ನಾವೂ, ನಿಮಗೆ ದೂರು ನೀಡಬಹುದಾ?

ಬುಧವಾರ, ಜೂಲೈ 17, 2019
25 °C

ನಾವೂ, ನಿಮಗೆ ದೂರು ನೀಡಬಹುದಾ?

Published:
Updated:

ಶಿವಮೊಗ್ಗ: `ನಮ್ಮನ್ನು ಯಾರಾದರೂ ಅಪಹರಿಸಿದರೆ ಹೇಗೆ ಕಾಪಾಡುತ್ತೀರಾ? ಮನೆಯಲ್ಲಿ ಕಳ್ಳತನವಾದರೆ ಕಳ್ಳರನ್ನು ಹೇಗೆ ಹಿಡಿಯುತ್ತೀರಾ? ನಾವೂ ನಿಮಗೆ ದೂರು ನೀಡಬಹುದಾ?'

-ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು ಎಂಟನೇ ತರಗತಿ ವಿದ್ಯಾರ್ಥಿಗಳು.ನಗರದ ಪಾರ್ಕ್ ಬಡಾವಣೆ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಮೀಪದ ಜಯನಗರದ ಪೊಲೀಸ್ ಠಾಣೆಗೆ ಶುಕ್ರವಾರ ಶೈಕ್ಷಣಿಕ ಚಟುವಟಿಕೆಯ ಅಂಗವಾಗಿ ಭೇಟಿ ನೀಡಿ ಅಲ್ಲಿ ಪೊಲೀಸರೊಂದಿಗೆ ಸಂವಾದ ನಡೆಸಿದರು.ವಿದ್ಯಾರ್ಥಿಗಳ ಅಷ್ಟೂ ಪ್ರಶ್ನೆಗಳಿಗೆ ಪೊಲೀಸರು ಸಿಡುಕದೆ, ತಾಳ್ಮೆಯಿಂದ ಉತ್ತರಿಸಿದರು. `ನೀವು ಅಪಾಯದಲ್ಲಿದ್ದಾಗ ನಮಗೆ ಫೋನ್ ಕರೆ ಮಾಡಿ; ನಿಮ್ಮ ರಕ್ಷಣೆಗೆ ನಾವು ಬರುತ್ತೇವೆ. ಅಪಾಯ ಬಾರದಂತೆ ನೋಡಿಕೊಳ್ಳಿ. ಅಪರಿಚಿತರ ಜತೆ ಎಚ್ಚರಿಕೆಯಿಂದ ಇರಿ, ಯಾವುದೇ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಸಂದರ್ಭ ತಂದುಕೊಳ್ಳಬೇಡಿ' ಎಂದು ಪೊಲೀಸರು ಸಲಹೆ ನೀಡಿದರು.  ಪೊಲೀಸ್ ಠಾಣೆಯ ಕಾರ್ಯವೈಖರಿಯ ಖುದ್ದು ವೀಕ್ಷಣೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಠಾಣೆಯ ಪ್ರತಿಯೊಂದು ವಿಭಾಗಕ್ಕೆ ಕರೆದೊಯ್ದು ಕರ್ತವ್ಯದ ಬಗ್ಗೆ ತಿಳಿಸಲಾಯಿತು. ಠಾಣೆಯಲ್ಲಿರುವ 303 ರೈಫೆಲ್, ರಿವಾಲ್ವಾರ್, ಮದ್ದು-ಗುಂಡುಗಳು, ದೂರು ದಾಖಲಿಸುವ ಬಗೆ, ಎಫ್‌ಐಆರ್ ಹಾಕುವ ವಿಧಾನ, ಪರಿಚಯಿಸಲಾಯಿತು.ಈ ಸಂದರ್ಭದಲ್ಲಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಡಿ.ಆರ್.ಭರತ್‌ಕುಮಾರ್ ಮಾತನಾಡಿ, ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವವರ ಬಗ್ಗೆ ವಿದ್ಯಾರ್ಥಿಗಳು ಸದಾ ಎಚ್ಚರದಿಂದಿರಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಕಾನೂನು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ, ಇತರೆಯವರ ಪ್ರಲೋಭನೆ, ಪ್ರಚೋದನೆಯಿಂದ ಚಿಕ್ಕ ವಯಸ್ಸಿನವರು ಕೂಡ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗಳಾದ ತಿಪ್ಪೇಸ್ವಾಮಿ, ಚಂದ್ರಶೇಖರಗೌಡ, ಸಿಬ್ಬಂದಿಗಳಾದ ಮೋಹನ್, ಪ್ರತಿಭಾ, ರಾಜುಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry