ಶನಿವಾರ, ಮೇ 8, 2021
18 °C

ನಿರ್ಮಿಲಾನಂದನಾಥ ಸ್ವಾಮೀಜಿಗೆ ಭಕ್ತರ ಪ್ರೀತಿ, ಹೂ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಆದಿಚುಂಚನಗಿರಿ ಪೀಠಾಧೀಶರಾದ ಬಳಿಕ ಶನಿವಾರ ಮೊದಲಬಾರಿ ಹಾಸನಕ್ಕೆ ಬಂದಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಜಿಲ್ಲೆಯ ಭಕ್ತರ ಪ್ರೀತಿ, ಭಕ್ತಿಯಲ್ಲಿ ಮಿಂದೆದ್ದರು.ಇಲ್ಲಿನ ಆದಿಚುಂಚನಗಿರಿ ಆಂಗ್ಲಮಾಧ್ಯಮ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಾಗೂ ನಿರ್ಮಿಲಾನಂದನಾಥ ಸ್ವಾಮೀಜಿ ಅವರ ಪುರಪ್ರವೇಶ ಹಾಗೂ ಗುರುವಂದನಾ ಸಮಾರಂಭಕ್ಕೆ ಬಂದಿದ್ದ ಅವರ ಮೇಲೆ ಜನರು ಭಕ್ತಿಯ ಜತೆಗೆ ಹೂವಿನ ಮಳೆಗರೆದು ಗುರುವಂದನೆ ಸಲ್ಲಿಸಿದರು.ಮುಂಜಾನೆಯಿಂದ ನಗರದಲ್ಲಿ ಬಿಸಿಲು ಸುಡುತ್ತಿದ್ದರೂ ಸ್ವಾಮೀಜಿ ವೇದಿಕೆಗೆ ಆಗಮಿಸುತ್ತಿದ್ದಂತೆ ಬಾನು ಮಳೆಗರೆಯಿತು.ಸುಮಾರು ನಾಲ್ಕು ದಶಕಗಳ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಹಾಸನ ಪುರಪ್ರವೇಶ ಮಾಡಿದಾಗ ಅವರನ್ನು ಈಗಿನ ರೈಲ್ವೆ ನಿಲ್ದಾಣದ ಜಾಗದಲ್ಲೇ ಸ್ವಾಗತಿಸಿದ್ದರಂತೆ. ಅದನ್ನು ಸ್ಮರಿಸುವ ರೀತಿಯಲ್ಲಿ ಶನಿವಾರ ನಿರ್ಮಲಾನಂದನಾಥ ಸ್ವಾಮೀಜಿಯವರನ್ನೂ ರೈಲ್ವೆ ನಿಲ್ದಾಣದ ಮುಂದೆಯೇ ಬರಮಾಡಿಕೊಳ್ಳಲಾಯಿತು.ಭಕ್ತರ ನೂರಾರು ವಾಹನಗಳ ಮೆರವಣಿಗೆಯಲ್ಲಿ ಇಲ್ಲಿಗೆ ಬಂದಿಳಿದ ಸ್ವಾಮೀಜಿಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೂಮಾಲೆ ಹಾಕಿ ಬರಮಾಡಿಕೊಂಡರು. ಅವರ ಸ್ವಾಗತಕ್ಕಾಗಿ ಮುಂಜಾನೆಯಿಂದಲೇ ಸಾವಿರಾರು ಜನರು ಸಿದ್ಧರಾಗಿ ನಿಂತಿದ್ದರು.ವಾಹನದಿಂದ ಇಳಿದು ತೆಂಗಿನ ಗರಿ, ಮಾವಿನೆಲೆಗಳಿಂದ ಅಲಂಕರಿಸಿದ್ದ ಚಪ್ಪರದ ಮೂಲಕ ಹಾಯ್ದು ಬಂದ ಸ್ವಾಮೀಜಿ, ಮೊದಲೇ ಅಲಂಕರಿಸಿ ಸಿದ್ಧಮಾಡಿಟ್ಟಿದ್ದ ಸಾರೋಟನ್ನು ಏರಿದರು. ಅಕ್ಕಪಕ್ಕದಲ್ಲಿ ಭಟರ ವೇಷಭೂಷಣ ಧರಿಸಿದ ಕುದುರೆ ಸವಾರರೂ ಇದ್ದರು. ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿಯೂ ಸಾರೋಟನ್ನು ಏರಿದ ಬಳಿಕ ಮೆರವಣಿಗೆ ಆರಂಭವಾಯಿತು.ಇತ್ತ ಬಿ.ಎಂ. ರಸ್ತೆಯುದ್ದಕ್ಕೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸ್ವಾಮೀಜಿ ಮೇಲೆ ಹೂಮಳೆಗರೆದರು.

