ನಿಜಲಿಂಗಪ್ಪ ನಿವಾಸಕ್ಕೆ ಕಾಂಗ್ರೆಸ್ ಕಾಯಕಲ್ಪ

ಶನಿವಾರ, ಜೂಲೈ 20, 2019
23 °C

ನಿಜಲಿಂಗಪ್ಪ ನಿವಾಸಕ್ಕೆ ಕಾಂಗ್ರೆಸ್ ಕಾಯಕಲ್ಪ

Published:
Updated:

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ, ರಾಷ್ಟ್ರನಾಯಕ ದಿವಂಗತ ಎಸ್. ನಿಜಲಿಂಗಪ್ಪ ಅವರು ವಾಸಿಸುತ್ತಿದ್ದ ನಿವಾಸವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳದೆ ಅಗೌರವ ಸೂಚಿಸಲಾಗಿದೆ ಎಂದು ದೂರಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ನಿವಾಸದ ಆವರಣವನ್ನು ಸ್ವಚ್ಛಗೊಳಿಸಿದರು.ರಾಷ್ಟ್ರ ಕಂಡ ಸಜ್ಜನ, ಪ್ರಾಮಾಣಿಕ ರಾಜಕಾರಣಿ ಎಸ್. ನಿಜಲಿಂಗಪ್ಪ ಅವರು ಬಾಳಿದಂತ ಮನೆ ಅನಾಥವಾಗಿದೆ. ಮನೆಯಲ್ಲಿ ಯಾರೂ ವಾಸವಿಲ್ಲದ ಪರಿಣಾಮ ಕಸದ ರಾಶಿ ತುಂಬಿಕೊಂಡಿದೆ. ನಗರದಲ್ಲಿ ನಿಜಲಿಂಗಪ್ಪ ಅವರ ಮನೆ ಇರುವುದು ಎಲ್ಲರ ಸೌಭಾಗ್ಯ. ಆದರೆ, ಅದನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷವಹಿಸಿದೆ.ರಾಜ್ಯ ಸರ್ಕಾರ ಈ ನಿವಾಸವನ್ನು ಪ್ರಾಚ್ಯವಸ್ತು ಸಂಗ್ರಹಾಲಯನ್ನಾಗಿ ಮಾಡುವಂತೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ರೀತಿ ಉಪಯೋಗವಾಗಿಲ್ಲ ಎಂದು ಮುಖಂಡರು ದೂರಿದರು.

ಜಿಲ್ಲಾಡಳಿತ ನಿಜಲಿಂಗಪ್ಪ ಅವರ ಮನೆಯ ಶುಚಿತ್ವ ಕಾಪಾಡಲು ಮತ್ತು ಸೌಂದರ್ಯ ಕಾಪಾಡಲು ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿದರು.ನಿಜಲಿಂಗಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಮುಖಂಡರು ಮತ್ತು ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ ಮುಖಂಡರು ಸ್ಥಳಕ್ಕೆ ಜಿಲ್ಲಾಧಿಕಾರಿಯನ್ನು ಕರೆದೊಯ್ದು ಸಮಸ್ಯೆಗಳನ್ನು ವಿವರಿಸಿದರು.ನಂತರ ಪೊರಕೆ, ಸಲಕೆ, ಗುದ್ದಲಿ ಹಿಡಿದ ಮುಖಂಡರು ಮತ್ತು ಕಾರ್ಯಕರ್ತರು, ನಿಜಲಿಂಗಪ್ಪ ಅವರ ನಿವಾಸವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾದರು.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾಜಿ ಶಾಸಕ ಎಚ್. ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಸೇತೂರಾಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾನಂದಿನಿಗೌಡ, ಜಿ.ಪಂ. ಮಾಜಿ ಅಧ್ಯಕ್ಷ ತಿಮ್ಮಣ್ಣ, ಜಿ.ಪಂ. ಮಾಜಿ ಸದಸ್ಯೆ ಆರತಿ ಮಹಡಿ ಶಿವಮೂರ್ತಿ, ನಗರಸಭೆಯ ಮಾಜಿ ಸದಸ್ಯ ಮಹಡಿ ಶಿವಮೂರ್ತಿ, ಜಯಮ್ಮ ಬಾಲರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಶ್ರೀನಿವಾಸ್, ಜಗದೀಶ್, ಮರುಳಾರಾಧ್ಯ ಮತ್ತಿತರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry