ಭಾನುವಾರ, ಜೂನ್ 13, 2021
29 °C

ನಿಖಿಲ್ ಕಮಾಲ್

ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

‘ಏಂಜಲ್ ಐಸ್‌...ಮಿಲ್‌ ತೋ ಕಭೀ’ ಹಾಡಿನ ತುಣುಕನ್ನು ನಿಧಾನವಾಗಿ ಗುನುಗುತ್ತಾ ಮಾತು ಶುರುಮಾಡಿದರು ನಗರದ ರಾಕ್ ಸಂಗೀತಗಾರ ನಿಖಿಲ್‌ ಕುಮಾರ್‌. ಪ್ರೇಮ ನಿವೇದನೆ ಮಾಡುವಾಗ ಪ್ರತಿ ಬಾರಿ ಹುಡುಗರೇ ಯಾಕೆ ಮಾಡಬೇಕು, ಹೆಣ್ಣಿಗೂ ಆ ಸ್ವಾತಂತ್ರ್ಯ ಬೇಕು. ತನಗಿಷ್ಟವಾದ ಹುಡುಗನನ್ನು ಕಂಡಾಗ ಅವಳ ಮನದಲ್ಲಿ ಹುಟ್ಟುವ ಮಧುರ ಭಾವಕ್ಕೆ ಅವಳು ಸ್ವರ ಸೇರಿಸಿ ನಿವೇದನೆ ಮಾಡಿಕೊಂಡರೆ ಏನು ತಪ್ಪು? ಎಂಬುದು ನಿಖಿಲ್‌ ಅವರ ಪ್ರಶ್ನೆ.ಹೆಣ್ಣಿನ ಪ್ರೇಮ ನಿವೇದನೆಯನ್ನೇ ನಿಖಿಲ್‌ ಹಾಡಿನ ರೂಪದಲ್ಲಿ ಹೆಣೆದಿದ್ದಾರೆ. ಯುವಜನರ ನಾಡಿಮಿಡಿತವನ್ನು ಗ್ರಹಿಸಿ ರಚಿಸಿರುವ ಈ ಹಾಡು ಮಹಿಳಾ ಪ್ರಧಾನ ಪಾಪ್‌/ಫನ್‌ ರಾಕ್‌ ಟ್ರ್ಯಾಕ್‌ ಆಗಿದೆ. ಹಿಂದಿ ಮತ್ತು ಇಂಗ್ಲಿಷ್‌ ಪದಗಳ ಈ ಹಾಡು ಮತ್ತೆ ಮತ್ತೆ ಗುನುಗುನಿಸಬೇಕು ಎಂಬಷ್ಟು ಹಿತವಾಗಿದೆ.ಮಹಿಳಾ ದಿನಾಚರಣೆ ಅಂಗವಾಗಿ ಇವರ ‘ಏಂಜಲ್‌ ಐಸ್...., ಮಿಲ್‌ ತೋ ಕಭೀ’ ಟ್ರ್ಯಾಕ್‌ ಶನಿವಾರ (ಮಾ.8) ಸಂಜೆ 6ಕ್ಕೆ ಯು.ಬಿ. ಸಿಟಿಯಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ನಿಖಿಲ್‌ ಈ ಹಾಡನ್ನು ಮಹಿಳೆಯರಿಗಾಗಿ ಅರ್ಪಿಸುತ್ತಿದ್ದಾರೆ. ಜತೆಗೆ ಇದರಿಂದ ಬರುವ ಆದಾಯದಿಂದ ಮಹಿಳೆಯರಿಗೆ ಸಹಾಯ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.