ಮೆರವಣಿಗೆಯಲ್ಲಿ ನಂದಿ ಧ್ವಜ, ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ, ಚಿಟ್ಟಿ ಮೇಳ, ನವಿಲು ಕುಣಿತ, ವಿವಿಧ ಕಲಾ ತಂಡಗಳು, ವಾದ್ಯ ಗೋಷ್ಠಿಗಳು ಪಾಲ್ಗೊಂಡಿದ್ದವು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಶಂಕರಮಠದ ಸಮೀಪ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ವತಿಯಿಂದ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು. ನಂತರ ಬ್ರಾಹ್ಮಣ ಸಭಾದವರು ಸನ್ಮಾನಿಸಿ ಬರಮಾಡಿಕೊಂಡರು.ಮೆರವಣಿಗೆ ಆದಿಚುಂಚನಗಿರಿ ಮಠಕ್ಕೆ ಬಂದ ಬಳಿಕ ಅಲ್ಲಿ ಹೋಮದ ಪೂರ್ಣಾಹುತಿ ನಡೆಯಿತು. ಬಳಿಕ  ಮತ್ತೆ ಮೆರವಣಿಗೆ ಮೂಲಕ ಸ್ವಾಮೀಜಿಯನ್ನು ಕಾರ್ಯಕ್ರಮದ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು.ಶಾಸಕ ಎಚ್.ಎಸ್. ಪ್ರಕಾಶ್, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಹಾಗೂ ಇತರ ಸಾವಿರಾರು  ಜನರು ಪಾಲ್ಗೊಂಡಿದ್ದರು.ಅದ್ದೂರಿ ಸ್ವಾಗತ

ಚನ್ನರಾಯಪಟ್ಟಣ ವರದಿ: ಪುರಪ್ರವೇಶ ಮಾಡಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಾಧೀಶ ನಿರ್ಮಲಾನಂದನಾಥಸ್ವಾಮಿ ಅವರನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಶನಿವಾರ ಬರಮಾಡಿಕೊಳ್ಳಲಾಯಿತು.ಪುರಪ್ರವೇಶದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಮೆರವಣಿಗೆ ಸಾಗುವ ಬಿ.ಎಂ. ರಸ್ತೆಯಲ್ಲಿ ತಳಿರು, ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಹಲವೆಡೆ ಫ್ಲೆಕ್ಸ್‌ಗಳು ರಾರಾಜಿಸಿದವು. ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಹೂಮಳೆಗೆರೆದು ಸ್ವಾಗತಿಸಿದರು. ತೆರೆದ ಜೀಪಿನಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಅವರನ್ನು ಮೆರವಣಿಗೆ ನಡೆಸಲಾಯಿತು. ಶಾಸಕ ಸಿ.ಎನ್. ಬಾಲಕೃಷ್ಣ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಶಂಕರ್‌ಕುಂಟೆ, ಕುಸಮಬಾಲಕೃಷ್ಣ, ವಿವಿಧ ಪಕ್ಷಗಳ ಮುಖಂಡರಾದ ಎಂ.ಎ. ಗೋಪಾಲಸ್ವಾಮಿ, ಎಚ್.ಎಸ್. ವಿಜಯಕುಮಾರ್, ಪಟೇಲ್‌ಮಂಜುನಾಥ್, ಪರಮದೇವರಾಜೇಗೌಡ, ಎಂ. ಶಂಕರ್, ಎನ್. ಬಸವರಾಜು, ಕೆ.ಎಲ್. ಶ್ರೀಧರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್, ಪರಿಸರವಾದಿ ಸಿ.ಎನ್. ಅಶೋಕ್, ನಾಡಪ್ರಭು ಕೆಂಪೇಗೌಡ ವೇದಿಕೆ ಸಂಸ್ಥಾಪಕ ಆನಂದ್‌ಕಾಳೇನಹಳ್ಳಿ ಇತರರು ಇದ್ದರು. ಮೆರವಣಿಗೆಯುದ್ದಕ್ಕೂ ವಿವಿಧ ಶಾಲಾ- ಕಾಲೇಜು, ಸಂಘ. ಸಂಸ್ಥೆಗಳು ಸ್ವಾಮೀಜಿ ಅವರನ್ನು ಸತ್ಕರಿಸಿದವು. ವಿದ್ಯಾರ್ಥಿಗಳು ಸ್ವಾಗತಿಸಿ, ಘೋಷಣೆ ಕೂಗಿದರು. ಇಲ್ಲಿನ ಆಸ್ಪತ್ರೆ ವೃತ್ತದಲ್ಲಿ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಎ.ಈ. ಚಂದ್ರಶೇಖರ್, ಎಚ್.ಎಸ್. ಶ್ರೀಕಂಠಯ್ಯ, ಎನ್.ಡಿ. ಕಿಶೋರ್, ಎಂ.ಕೆ. ಮಂಜೇಗೌಡ, ಸ್ವಾಮೀಜಿ ಅವರಿಗೆ ಹೂವಿನ ಹಾರ ಹಾಕಿದರು.

