ತನ್ನೆಲ್ಲ ದೋಷಗಳ ಚಾಪೆಯಡಿ ಹುಡುಗಿಡುತ/
ಇನ್ನಾರದೋ ತಪ್ಪನೊಂದ ಬಿಗಿ ಹಿಡಿದು//
ಬಣ್ಣಿಸುತ ಅದನೊಂದೆ ನಲಿವ ನಾಯಕನಿರಲು/
ನೀನವನ ತೊರೆದು ನಡೆ! -ನವ್ಯಜೀವಿ//
ಬೋರ್ಡ್ ರೂಮಿನ ಸುತ್ತಮುತ್ತಲಿನ ಅಧಿಕಾರಿಗಳಲ್ಲಿ ಕಾಣಬರುವ ಕಾರ್ಯವೈಖರಿ ಬಹುತೇಕ ವೇಳೆಗಳಲ್ಲಿ, ಅವರನ್ನೆಲ್ಲ ಮುನ್ನಡೆಸುತ್ತಿರುವ ನಾಯಕನ ಕಾರ್ಯಶೈಲಿಯನ್ನೇ ಹೋಲುತ್ತದೆ. ಅದೆಷ್ಟೇ ಅನುಚಿತವಾದರೂ ಅವರೆಲ್ಲ ವಿಧಿ ಇಲ್ಲದೆ ಆ ಕಾರ್ಯ ರೂಪಕದಲ್ಲೇ ತಮ್ಮ ಸ್ವಂತಿಕೆಯ ಚಿತ್ರವನ್ನು ಬಿಂಬಿಸಬೇಕಾಗಿ ಬರುತ್ತದೆ ಕೂಡ.

ಈ ಎರಡೂ ಸ್ತರಗಳಲ್ಲಿ ಮಾಧುರ್ಯ ಏಕವಾದಾಗ ಅಂತಹ ಕಂಪೆನಿ ಶ್ರೇಷ್ಠ ಕಂಪೆನಿಯಾಗಿ ಬೆಳೆದರೆ, ಎಲ್ಲಿ ಈ ಎರಡೂ ಸ್ತರಗಳಲ್ಲಿ ಸ್ವರಸಾಮ್ಯವಿಲ್ಲವೋ ಅಂತಹ ಕಂಪೆನಿ ನೂರರಲ್ಲಿ ತಾನೂ ಒಂದಾಗಿ ಬಿಡುತ್ತದೆ. ಆರಕ್ಕೆ ಏರದಂತೆ ಮೂರಕ್ಕೆ ಇಳಿಯದಂತೆ ಕುಂಟುತ್ತ ತೆವಳುತ್ತ ಸಾಗುತ್ತದೆ. ಇಲ್ಲ, ಕೊನೆಯುಸಿರೆಳೆದು ಸಾವಿನ ಖಜಾನೆಯಲ್ಲಿ ಕಳೆದು ಹೋಗಬಹುದು.

ಹಾಗಾದರೆ, ಬೋರ್ಡ್ರೂಮಿನ ಸುತ್ತಮುತ್ತಲಿನ ಅಧಿಕಾರಿಗಳನ್ನು ಪ್ರೇರೇಪಿಸಬಹುದಾದ ನಾಯಕನಾರು? ಈ ವಿಷಯವನ್ನು ಮುಂದಿಟ್ಟುಕೊಂಡು ನಾಯಕನೊಬ್ಬನ ವಿಚಾರಗಳತ್ತ ಗಮನ ಹರಿಸೋಣ.