ಹಾಡು ಹುಟ್ಟಿದ ಸಮಯ

‘ಬೆಳಿಗ್ಗೆ ಎದ್ದಾಕ್ಷಣ ಮನೆಯಲ್ಲಿ ಅಮ್ಮ ಇಲ್ಲದಿದ್ದರೆ ಒಂದು ಕಪ್‌ ಟೀ ಮಾಡುವುದಕ್ಕೂ ಪರದಾಡುತ್ತೇನೆ, ನಂತರ ಬಾಳಸಂಗಾತಿ ಬಂದಳು. ನನ್ನ ಬದುಕಿನ ಸಿಹಿ–ಕಹಿಯ ಕ್ಷಣವನ್ನೆಲ್ಲಾ ತನ್ನದೆಂದು ಹಂಚಿಕೊಂಡಳು. ಮಗಳು ಹುಟ್ಟಿದಳು.ಸಂಜೆ ಕೆಲಸ ಮುಗಿಸಿ ಮನೆಗೆ ಹೋದಾಗ ತನ್ನ ಪುಟ್ಟ ಕೈಗಳಿಂದ ನನ್ನನ್ನು ಪ್ರೀತಿಯಿಂದ ತಬ್ಬುತ್ತಿದ್ದಳು. ಜೀವನದ ಪ್ರತಿ ಮೆಟ್ಟಿಲಲ್ಲೂ ಹೆಣ್ಣು ಗಂಡಿಗೆ ಜತೆಯಾಗಿ ನಿಲ್ಲುತ್ತಾಳೆ, ಬೆಂಬಲ ನೀಡುತ್ತಾಳೆ. ಆ ಹೆಣ್ಣಿಗಾಗಿ ಏನಾದರೂ ಮಾಡಬೇಕು ಎಂಬುದು ನನ್ನ ಕನಸು ಹಾಗಾಗಿ ಈ ಭಿನ್ನ ಪ್ರಯೋಗಕ್ಕೆ ಇಳಿದೆ’ ಎನ್ನುತ್ತಾರೆ ಅವರು.‘ಮಹಿಳೆಯ ಬಗ್ಗೆ ಅಯ್ಯೋ ಪಾಪ ಎಂದು ಕನಿಕರ ತೋರಿಸುವ ಬದಲು ಅವರಿಗೆ ಗೌರವ ನೀಡಬೇಕು, ಬೆಳೆಯಲು ಅವಕಾಶ ಮಾಡಿಕೊಡಬೇಕು’ ಎಂಬುದು ನಿಖಿಲ್ ಮಾತು.‘ಹೊಸತೊಂದು ಹಾಡಿನ ಹುಡುಕಾಟದಲ್ಲಿದ್ದೆ. ನಾಲ್ಕೈದು ವರ್ಷ ಹಾಡಿನ ಕುರಿತು ಹಗಲು ಕನಸು ಕಾಣುತ್ತಾ ಬಂದೆ. ಸ್ನೇಹಿತರಿಗೆಲ್ಲಾ ನನ್ನ ಕನಸಿನ ಬಗ್ಗೆ ಹೇಳಿದೆ. ಎಲ್ಲರೂ ಬೆಂಬಲ ನೀಡಿದರು. ನಾನೇ ಕುಳಿತು ಹಾಡನ್ನು ಕಟ್ಟಿದೆ. ಆದರೆ ಎಷ್ಟೇ ಮಾಡಿದರೂ ನನಗೆ ಅದು ಸರಿ ಅನಿಸುತ್ತಿರಲಿಲ್ಲ. ಹೊಸದಾಗಿ ಏನಾದರೂ ಮಾಡಬೇಕು,  ಈ ಹಾಡಿನ ಸಾಲು ಸರಿಯಿಲ್ಲ ಎಂಬಿತ್ಯಾದಿ ಅನುಮಾನಗಳು ಬಂದವು. ಕೊನೆಗೊಂದು ದಿನ ರಾತ್ರಿಯಿಡೀ ಕುಳಿತು ಹಾಡು ಕಟ್ಟಿದೆ. ಇಷ್ಟವಾಯಿತು. ಪತ್ನಿಗೆ ಕೇಳಿಸಿದೆ ಅವಳೂ ಮೆಚ್ಚಿದಳು’ ಎಂದು ಹಾಡು ಹುಟ್ಟಿದ ಬಗೆ ಕುರಿತು ಹೇಳುತ್ತಾರೆ ನಿಖಿಲ್.ಹೆಣ್ಣು ತನ್ನ ಪ್ರಿಯಕರನ ಬಳಿ ತನ್ನ ಪ್ರೇಮನಿವೇದನೆ ಮಾಡಿಕೊಳ್ಳುವ ಈ ಹಾಡಿಗೆ ಸರಿಹೊಂದುವ ಗಾಯಕರು ನಿಖಿಲ್‌ಗೆ ಸಿಗಲಿಲ್ಲವಂತೆ. ಗಾಯಕರಿಗಾಗಿ ಆರು ತಿಂಗಳು ಹುಡುಕಾಟ ನಡೆಸಿ, ಬೇರೆ ಬೇರೆ ಊರುಗಳಿಗೆ ಹೋಗಿ ಆಡಿಷನ್‌ ನಡೆಸಿದರು ನಿಖಿಲ್. ಕೊನೆಗೆ ಬ್ರಿಟನ್ನಿನ ಗಾಯಕಿ ಮಿಲ್ಲೀ ಮರ್ಸಿಡಿಸ್‌ ಅವರ ಬಳಿ ಹೋಗಿ ಹಾಡಿನ ಕುರಿತು ಪ್ರಸ್ತಾಪ ಮಾಡಿದರಂತೆ. ಅವರ ದನಿ ಇದಕ್ಕೆ ಹೊಂದಿಕೆ ಆದಾಗ ನಿಖಿಲ್‌ಗೆ ಆದ ಖುಷಿ ಅಷ್ಟಿಷ್ಟಲ್ಲ. ಇವರ ಜತೆಗೆ ಗಿಟಾರಿಸ್ಟ್‌ ಸೆಡ್ರಿಕ್‌ ಡಿಸ್ ಅವರು ಈ ಹಾಡಿಗೆ ಕೈ ಜೋಡಿಸಿದ್ದಾರೆ.ಎ.ಆರ್‌. ರೆಹಮಾನ್‌ ಅವರಿಂದ ಸ್ಫೂರ್ತಿ ಪಡೆದಿರುವ ನಿಖಿಲ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸಂಗೀತದಲ್ಲಿ ಒಲವು ಹೊಂದಿರುವ ಇವರು 1999ರಲ್ಲಿ ಸ್ನೇಹಿತರ ಜತೆ ಸೇರಿ ‘ಓಯಸ್‌’ ಎಂಬ ಸಂಗೀತ ತಂಡವನ್ನು ಕಟ್ಟಿಕೊಂಡಿದ್ದರು.  ಸಂಗೀತಕ್ಕೆ ಯಾವುದೇ ಅಡೆತಡೆ ಇಲ್ಲ ಎನ್ನುವ ಇವರು ವಿದೇಶದ ನೆಲದಲ್ಲೂ ಸಂಗೀತದ ರಸಧಾರೆ ಹರಿಸಿದ್ದಾರೆ. 2003ರಲ್ಲಿ ಬಿಡುಗಡೆ ಆದ ಇವರ ‘ಮಿಸ್ಟಿಕ್‌, ದ ಮ್ಯಾಜಿಕ್‌ ಆಫ್‌ ಮ್ಯೂಸಿಕ್‌’ ಸೀಡಿ ಭಾರತೀಯ ಪಾಪ್‌ ಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿತ್ತು. ವೃತ್ತಿಪರ ನೃತ್ಯಗಾರರು ಆಗಿರುವ ಇವರು ರೇಡಿಯೊ ಜಾಕಿ ಆಗಿಯೂ ಕೆಲಸ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.