ಸೋಮವಾರ, ಜನವರಿ 20, 2020
18 °C

ನಿರ್ಭಯಾ ಪ್ರಕರಣ: ಕರಾಳ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ದೆಹಲಿಯಲ್ಲಿ ನಿರ್ಭಯಾ ಎಂಬ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಲ್ಲಿನ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಎಐಎಂಎಸ್ಎಸ್‌, ಎಐಡಿವೈಒ ಮತ್ತು ಎಐಡಿಎಸ್ಒ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಕರಾಳ ದಿನ ಆಚರಿಸಿ, ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪ್ರತಿಭಟನೆ ನಡೆಸಿದರು.ಎಐಎಂಎಸ್ಎಸ್‌ ಜಿಲ್ಲಾ ಸಂಚಾಲಕಿ ಪ್ರಭಾವತಿ ಗೂಗಲ್‌ ಈ ಸಂದರ್ಭದಲ್ಲಿ ಮಾತನಾಡಿ, ‘ಮಹಿಳೆ­ಯರ ಮೇಲಿನ ದೌರ್ಜನ್ಯಗಳು ಹಳ್ಳಿ ಪಟ್ಟಣಗಳೆನ್ನದೆ ಮತ್ತೆ ಮತ್ತೆ ಮರುಕಳಿಸುತ್ತಿವೆ. ಹೆಚ್ಚುತ್ತಿರುವ ಅಶ್ಲೀಲ ಸಿನಿಮಾ ಸಾಹಿತ್ಯದ ಪ್ರಚಾರ ಹಾಗೂ ಬದಲಾಗದ ಪುರುಷ ಪ್ರಧಾನ ಮನೋ­ಭಾವವು ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಮುಖ್ಯ ಕಾರಣವಾಗಿವೆ.ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಅಶ್ಲೀಲ ಸಿನಿಮಾ ಸಾಹಿತ್ಯ ತಡೆಗಟ್ಟುವಂತೆ ಕೋರಿ ಇತ್ತೀಚೆಗೆ ಜಿಲ್ಲಾಧಿಕಾರಿ­ಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಅದೇ ಜಿಲ್ಲಾಧಿಕಾರಿ, ಸಾರ್ವಜನಿಕರು ನಾಚಿ ತಲೆತಗ್ಗಿಸುವಂತೆ ಅರೆಬರೆ ಬಟ್ಟೆತೊಟ್ಟ ಯುವತಿಯರ ಐಟಂ ಡಾನ್ಸ್‌ಗೆ ಅವಕಾಶ ನೀಡಿದ್ದು ಎಷ್ಟರ ಮಟ್ಟಿಗೆ ಸರಿ. ಇದರಿಂದ ಯುವಕರನ್ನು ಜಿಲ್ಲಾಡಳಿತವೇ ತಪ್ಪು ದಾರಿಗೆ ಎಳೆದಂತಾಗುತ್ತದೆ’ ಎಂದು ಟೀಕಿಸಿದರು.ಎಐಡಿಎಸ್ಒನ ಜಿಲ್ಲಾ ಅಧ್ಯಕ್ಷ ಶರಣು ಗೋನ­ವಾರ, ‘ಸಮಾಜದಲ್ಲಿ ಬೇರೂರಿರುವ ಪುರುಷ ಪ್ರಧಾನ ಆಲೋಚನೆಗಳು ಬದಲಾಗಿ ನಿಜವಾದ ಪ್ರಜಾತಂತ್ರ ಮೌಲ್ಯಗಳು ಸ್ಥಾಪನೆಯಾಗ­ಬೇಕಾಗಿದೆ. ಸ್ತ್ರೀ-ಪುರುಷರು ಎಲ್ಲಾ ರೀತಿಯಿಂದಲೂ ಸಮಾನರು ಎಂಬ ಭಾವನೆಯು ದೃಢವಾಗಿ ನೆಲೆ­ಗೊಳ್ಳಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಭದ್ರತೆ­ಯನ್ನು ಖಾತ್ರಿಪಡಿಸಲು ಹಾಗೂ ಅಶ್ಲೀಲತೆಯ ಪ್ರಚಾರಕ್ಕೆ ಕಡಿವಾಣ ಹಾಕಲು ವಿವಿಧ ಬೇಡಿಕೆ­ಗಳನ್ನಾಧರಿಸಿದ ಬಲಿಷ್ಠ ಜನಾಂದೋಲನಗಳು ರೂಪುಗೊಳ್ಳಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದರು.ಎಐಡಿವೈಒ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಹೊಸಮನಿ, ಭುವನಾ ಬಳ್ಳಾರಿ, ದೀಪಾ,, ಸದಾಶಿವ, ಅಕ್ಷಯ ಪಾವಗಡ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)