ಶನಿವಾರ, ಮೇ 15, 2021
25 °C

ನಾಳೆಯಿಂದ ಭಾರತೀಯ ಆಧ್ಯಾತ್ಮಿಕ ಸಮ್ಮಿಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸ್ವಾಮಿ ವಿವೇಕಾನಂದರ 150 ನೇ ಜಯಂತಿ ಮಹೋತ್ಸವ ಅಂಗವಾಗಿ ನಗರದ ಶ್ರೀ ರಾಮಕೃಷ್ಣ ಆಶ್ರಮವು ಬೆಂಗಳೂರು ಹಾಗೂ ರಾಜ್ಯದ  ಇತರ ಶಾಖಾ ಕೇಂದ್ರಗಳ ಸಹಯೋಗದಲ್ಲಿ ಏ.20 ರಿಂದ 23 ರ ವರೆಗೆ `ಭಾರತೀಯ ಆಧ್ಯಾತ್ಮಿಕ  ಸಮ್ಮಿಲನ~ವನ್ನು ಆಯೋಜಿಸಿದೆ.ನಗರದ ಶ್ರೀರಾಮಕೃಷ್ಣ ವಿದ್ಯಾಶಾಲೆ ಆವರಣದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯುವ ಸಮ್ಮಿಲನದಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ 150 ಕ್ಕೂ ಹೆಚ್ಚು ಸಾಧುಗಳು ಹಾಗೂ 3 ಸಾವಿರದಷ್ಟು ಪ್ರತಿನಿಧಿಗಳು ಹಾಗೂ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಶಾಖೆಯ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ಸಮ್ಮಿಲನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಏಳು ಅಧಿವೇಶನಗಳು ನಡೆಯಲಿವೆ. ವಿವಿಧ ವರ್ಗಕ್ಕೆ ಸೇರಿದ ಸ್ವಾಮೀಜಿಗಳು ಉಪನ್ಯಾಸ ನೀಡಲಿದ್ದಾರೆ ಎಂದರು.ಮೈಸೂರು ಅರಮನೆಗೆ ಸ್ವಾಮಿ ವಿವೇಕಾನಂದರ ಚರಿತ್ರಾರ್ಹ ಭೇಟಿ ಮತ್ತು ಅರಮನೆ ಶತಾಬ್ದಿಯ ಸ್ಮರಣಾರ್ಥ ಅರಮನೆ ಪ್ರಾಂಗಣದಲ್ಲಿ ಏಪ್ರಿಲ್ 22 ರಂದು ಸಂಜೆ 6.10 ಕ್ಕೆ ಸಾರ್ವಜನಿಕ ಸಭೆಯನ್ನು ಜಿಲ್ಲಾಡಳಿತ ಮತ್ತು ಮೈಸೂರು ಅರಮನೆ ಮಂಡಳಿಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

 

ಪಶ್ಚಿಮ ಬಂಗಾಳದ ಬೇಲೂರು ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಭಾನಂದಜಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರ್ನಾಟಕ ಸಂಸ್ಕೃತಿ ಮತ್ತು ಸ್ವಾಮಿ ವಿವೇಕಾನಂದರ ಮೈಸೂರು ಭೇಟಿ ಕುರಿತು ಲೇಸರ್ ಪ್ರದರ್ಶನವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ನಮಗಿಂದು ಬೇಕಾಗಿರುವುದು ಎಲ್ಲರನ್ನು ಒಗ್ಗೂಡಿಸುವ ಸಂಯೋಜಕ ಶಕ್ತಿ ಮತ್ತು ಧನಾತ್ಮಕ ಮನೋಭಾವ. ನಾವು ನಮ್ಮ ಸಮಾಜದ ಮತ್ತು ಧರ್ಮದ ವಿಭಿನ್ನ ಸಮುದಾಯ ವಿವಿಧತೆಯನ್ನು ಸಮರಸಗೊಳಿಸುವ ಹೊಸ ಭಾವ ತರಂಗವನ್ನು ಕಂಡುಹಿಡಿಯಬೇಕು. ಇದಕ್ಕಾಗಿ ಅಪರಿಮಿತ ತಾಳ್ಮೆ ಮತ್ತು ಪ್ರಾಮಾಣಿಕ ಪ್ರಯತ್ನ ಅಗತ್ಯ. ಈ ನಿಟ್ಟಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮ ಸಮ್ಮಿಲನದ ಮೂಲಕ ಅಡಿ ಇಟ್ಟಿದೆ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.