ಶುಕ್ರವಾರ, ಜನವರಿ 24, 2020
28 °C

ನಿರಂತರ ಲಾಭದತ್ತ ಕೆಎಸ್‌ಡಿಎಲ್: ಶಿವಾನಂದ ನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ನಿರಂತರ ಲಾಭ ತಂದು ಕೊಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದರು.ನಗರದಲ್ಲಿ ಕೆಎಸ್‌ಡಿಎಲ್‌ನಿಂದ ಗುರುವಾರ ಆಯೋಜಿಸಲಾದ `ಸೋಪ್ ಸಂತೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಸ್ಥೆಯು ಈ ಹಿಂದೆ ರೂ. 98 ಕೋಟಿ ನಷ್ಟದಲ್ಲಿತ್ತು. ಆದರೆ, ಈಗ ನಿರಂತರ ಪರಿಶ್ರಮದಿಂದ ಲಾಭದಲ್ಲಿದೆ. ರಫ್ತಿಗಾಗಿ `ಮುಖ್ಯಮಂತ್ರಿ ಪ್ರಶಸ್ತಿ~ ಮತ್ತು `ಕರ್ನಾಟಕ ರತ್ನ ಪ್ರಶಸ್ತಿ~ ಗಳಿಸಿದೆ. ಪ್ರಸಕ್ತ ವರ್ಷ ರೂ. 260 ಕೋಟಿ ಮಾರಾಟ ಗುರಿ ಹೊಂದಿದೆ. ಆದರೆ, ಜನಸಾಮಾನ್ಯರಿಗೆ ಮೈಸೂರು ಸ್ಯಾಂಡಲ್ ಉತ್ಪನ್ನಗಳ ಬಗ್ಗೆ ತಿಳಿಸುವುದಕ್ಕಾಗಿ `ಸೋಪ್ ಸಂತೆ~ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಪ್ರಸ್ತುತ 47 ಬಗೆಯ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ ಎಂದರು.ವಿಶ್ವದಲ್ಲಿ ಶುದ್ಧ ಶ್ರೀಗಂಧದ ಎಣ್ಣೆಯನ್ನು ಬಳಸಿ ಸಾಬೂನು ತಯಾರಿಸುವ ಏಕೈಕ ಸಂಸ್ಥೆ ಕೆಎಸ್‌ಡಿಎಲ್. ಜ. 25ರಂದು ರೂ. 750 ಬೆಲೆಯ `ಮಿಲೇನಿಯಂ~ ಸೋಪ್ ಬಿಡುಗಡೆ ಮಾಡಲಾಗುವುದು. ರೈತರು ಹೆಚ್ಚು ಪ್ರಮಾಣದಲ್ಲಿ ಗಂಧದ ಸಸಿಗಳನ್ನು ಬೆಳೆಸಬೇಕು. ರೂ. 35 ಬೆಲೆಯ ಸಸಿಗಳನ್ನು ಸಬ್ಸಿಡಿ ದರದಲ್ಲಿ ರೂ. 12ರಂತೆ ವಿತರಿಸಲಾಗುತ್ತಿದೆ. ಮುಂದೆ ಉಚಿತವಾಗಿ ವಿತರಿಸುವ ಬಗ್ಗೆ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದರು.ಸಂಸ್ಥೆಯು ಪ್ರಚಾರಕ್ಕೆ ಹೆಚ್ಚು ಹಣ ವಿನಿಯೋಗಿಸಲಾಗದು. ಅದಕ್ಕಾಗಿ ನೇರವಾಗಿ ಉತ್ಪನ್ನಗಳ ಮಾರಾಟ ಮೇಳವನ್ನೇ ನಡೆಸಲಾಗುತ್ತಿದೆ. ಖಾಸಗಿಯವರು ಶೇ. 80ರಷ್ಟು ವೆಚ್ಚ ಪ್ರಚಾರಕ್ಕಾಗಿ ಮೀಸಲಿಡುತ್ತಾರೆ. ಉಳಿದ ಶೇ. 20ರಷ್ಟು ಮೌಲ್ಯದ ಉತ್ಪನ್ನ ಕೊಡುತ್ತಾರೆ. ಹೀಗಿರುವಾಗ ಆ ಉತ್ಪನ್ನಗಳಲ್ಲಿ ಗುಣಮಟ್ಟ ನಿರೀಕ್ಷಿಸಲಾಗದು ಎಂದು ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಖಾಸಗಿ ವಲಯದ ಸ್ಪರ್ಧೆ ಎದುರಿಸಿ ಸಂಸ್ಥೆಯು 96 ವರ್ಷಗಳನ್ನು ಪೂರೈಸಿದೆ. ಸಂಸ್ಥೆಯು ಇನ್ನಷ್ಟು ಹಿರಿಮೆ ಸಾಧಿಸಲಿ ಎಂದು ಹಾರೈಸಿದರು.ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ ಮಾತನಾಡಿ, ಯಾವ ಸಾಬೂನಿನಲ್ಲಿ ಕೊಬ್ಬಿನ ಪ್ರಮಾಣ ಶೇ. 70ಕ್ಕಿಂತಲೂ ಹೆಚ್ಚು ಇರುತ್ತದೋ ಅದು ಉತ್ತಮ ಸಾಬೂನು. ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಿಗೆ ಕೆಎಸ್‌ಡಿಎಲ್ ಉತ್ಪನ್ನಗಳ ಕಿಟ್‌ನ್ನೇ ಪೂರೈಸಲಾಗುತ್ತದೆ ಎಂದರು.ಜಿ.ಪಂ. ಅಧ್ಯಕ್ಷ ಎಸ್.ಎಂ. ವೀರೇಶ್, ಉಪಾಧ್ಯಕ್ಷೆ ಪ್ರೇಮಾ ಸಿದ್ದೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಮೇಯರ್ ಎಚ್.ಎನ್. ಗುರುನಾಥ್, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಶೇಖರ್, ಪ್ರಧಾನ ಮಾರುಕಟ್ಟೆ ವ್ಯವಸ್ಥಾಪಕ ಡಿ.ಎನ್. ವಸಂತಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)