`ಜನತೆ ಬಯಸಿದವರು ಪ್ರಧಾನಿಯಾಗುತ್ತಾರೆ'

`ದೇಶದ ನೂರು ಕೋಟಿ ಜನರು ಬಯಸಿದರೆ ಮೋದಿ ಅಥವಾ ರಾಹುಲ್ ಗಾಂಧಿಯಲ್ಲಿ ಯಾರು ಬೇಕಾದರೂ ಪ್ರಧಾನಿ ಆಗಬಹುದು. ಅದರಲ್ಲಿ ಏನೂ    ತಪ್ಪಿಲ್ಲ' ಎಂದು ಮಾಜಿ ಪ್ರಧಾನಿ ಎಚ್‌ಡಿ. ದೇವೇಗೌಡ ನುಡಿದಿದ್ದಾರೆ.ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ನಗರಕ್ಕೆ ಬಂದಿದ್ದ  ಅವರು ತಮ್ಮನ್ನು ಭೇಟಿಮಾಡಿದ ಪತ್ರಕರ್ತರೊಡನೆ ಮಾತನಾಡಿದರು.`ಯಾರು ಪ್ರಧಾನಿ ಆಗಬೇಕು ಎಂಬುದನ್ನು ಜನ ತೀರ್ಮಾನಿಸುತ್ತಾರೆ. ನಾನು ಯಾರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಉದ್ಧಟತನವಾಗುತ್ತದೆ ಎಂದರು.`ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಅಸ್ಥಿತ್ವಕ್ಕೆ ಬರುವುದು ನಿಶ್ಚಿತ. ಯು.ಪಿ.ಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ ಬಿ.ಜೆ.ಪಿ. ಆಂತರಿಕ ಕಲಹದಲ್ಲಿ ತೊಡಗಿದೆ. ದೇಶದ ಜನ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಡಲು ತಿರ್ಮಾನಿಸಿದ್ದಾರೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಒಳ್ಳೆಯ ಅವಕಾಶವಿದೆ ಎಂದರು.`ಕೆಲವೇ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳು ರಾಷ್ಟ್ರೀಯ ಪಕ್ಷಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳ ಸಾಮರ್ಥ್ಯವನ್ನು ಕುಗ್ಗಿಸಲು ಇವುಗಳಿಂದ ಸಾಧ್ಯವಾಗಲಾರದು. ಅಂಥ ಪ್ರಯತ್ನಕ್ಕೆ ಕೈಹಾಕಬಾರದು. ಪ್ರತಿ ರಾಜ್ಯವೂ ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಇವುಗಳಿಗೆ ಸ್ಪಂದಿಸಲು ಸ್ಥಳೀಯ ಪಕ್ಷಗಳು ಅಧಿಕಾರಕ್ಕೆ ಬರಬೇಕಾದ ಅವಶ್ಯಕತೆ ಇದೆ' ಎಂದರು.26ರಿಂದ ಜಿಲ್ಲಾ ಪ್ರವಾಸ: ಜೂ.26 ರಿಂದ 29ರವರೆಗೆ ತಾನು ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇನೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡರು ತಿಳಿಸಿದರು.ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಯನ್ನು ಆಲಿಸುತ್ತೇನೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.