ಈ ನಾಯಕನನ್ನು ನೋಡಿ. ಬರಿಯ ಕಂಪೆನಿಯ ವಿಷಯದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಇವನಲ್ಲಿ ಪರಿಹಾರಗಳು ಹೇರಳವಾಗಿವೆ. ಯಾವುದೇ ಸಮಸ್ಯೆ ಎದುರಾದರೂ ಎಂದಿಗೂ ಹಿಂಜರಿಕೆಯೇ ಇಲ್ಲ. ಸಮಸ್ಯೆಯೊಂದನ್ನು ಆಗಿಂದಾಗ್ಗೆ ಅಲ್ಲಲ್ಲೇ ಪರಿಹರಿಸಿ ಬಿಡುತ್ತಾನೆ. ಬೆಟ್ಟದಷ್ಟು ಗಾತ್ರದ ತೊಂದರೆಗಳನ್ನೆಲ್ಲ ಮಣ್ಣಿನ ಹೆಂಟೆಯಂತೆ ಪರಿಕಲ್ಪಿಸಿಕೊಂಡು ಅದನ್ನು ಸರಳೀಕರಿಸಿ ಬಿಡುತ್ತಾನೆ. ಅವನೊಡನೆ ಇದ್ದ ವೇಳೆಯೆಲ್ಲಾ, ಎಲ್ಲರಿಗೂ ಕಂಪೆನಿಯೊಂದನ್ನು ನಡೆಸುವ ಕೆಲಸ ಮಕ್ಕಳು ಬಯಲಿನಲ್ಲಿ ಗೋಲಿ ಆಡಿದಷ್ಟೇ ಸುಲಭ ಎಂಬಂತೆ ಅನಿಸಿದರೆ ತಪ್ಪೇನೂ ಇಲ್ಲ. ಯಾವುದೇ ವಿಷಯವಾದರೂ ಯಾರನ್ನೂ ದೃತಿಗೆಡಿಸದೆ ತನ್ನೊಂದಿಗೆ ಕರೆದೊಯ್ಯುವ ಕಲೆ ಈತನಿಗೆ ಕರಗತವಾಗಿದೆ ಅದೇ ಅವನ ಆಸ್ತಿ.

ಮತ್ತೊಬ್ಬ ನಾಯಕನಿರುತ್ತಾನೆ. ತನ್ನ ಹಾಗೂ ತನ್ನ ಕಂಪೆನಿಯ ಬಗ್ಗೆ ಆತನಿಗೆ ಎಗ್ಗಿಲ್ಲದ ಹೆಮ್ಮೆ. ಹಿಮಾಲಯದೆತ್ತರದ ಅಭಿಮಾನ. `ನಾ ನಡೆವ ಹಾದಿಯಲ್ಲಿ ನಗೆಹೂವು ಬಾಡುವುದಿಲ್ಲ. ನನಬಾಳ ಬುತ್ತಿಯಲಿ ಸಿಹಿಯೊಂದೆ ನನಗಿಹುದು' ಎನ್ನುತ್ತ ಪಿ.ಬಿ.ಶ್ರೀನಿವಾಸ್ ಹಾಡಿರುವ ಮೂಲ ಹಾಡನ್ನು ಅಲ್ಲಲ್ಲಿ ಮಾರ್ಪಡಿಸಿಕೊಂಡು ಸದಾ ಗುನುಗುತ್ತಿರುತ್ತಾನೆ. ಇದು ಸಕಾರಾತ್ಮಕ ಚಿಂತನೆಯ ಅಡಿಗಲ್ಲು ಎಂಬುದವನ ದೃಢ ವಿಶ್ವಾಸ. ಹಾಗಾಗಿ ಆತನೊಡನೆ ಇದ್ದಾಗ, ಎಲ್ಲರೂ ಆ ಅದಮ್ಯ ಚೇತನಕ್ಕೆ, ಎಂದೂ ಸೋಲನ್ನು ಒಪ್ಪಿಕೊಳ್ಳದ ಎದೆಗಾರಿಕೆಗೆ ಸೋಲುಗಳನ್ನೆಲ್ಲ ಜಯಭೇರಿಯೊಂದಿಗೆ ಮರೆತುಬಿಡುವ ಆ ಹಗುರ ಮನಸ್ಸಿಗೆ ಸೋತುಬಿಡುತ್ತಾರೆ.

