ಶನಿವಾರ, ಮೇ 21, 2022
23 °C

ನಿಯತಕಾಲಿಕಗಳು ಎದುರಿಸುತ್ತಿರುವ ಸಮಸ್ಯೆ ಶೀಘ್ರ ಪರಿಹಾರ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ನಿಯತಕಾಲಿಕಗಳ ಪ್ರಸರಣ ಸಂಖ್ಯೆ, ಬೆಲೆ ನಿಗದಿ ಮತ್ತು ಜಾಹೀರಾತು ಬೆಂಬಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಶೀಘ್ರದಲ್ಲಿ ಪರಿಹಾರವಾಗಬಹುದು ಎಂಬ ಆಶಾಭಾವನೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ವ್ಯಕ್ತಪಡಿಸಿದ್ದಾರೆ.

`ಈ ಸಮಸ್ಯೆಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಹರಿಸಲು ಸರ್ಕಾರ ಪ್ರಯತ್ನ ನಡೆಸಿದೆ~ ಎಂದು ಅವರು 38ನೇ ಜಾಗತಿಕ ನಿಯತಕಾಲಿಕಗಳ ಸಮಾವೇಶದಲ್ಲಿ ಮಂಗಳವಾರ ತಿಳಿಸಿದರು.

ಪತ್ರಿಕೆಗಳನ್ನು ನೋಂದಾಯಿಸಲು ಅರ್ಜಿ ಸಲ್ಲಿಸುವಾಗ ನಡೆಯುವ ಪೊಲೀಸ್ ಪರಿಶೀಲನೆಯ ಸಮಸ್ಯೆಯನ್ನೂ ಆದಷ್ಟು ಶೀಘ್ರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಎರಡು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಸಮಾವೇಶದ ಸಂದರ್ಭಕ್ಕೆ ಹೋಲಿಸಿದಾಗ ನಿಯತಕಾಲಿಕ ಕ್ಷೇತ್ರದಲ್ಲಿ ಈಗ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಆಗಿವೆ. ಇನ್ನಷ್ಟು ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡರೆ ಒಳಿತು ಎಂದು ಸಚಿವರು ಸಲಹೆ ನೀಡಿದರು.

1955ರ ಮುದ್ರಣ ಮಾಧ್ಯಮ ನೀತಿಯನ್ನು 2002 ಮತ್ತು 2005ರಲ್ಲಿ ಪರಾಮರ್ಶಿಸಿದ ನಂತರ ನಿಯತಕಾಲಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಕ್ಷೇತ್ರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ. 2010-15ರ ಅವಧಿಯಲ್ಲಿ ಕ್ಷೇತ್ರವು ವಾರ್ಷಿಕ ಶೇ 4.8ರಷ್ಟು ಬೆಳವಣಿಗೆ ಸಾಧಿಸಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

ಮುದ್ರಣ ಮಾಧ್ಯಮದ ಉದಾರೀಕರಣ ನೀತಿಯಿಂದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶ ದೊರಕಿದೆ ಮತ್ತು ಇದರಿಂದಾಗಿ ನಿಯತಕಾಲಿಕ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಿದೆ. ವಿದೇಶಗಳ 260 ನಿಯತಕಾಲಿಕಗಳಿಗೆ ಭಾರತದ ಆವೃತ್ತಿ ಆರಂಭಿಸಲು ಅನುಮತಿ ನೀಡಲಾಗಿದೆ. ಇನ್ನೂ ಅನೇಕ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಬೇರೆ ಬೇರೆ ಭಾಷೆಗಳ ಒಟ್ಟು 77 ಸಾವಿರ ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನೋಂದಣಿಯನ್ನು ಪಡೆದಿವೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.