ಬುಧವಾರ, ಏಪ್ರಿಲ್ 14, 2021
23 °C

ನಿತ್ಯ 8 ಲಕ್ಷ ಲೀಟರ್ ಹಾಲು ಪೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಅನಗತ್ಯ ಹಸ್ತಕ್ಷೇಪದಿಂದಾಗಿ ರಾಜ್ಯದ ಹಾಲು ಒಕ್ಕೂಟಗಳು ಸಂಗ್ರಹಿಸುತ್ತಿರುವ ಹಾಲಿನಲ್ಲಿ 8 ಲಕ್ಷ ಲೀಟರ್ ಹಾಲು ನಿತ್ಯವೂ ಪೋಲಾಗುತ್ತಿದೆ. ಇದರಿಂದಾಗಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ನಷ್ಟದತ್ತ ಮುಖ ಮಾಡಿದೆ ಎಂದು ಮಂಡಳಿ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, `ರಾಜ್ಯದಾದ್ಯಂತ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. 3 ವರ್ಷಗಳ ಹಿಂದೆ 26 ಲಕ್ಷ ಲೀಟರ್‌ನಷ್ಟಿದ್ದ ಉತ್ಪಾದನಾ ಪ್ರಮಾಣ ಇದೀಗ 54 ಲಕ್ಷ ಲೀಟರ್‌ಗೆ ತಲುಪಿದೆ. ಪ್ರಸಕ್ತ ವರ್ಷ ಉತ್ಪಾದನೆ ಶೇ 22ರಷ್ಟು ಹೆಚ್ಚಿದ್ದರೆ, ಮಾರಾಟ ಕೇವಲ ಶೇ 4ರಷ್ಟು ಹೆಚ್ಚಿದೆ. ಮಿಕ್ಕ ಶೇ 18ರಷ್ಟು ಹಾಲು ಪುಡಿ ಮಾಡಲು ಬಳಕೆಯಾಗುತ್ತಿದೆ~ ಎಂದರು.`ರಾಜ್ಯದಲ್ಲಿ 35 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಹೊರ ರಾಜ್ಯಗಳಿಗೆ 8 ಲಕ್ಷ ಲೀಟರ್ ರಫ್ತಾಗುತ್ತಿದೆ. ನಿತ್ಯವೂ 8ರಿಂದ 10 ಲಕ್ಷ ಲೀಟರ್ ಹಾಲನ್ನು ಪುಡಿ ಮಾಡಿ, ಮಾರಾಟ ಮಾಡಲಾಗುತ್ತಿತ್ತು. ಸರ್ಕಾರ ನಿಯೋಜಿಸಿರುವ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚುವರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹಾಲಿನ ಪುಡಿಯ ಮಾರಾಟದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದ್ದರಿಂದ 16,000 ಟನ್ ಹಾಲಿನ ಪುಡಿ ಗೋದಾಮಿನಲ್ಲಿ ಕೊಳೆಯುತ್ತಿದೆ~ ಎಂದು ದೂರಿದರು.`ರಾಜ್ಯದ ಅಂಗನವಾಡಿಗಳಿಗೆ, ಶಾಲೆ- ಕಾಲೇಜು, ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ, ರಾಜ್ಯ ಸರ್ಕಾರ ನಡೆಸುವ ಇತರ ಸೇವಾಧಾಮಗಳಿಗೆ ಹಾಲಿನ  ಪುಡಿ ಖರೀದಿಸಿ ಪೂರೈಸಿದರೆ, ನಷ್ಟದ ಪ್ರಮಾಣ ಕಡಿಮೆಯಾಗಲಿದೆ. ನಿತ್ಯವೂ 8 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಿ ಸಾಗಣೆ ವೆಚ್ಚವೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ದರ ಕಡಿತಗೊಳಿಸಲಾಗಿದೆ. ಕೆಲವು ದಿನ ಸಮಸ್ಯೆ ಮುಂದುವರಿಯಲಿದ್ದು, ಹಾಲು ಉತ್ಪಾದಕರು ಸಹಕರಿಸಬೇಕು~ ಎಂದು ಅವರು ಕೋರಿದರು.`ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರನ್ನು ನಿಯೋಜಿಸಬೇಕು, ರೂ 200 ಕೋಟಿ ಪ್ರೋತ್ಸಾಹಧನ ನೀಡಿ ಮಹಾಮಂಡಳಿಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಅಪೌಷ್ಟಿಕತೆಯ ಮಕ್ಕಳಿಗೆ ಹಾಲನ್ನು ಖರೀದಿಸಿ ವಿತರಿಸುವ ಮೂಲಕ ಹಾಲು ಉತ್ಪಾದಕರಿಗೂ, ಒಕ್ಕೂಟಗಳಿಗೂ ನೆರವಾಗಬೇಕು~ ಎಂದೂ ಅವರು ಕೋರಿದರು.ಹದಗೆಟ್ಟ ಮಹಾಮಂಡಳಿಯ ಆಡಳಿತ

`ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ನಾನು ಎರಡು ತಿಂಗಳ ಕಾಲ ಬಂಧನದಲ್ಲಿದ್ದ ಅವಧಿಯಲ್ಲಿ ಮಹಾಮಂಡಳಿಯ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ~ ಎಂದು ತಿಳಿಸಿದ ಅವರು, `ಸಹಕಾರ ಸಚಿವ ಬಿ.ಜಿ. ಪುಟ್ಟಸ್ವಾಮಿ  ಅನಗತ್ಯ ಹಸ್ತಕ್ಷೇಪ ಮಾಡುತ್ತ, ನಷ್ಟಕ್ಕೆ ಕಾರಣರಾಗಿದ್ದಾರೆ.

 

ಕೆಲಸ ಮಾಡದ ಅಧಿಕಾರಿಗಳನ್ನು ನಿಯೋಜಿಸಿದ್ದರಿಂದ ಹಾಲು ಉತ್ಪನ್ನಗಳ ಮಾರುಕಟ್ಟೆ ವಿಸ್ತೀರ್ಣವಾಗಿಲ್ಲ. ಕೂಡಲೇ ಈ ಕುರಿತು ಗಮನಹರಿಸಿ, ಎಲ್ಲ ಹಾಲು ಒಕ್ಕೂಟಗಳ ಪುನಶ್ಚೇತನಕ್ಕೆ ಮುಂದಾಗುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿ, ಚರ್ಚಿಸಲಾಗುವುದು~

 ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.