ಇನ್ನು ಮೂರನೆಯವನ ಸರದಿ. ನಾನೊಮ್ಮೆ ಇಂತಹ ನಾಯಕನನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಮಾತಿಗಿಳಿದಾಗ ವಿಚಾರಿಸಿದ್ದೆ - `ಸರ್, ನಿಮ್ಮ ಹವ್ಯಾಸವೇನು?'
ಅದಕ್ಕವನ ಉತ್ತರ - `ಹವ್ಯಾಸ? ವಾಡ್ ಡು ಯೂ ಮೀನ್? ನನಗೆ ಎಲ್ಲ ವೇಳೆಯಲ್ಲೂ ಕಂಪೆನಿಯದೊಂದೆ ಚಿಂತನೆ. ಅದರ ವಿಷಯದಲ್ಲಿ ಮುಳುಗಿರುವುದೊಂದೇ ನನ್ನ ಹಾದಿ'!
`ಅಲ್ಲ ಸರ್, ಬಿಡುವಿನ ವೇಳೆಯಲ್ಲಿ'? ಮತ್ತೆ ಕೆಣಕಿದ್ದೆ.

`ಬಿಡುವಿನ ವೇಳೆ? ಅದೆಂತದು ಸತ್ಯೇಶ್? ನನಗದರ ಅರ್ಥವೇ ಗೊತ್ತಿಲ್ಲವಲ್ಲ'! ಎನ್ನುತ್ತಾ ವಿಮಾನ ನಿಲ್ದಾಣದಲ್ಲಿ ಇದ್ದ ಎಲ್ಲರೂ ಬೆಚ್ಚಿ ಬೀಳುವ ಹಾಗೆ ಜೋರಾಗಿ ನಗುತ್ತಿದ್ದರು. ಇವರು ಹೇಳುವುದು ನಿಜ. ಬೆಳಿಗ್ಗೆ ಆರಕ್ಕೆ ಎದ್ದು ಲ್ಯಾಪ್ಟಾಪ್ ತೆರೆದಿಟ್ಟರೆ, ಅದರಲ್ಲಿನ ವಿಚಾರಗಳನ್ನೆಲ್ಲ ಓದಿ, ಪರಿಹಾರ ಒದಗಿಸಿ, ದಿನಕ್ಕೆ ಮೂರು ಮೀಟಿಂಗುಗಳನ್ನು ಮಾಡಿ ಲ್ಯಾಪ್ಟಾಪನ್ನು ಮುಚ್ಚುವಷ್ಟರಲ್ಲಿ ರಾತ್ರಿ ಹತ್ತಾಗಿರುತ್ತದೆ.

ಶನಿವಾರ ಹಾಗೂ ಭಾನುವಾರಗಳೆರಡೂ ಕಚೇರಿಗೆ ಬಂದು ಬತ್ತಿ ಉರಿಸಿರುತ್ತಾರೆ. ಎಲ್ಲರಿಗೂ ಕರೆ ಮಾಡಿ ಕೆಲಸಗಳನ್ನೊಪ್ಪಿಸಿರುತ್ತಾರೆ. ಕೆಲಸದ ಬಗ್ಗೆ ಹಾಗೂ ತಮ್ಮ ಕಂಪೆನಿಯ ಗೆಲುವಿನ ಬಗ್ಗೆ ಅವರಿಗೆ ಅಷ್ಟೊಂದು ತೀವ್ರವಾದ ಬದ್ಧತೆ.
ಈಗ ನಾಲ್ಕನೆಯವನನ್ನು ನೋಡಿ. ಕಂಪೆನಿಯ ಪ್ರತಿಯೊಂದು ಸೂಕ್ಷ್ಮವಾದ ವಿಚಾರದಲ್ಲೂ ಈತನೇ ಇರಬೇಕು. ಪ್ರತಿಯೊಂದರಲ್ಲೂ ಹಣವನ್ನು ಉಳಿಸಬೇಕೆಂಬ ತುಡಿತ. `ಹನಿ ಹನಿಗೂಡಿದರೆ ಹಳ್ಳ' ಎಂಬುದಕ್ಕೆ ಹನಿ ಹನಿಯಲ್ಲೂ ಕೂಡಿಸುವ ತವಕ.

