿ ಮಾತ್ರ ಈವರೆಗೆ ಆಗಿಲ್ಲ!

ಮುದ್ರಣಕ್ಕೆ: ಆಮಂತ್ರಣ ಪತ್ರಿಕೆ ಶುಕ್ರವಾರ ಸಂಜೆ ಮುದ್ರಣಕ್ಕೆ ಹೋಗಿದೆ ಎನ್ನಲಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಹೊರ ಬರುವ ಸಾಧ್ಯತೆ ಇದೆ. ಈ ಮಧ್ಯೆ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಒಂದಿಷ್ಟು ಮಾಹಿತಿ ಬೆಳಗಾವಿ ಜಿಲ್ಲಾಡಳಿತಕ್ಕೆ ಶನಿವಾರ ಸಂಜೆ ಲಭ್ಯವಾಗಿದೆ. ಆದರೆ ಅದರಲ್ಲೂ ಮಾಹಿತಿ ಅಪೂರ್ಣವಾಗಿದೆ.

ಆಕ್ಷೇಪ: ವಿಶ್ವ ಕನ್ನಡ ಸಮ್ಮೇಳನ ಕಾರ್ಯಾಲಯಕ್ಕೆ ಆಗಮಿಸುವ ಸಾರ್ವಜನಿಕರು ಆಮಂತ್ರಣ ಪತ್ರಿಕೆಯ ಬೇಡಿಕೆ ಇಡುತ್ತಿದ್ದು, ಅಲ್ಲಿನ ಸಿಬ್ಬಂದಿ ಅವರ ಪ್ರಶ್ನೆಗೆ ಉತ್ತರಿಸಿ ಸುಸ್ತಾಗುತ್ತಿದ್ದಾರೆ. ಪ್ರತಿನಿತ್ಯ ‘ನಾಳೆ ಬರುತ್ತದೆ’ ಎಂದು ಸಮಜಾಯಿಷಿ ನೀಡುತ್ತಿದ್ದ ಅವರು, ಪ್ರಸ್ತುತ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ.

ಆಮಂತ್ರಣ ಪತ್ರಿಕೆ ಇಷ್ಟೊಂದು ತಡವಾದರೆ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೇಗೆ ಮುಟ್ಟಿಸುವುದು? ಆತಂಕ ಶುರುವಾಗಿದೆ.

ಆಮಂತ್ರಣ ಪತ್ರಿಕೆಯ ಈ ಅವಾಂತರ ಕೋರಿಯರ್ ಸಂಸ್ಥೆಗಳಿಗೆ ಸುಗ್ಗಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.