ಬುಧವಾರ, ಏಪ್ರಿಲ್ 14, 2021
31 °C

ನಿಡಗುಂದಿ: ಸಂಚಾರಕ್ಕಿಲ್ಲ ತಹಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ನಿಡಗುಂದಿ ದಿನೇ ದಿನೇ ಬೆಳೆದಂತೆ ವಾಹನ ಸಂಚಾರವೂ ಅಧಿಕಗೊಳ್ಳುತ್ತಿದೆ.ನಿಡಗುಂದಿಯ ಹೊಸ್ ಬಸ್ ನಿಲ್ದಾಣದಿಂದ, ಕಾಲೇಜು ಮಾರ್ಗವಾಗಿ ನಿಡಗುಂದಿ ಹಳೆ ಬಸ್‌ನಿಲ್ದಾಣಕ್ಕೆ ಸಾಗುವ ರಸ್ತೆ ಯಾವಾಗಲೂ ವಾಹನ, ಜನರಿಂದ ಗಿಜಿಗಿಡುತ್ತಿದೆ. ಆಟೋ, ಟಂಟಂ, ಮ್ಯಾಕ್ಸಿ ಕ್ಯಾಬ್ ಇನ್ನಿತರ ಖಾಸಗಿ ವಾಹನಗಳಿಂದ ತುಂಬಿ ತುಳುಕುತ್ತಿದೆ.

 

ಜನರ ದಟ್ಟಣೆಯಂತೂ ಇನ್ನೂ ಹೆಚ್ಚು. ಈ ರಸ್ತೆಯ ಪಕ್ಕದಲ್ಲಿಯೇ ಕಾಯಿಪಲ್ಯೆ ಮಾರುವವರ ಸಂಖ್ಯೆಯೂ ಅಧಿಕ. ಇಷ್ಟೊಂದು ಪ್ರಯಾಸದಾಯಕ ರಸ್ತೆಗೆ ಕಾರಣ ವಾಹನಗಳ ಅಡ್ಡಾದಿಡ್ಡಿ ನಿಲ್ಲಿಸುವುದು, ರಸ್ತೆ ಬದಿ ಅತಿಕ್ರಮಣ ಅಂಗಡಿಗಳು, ಸಂಚಾರ ನಿಯಮಗಳ ಪ್ರಜ್ಞೆ ಇಲ್ಲದ ವಾಹನ ಚಾಲಕರು ಹಾಗೂ ಇಕ್ಕಟ್ಟಾದ ರಸ್ತೆ. ವಾಸ್ತವವಾಗಿ ಈ ರಸ್ತೆ 50 ಅಡಿ ಅಗಲವಾಗಿದ್ದರೂ, ಅತಿಕ್ರಮಣ ದಿಂದಾಗಿ ಇದು 30 ಅಡಿಗೆ ಕುಸಿದಿದೆ.ಅತಿ ಸಂಚಾರ ದಟ್ಟಣೆಯಿಂದಾಗಿ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಲವೆಡೆ ತಗ್ಗು, ದಿನ್ನೆಗಳು ಬಿದ್ದಿದ್ದು, ಡಾಂಬರೀಕರಣ ಸಂಪೂರ್ಣ ಮಾಯವಾಗಿದೆ. ಇದೇ ರಸ್ತೆಯಲ್ಲಿ ಎರಡು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುವುದರಿಂದ ಅಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕ. ಅವರಿಂದಲೂ ಈ ರಸ್ತೆ ಸದಾ ಗಿಜಗಿಡುತ್ತದೆ. ಸದಾ ಜನ ಮತ್ತು ವಾಹನ ಸಂಚಾರದಿಂದಾಗಿ ಪಾದಚಾರಿಗಳು ತಿರುಗಾಡುವುದೇ ದುಸ್ತರವಾಗಿದೆ.ಹೊಸ್ ಬಸ್ ನಿಲ್ದಾಣದ ಬಳಿಯಿಂತೂ ಮುದ್ದೇಬಿಹಾಳ, ಬಸವನಬಾಗೇವಾಡಿ, ಬಾಗಲ ಕೋಟೆ, ವಿಜಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಕಡೆ ಹೋಗುವ ಖಾಸಗಿ ಮ್ಯಾಕ್ಸಿಕ್ಯಾಬ್, ಆಟೋಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಸಂಸ್ಥೆಯ ಬಸ್‌ಗಳು ಬಸ್‌ನಿಲ್ದಾಣ ಪ್ರವೇಶಿಸುವುದು ದುಸ್ತರವಾಗಿದೆ.ಪರಿಹಾರ: ಇದಕ್ಕೆಲ್ಲಾ ಪರಿಹಾರವೆಂದರೇ ಈ ರಸ್ತೆಯನ್ನು ಅಗಲೀಕರಣಗೊಳಿಸಿ ಏಕಮುಖ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು. ಅತಿಕ್ರಮಣ ಸ್ಥಳಗಳನ್ನು ತೆರವುಗೊಳಿಸಿ, ಏಕಮುಖ ರಸ್ತೆಯನ್ನಾಗಿ ನಿರ್ಮಾಣ ಮಾಡುವುದು. ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳಿಗೆ ಕಡಿವಾಣ ಹಾಕಿ ಶಿಸ್ತಿನಿಂದ ಏಕಬದಿಯಾಗಿ ವಾಹನಗಳನ್ನು ನಿಲ್ಲಿಸಬೇಕಾಗಿದೆ. ಅದಕ್ಕಾಗಿ ಪ್ರತಿದಿನವೂ ಒಬ್ಬ ಪೊಲೀಸರನ್ನು ಇಲ್ಲಿ ನಿಯೋಜಿಸಬೇಕಾಗಿದೆ. ಪೊಲೀಸ್ ಇಲಾಖೆ, ಗ್ರಾ.ಪಂ. ಆಡಳಿತ ಹಾಗೂ ಜನಪ್ರತಿನಿಧಿಗಳೂ ಕೂಡಿಕೊಂಡು ಇದಕ್ಕೊಂದು ಶಾಶ್ವತ ಪರಿಹಾರ ಹುಡಕಬೇಕಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.