ಹಾಗಾಗಿ, ಕಂಪೆನಿಯ ಬಾತ್ರೂಮಿನಲ್ಲಿ ಇಟ್ಟಿರುವ ಕೈ ಒರೆಸಿಕೊಳ್ಳುವ ಕಾಗದವನ್ನು ಹಿಡಿಯಾಗಿ ಇಡದೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತುಂಡರಿಸಿ ಇಡುವಂತೆ ಆಜ್ಞಾಪಿಸಿ, ಇದರಿಂದ ಕಂಪೆನಿಗೆ ವರ್ಷಕ್ಕೆ ನಾಲ್ಕು ಸಾವಿರದ ಐನೂರು ಅರವತ್ತು ರೂಪಾಯಿ ಹಾಗೂ ಎಂಬತ್ತು ಪೈಸೆ ಉಳಿತಾಯವಾಗಿದೆ ಎಂದು ಸಾಬೀತು ಮಾಡುತ್ತಾ ಬೀಗುತ್ತಾರೆ. ಎಲ್ಲರೂ ಇದೇ ನಿಟ್ಟಿನಲ್ಲಿ ಯೋಚಿಸುವಂತೆ ಪ್ರತಿ ಮೀಟಿಂಗಿನಲ್ಲೂ ದೊಡ್ಡ ದೊಡ್ಡ ಭಾಷಣ ನೀಡುತ್ತಾನೆ.

ಐದನೆಯವನ ಬಳಿ ಬನ್ನಿ. ಈತ ಮೂಲತಃ ಅಹಂಕಾರಿ. ತನ್ನೊಬ್ಬನನ್ನು ಹೊರತುಪಡಿಸಿ ಜಗತ್ತಿನ ಮಿಕ್ಕೆಲ್ಲರೂ ಗಾರ್ಧಭ ಸ್ವರೂಪಿಗಳೆಂಬ ದೃಢವಾದ ನಂಬಿಕೆ. ಯಾರೊಡನೆಯೂ ವಿಚಾರ ವಿನಿಮಯ ಮಾಡದೆ, ತಾನು ಎಳೆದಿರುವ ಲಕ್ಷ್ಮಣ ರೇಖೆಯನ್ನು ಯಾರೂ ಉಲ್ಲಂಘಿಸುತ್ತಿಲ್ಲ- ಎಂಬುದನ್ನು ಶ್ರಮವಹಿಸಿ ಕಾಯ್ದುಕೊಳ್ಳುತ್ತಾನೆ.

ಹಾಗೆಂದು ಈತ ಕ್ರೂರನಲ್ಲ, ಕಠೋರನಲ್ಲ, ಬದಲಾಗಿ ಈತ ವಿನಯಮೂರ್ತಿ. ಮಾತಿನಲ್ಲಿ ಸೊಗಸುಗಾರ. ಎಂತಹ ವೇಳೆಯಲ್ಲೂ `ಎಸ್ಎಚ್ಐಟಿ' ಎಂಬ ಪದ ಕೂಡ ಈತನ ನುಡಿಯಲ್ಲಿ ಬರುವುದಿಲ್ಲ. ಆದರೆ, ಅವನ ನಿಲುವನ್ನು ಒಪ್ಪದಿದ್ದರೆ, ಅಂತಹ ಅಧಿಕಾರಿಗಳೊಂದಿಗೆ ಗಂಟೆಗಟ್ಟಲೆ ಚರ್ಚಿಸುವಷ್ಟು ಸಮಯ ಹಾಗೂ ತಾಳ್ಮೆ ಇದೆ. ಕಡೆಯಲ್ಲಿ ಆ ಅಧಿಕಾರಿ ಈತನ ವಿಚಾರಗಳಿಗೆ ಸಮ್ಮತಿಸದಿದ್ದರೂ ಈತನ ಮಾತಿನ ದಾಳಿಯಿಂದ ತಪ್ಪಿಸಿಕೊಂಡರೆ ಸಾಕೆಂದು ಆತನ ವಿಚಾರಗಳಿಗೆ ಒಪ್ಪಿಗೆ ಸೂಚಿಸಿ ಬಿಡುತ್ತಾನೆ.

ಈಗ ಆರನೆಯವನನ್ನು ನೋಡೋಣ. ಇದೊಂದು ವಿಚಿತ್ರ ಪಂಗಡ. ಯಾರ ಸಂಗಡವೂ ವೈಯಕ್ತಿಕ ಹಂತದಲ್ಲಿ ಯಾವುದೇ ಗೆಳೆತನ ಬೆಸೆಯದಷ್ಟು ಶಿಸ್ತು. ಕಂಪೆನಿ ನೀಡುವ ಸಂಬಳಕ್ಕಾಗಿ ದುಡಿಯುವ ನಿಟ್ಟಿನಲ್ಲಿ ಯಾವುದೇ ವೈಯಕ್ತಿಕ ಸಂಬಂಧಗಳಿಗೆ ಬೆಲೆ ಕೊಡಕೂಡದೆಂಬ ಗಟ್ಟಿಯಾದ ವೈಯಕ್ತಿಕ ನಿಲುವು.

ವಾರದ ಮಟ್ಟಿಗೆ ರಜೆ ಹಾಕಿ ಆಸ್ಪತ್ರೆಯಲ್ಲಿದ್ದ ಹೆಂಡತಿಯ ಶುಶ್ರೂಷೆ ಮಾಡಿ ಹಣ್ಣಾಗಿ ಕಚೇರಿಗೆ ಬಂದವನನ್ನು ಈತ- `ನಿಮ್ಮ ಪತ್ನಿ ಈಗ ಹೇಗಿದ್ದಾರೆ? ಎಲ್ಲ ಸೌಖ್ಯ ತಾನೆ?' ಎಂದು ಕೇಳಿಬಿಟ್ಟರೆ, ಎಲ್ಲಿ ಕಚೇರಿಯಲ್ಲಿ ಮನೆಯ ವಾತಾವರಣ ಸೃಷ್ಟಿಯಾಗಿ ಬಿಡುತ್ತದೋ ಎಂದು ಹೆದರಿ, ಅವನನ್ನು ಕಂಡ ತಕ್ಷಣ ಅವನಿಗೆ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಪರಿಚಯಿಸಿ ಶುಷ್ಕ ನಗೆಯೊಂದಿಗೆ ಕಳುಹಿಸಿ ಬಿಡುತ್ತಾನೆ.

ಮೇಲಿನ ಎಲ್ಲರಿಗೂ ತದ್ವಿರುದ್ಧವಾದ ಏಳನೆಯವನಿದ್ದಾನೆ. ಆತ ಎಲ್ಲ ಕೆಲಸಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಮಗೇ ವಹಿಸಿಕೊಡುತ್ತಾನೆ. ಏನೇ ಆದರೂ, ನೀವೇ ನಿರ್ಧರಿಸಿ ಕಾರ್ಯವೆಸಗಬೇಕು. ಅವನನ್ನು ಭೇಟಿಯಾದಾಗಲೆಲ್ಲ. ಆತ ನಿಮ್ಮ ಮನೆಯ ವಿಚಾರ, ನಿಮ್ಮ ಹವ್ಯಾಸಗಳ ಬಗ್ಗೆ, ನಗರದಲ್ಲಿ ನಡೆಯುತ್ತಿರುವ ಚಲನಚಿತ್ರಗಳ ಕುರಿತು ಹಾಗೂ ಊರಿನ ಮಳೆ-ಬೆಳೆಗಳ ಬಗ್ಗೆ ಬಾಯಿ ತುಂಬಾ ಮಾತನಾಡುತ್ತಾನೆ. ಕೆಲಸದ ವಿಷಯವಾಗಿ ಅಲ್ಲೊಂದು ಇಲ್ಲೊಂದು ಪ್ರಶ್ನೆ ಕೇಳುವುದನ್ನು ಬಿಟ್ಟರೆ, ಅವನಿದ್ದೂ ಒಂದು ರೀತಿಯಲ್ಲಿ ನೀವೇ ಬಾಸ್ ಇದ್ದಂತೆ. ನೀವೆಷ್ಟು ಭಾಗ್ಯಶಾಲಿಗಳಲ್ಲವೆ?

ಈಗ ಹೇಳಿ. ಈ ಏಳರಲ್ಲಿ ನಿಮಗ್ಯಾರು ಹಿತ? ಯಾವ ನಾಯಕನಿಂದ ಕಂಪೆನಿಯ ಪ್ರಗತಿ ಹಾಗೂ ಅಲ್ಲಿನವರೆಲ್ಲರ ಏಳಿಗೆ ಸಾಧ್ಯ?
ಮೇಲ್ನೋಟಕ್ಕೆ ಈ ಏಳೂ ವಿಭಿನ್ನ ನಾಯಕ ಗುಣಗಳಲ್ಲಿ ಯಾವುದೇ ನ್ಯೂನತೆ ಕಂಡು ಬರುವುದಿಲ್ಲ. ಎಲ್ಲವೂ ಸರಿ ಎಂದೇ ತೋರುತ್ತದೆ. ಆದರೆ, ನಾಯಕನೊಬ್ಬನ ಮುಖ್ಯ ಕರ್ತವ್ಯವೇನು ಹಾಗೂ ಈ ಏಳೂ ಮಂದಿ ಪ್ರತಿಪಾದಿಸುತ್ತಿರುವ ಕಾರ್ಯಶೈಲಿ ಏನು ಎಂದು ಯೋಚಿಸಿದಾಗ, ಸತ್ಯ ಹೊರಬರುತ್ತದೆ.

ಮೊದಲನೆಯವನಲ್ಲಿ ಬೇರೆ ಯಾರ ಅನಿಸಿಕೆ, ಅಭಿಪ್ರಾಯಗಳಿಗೂ ಕಿಂಚಿತ್ತೂ ಬೆಲೆ ಇರುವುದಿಲ್ಲ. ಇವರು ಶೀಘ್ರದಲ್ಲಿ ಕೂಪಮಂಡೂಕರಾಗಿ ಬಿಡುತ್ತಾರೆ. ಬಿಸಿನೆಸ್ ಪ್ರಪಂಚದಲ್ಲಿ ಅನಿವಾರ್ಯವಾದ ಸೋಲುಗಳಿಂದ ಎರಡನೆಯವನು ಯಾವುದೇ ಪಾಠ ಕಲಿಯುವುದಿಲ್ಲ. ಹಗುರ ಮನಸ್ಸಿನವನಾದರೂ ಪಕ್ವತೆ ಇಲ್ಲದವನು. ಮೂರನೆಯವನು ತನ್ನದೇ ಕೆಲಸದಲ್ಲಿ ಅದೆಷ್ಟು ಮುಳುಗಿ ಹೋಗಿರುತ್ತಾನೆಂದರೆ ತನ್ನ ಕೆಲಸವನ್ನು ಇನ್ನೂ ಹತ್ತು ವಿಧಗಳಲ್ಲಿ ಪ್ರಯತ್ನಿಸಬಹುದೆಂಬ ಸಾಮಾನ್ಯಜ್ಞಾನವಾಗಲೀ ಅಥವಾ ಅದಕ್ಕೆ ಬೇಕಾದ ಕ್ರಿಯಾಶೀಲತೆಯನ್ನಾಗಲೀ ಬೆಳೆಸಿಕೊಳ್ಳುವುದೇ ಇಲ್ಲ.

ನಾಲ್ಕನೆಯವನಂತೂ ನಾಯಕನೇ ಅಲ್ಲ. ಸಾವಿರ ಉಳಿಸಲು ಹೋಗಿ ಕೋಟಿ ಕಳೆದಿರುತ್ತಾನೆ. ನಂತರದವನು ಎಲ್ಲ ತನ್ನ ವಿಚಾರದಂತೆಯೇ ನಡೆಯಬೇಕೆಂಬ ಜಿದ್ದಿಗೆ ಬೀಳುತ್ತಾನೆ. ನಿಮ್ಮ ಮಾತುಗಳನ್ನು ಅದೆಷ್ಟು ಗೌರವದಿಂದ ಕೇಳುತ್ತಾನೋ ಅಷ್ಟೇ ತ್ವರಿತದಿಂದ ನಿರ್ಲಕ್ಷಿಸುತ್ತಾನೆ ಕೂಡ. ಮೊದಲಿನವನ ಕೂಪದಲ್ಲಿ ಈತ ಮಂಡೂಕ ಮಹಾಶಯ! ಆರನೆಯವನು ನೀವು ಇಪ್ಪತ್ತು ವರ್ಷ ಜೊತೆ ಜೊತೆಯಾಗಿ ದುಡಿದರೂ, ಇಪ್ಪತ್ತೊಂದನೆಯ ವರ್ಷ ಆತ ನಿಮಗೆ ಸಂಪೂರ್ಣ ಅಪರಿಚಿತ. ಇನ್ನು ಕಡೆಯವನು, `ನಾಯಕನೇ ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂದಾಗಿಬಿಟ್ಟರೆ ಅಂತಹ ಕಂಪೆನಿ ನಮ್ಮ ದೇಶದ ಟೆನ್ನಿಸ್ ತಂಡದಂತೆ ಅಲ್ಲೂ ಇರುವುದಿಲ್ಲ, ಇಲ್ಲೂ ಇರುವುದಿಲ್ಲ.

ಬೋರ್ಡ್ ರೂಮಿನ ಸುತ್ತಮುತ್ತಲಿನ ಅಧಿಕಾರಿಗಳು ತಾವೇ ಈ ಏಳರಲ್ಲಿ ಒಂದಾಗದಂತೆ ನೋಡಿಕೊಳ್ಳಬೇಕು. ಅದಕ್ಕೂ ಮುಖ್ಯವಾಗಿ, ತಮ್ಮನ್ನು ಆಳುತ್ತಿರುವ ಕಂಪೆನಿಯ ನಾಯಕನಲ್ಲಿ ಹಾಗೂ ಬೋರ್ಡ್ ರೂಮಿನ ವಾರಸುದಾರರಲ್ಲಿ ಇಂತಹ ಹಲವು ಗುಣಗಳು ಸಮೃದ್ಧವಾಗಿವೆ ಎಂದು ಸಾಬೀತಾದಾಗ, ಸದ್ದಿಲ್ಲದೆ ಆ ಕಂಪೆನಿಯನ್ನು ತೊರೆದು ಮತ್ತೊಂದು ಕೆಲಸವನ್ನು ಹುಡುಕಿಕೊಳ್ಳುವುದು ಸೂಕ್ತವಾದೀತು. ಏಕೆಂದರೆ, ಮೇಲ್ನೋಟಕ್ಕೆ ಇವುಗಳು ಅಷ್ಟೊಂದು ಹಾನಿಕರವಲ್ಲವೆಂದು ತೋರಿದರೂ, ಇವುಗಳೆಲ್ಲ ವ್ಯಕ್ತಿಯೊಬ್ಬನ ಮೂಲಗುಣಗಳು.
ಕಂಪೆನಿ ಮುಚ್ಚುವ ಹಂತ ತಲುಪಿದರೂ, ಇವುಗಳೆಂದಿಗೂ ಬದಲಾಗುವುದಿಲ್ಲ!

* ಲೇಖಕರನ್ನು satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.