ನಿರ್ಲಕ್ಷ್ಯದಿಂದ ಮಗು ಸಾವು: ಕ್ರಮಕ್ಕೆ ಆಗ್ರಹ

7

ನಿರ್ಲಕ್ಷ್ಯದಿಂದ ಮಗು ಸಾವು: ಕ್ರಮಕ್ಕೆ ಆಗ್ರಹ

Published:
Updated:

ಗುಲ್ಬರ್ಗ: ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಗು ಸಾವಿಗೀಡಾಗಿದೆ ಎಂದು ಆರೋಪಿಸಿ ಜೆಡಿಎಸ್ ಮತ್ತು ಡಿಎಸ್‌ಎಸ್ ಕಾರ್ಯಕರ್ತರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಂದೆ ಬುಧವಾರ ಪತ್ರಿಭಟನೆ ನಡೆಸಿದರು.ಮಗುವಿನ ಸಾವಿಗೆ ಕಾರಣರಾದ ಶುಶ್ರೂಷಕಿ, ವೈದ್ಯರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಕ್ರಮಕೈಗೊಳ್ಳಬೇಕು. ಮೃತ ಮಗುವಿನ ತಾಯಿಗೆ ಪರಿಹಾರ ನೀಡಬೇಕು ಎಂದು ಆಸ್ಪತ್ರೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪ್ರತಿಭಟಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಸಂಗಪ್ಪ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮುಖಂಡ ನಂದಕುಮಾರ ಮಾಲಿಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.ಘಟನೆ ವಿವರ: ಗಂಗಾ ನಗರದ ನಿವಾಸಿ ರೇಣುಕಾ ಸದಾಶಿವ (30) ಅವರನ್ನು ಎರಡನೇ ಮಗುವಿನ ಹೆರಿಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ್ದ ವೈದ್ಯರು ಸಹಜ ಹೆರಿಗೆ ಸಾಧ್ಯ ಎಂದಿದ್ದರು. ಆದರೆ, ಮಂಗಳವಾರ ರಾತ್ರಿ ತಮ್ಮ ಕರ್ತವ್ಯದ ಅವಧಿ ವಿಳಂಬವಾಗುತ್ತದೆ ಎಂಬ ಕಾರಣದಿಂದ ಶುಶ್ರೂಷಕಿಯರು ಬಲವಂತದ (ತಂತ್ರಜ್ಞಾನ ಬಳಸಿ) ಹೆರಿಗೆ ಮಾಡಿಸಿದ್ದಾರೆ. ಆಗ ಮಗುವಿನ ಕಾಲು ಮತ್ತು ತಲೆಗೆ ಗಾಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ನಂತರ ಚಿಕಿತ್ಸೆಗಾಗಿ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಗು ಅಸುನೀಗಿತು ಎಂದು ಪ್ರತಿಭಟನಾಕಾರರು ತಿಳಿಸಿದರು.ನಂದಕುಮಾರ ಮಾಲಿಪಾಟೀಲ, ಶಾಮರಾವ ಸೂರನ್, ಸಂತೋಷ ತಳವಾರ, ಬಾಬು ಕೂಡಿ, ದಶರಥ ಕಲಗುರ್ತಿ, ಮಾಣಿಕಪ್ರಭು ಶಹಾಪುರಕರ, ಚನ್ನಬಸಪ್ಪ ನಾಯಿಕೋಡಿ, ಬಸವರಾಜ ಬೆಣ್ಣೂರ, ಬಸವರಾಜ ಕೊಡಿ, ಲಕ್ಷ್ಮಣ, ಶ್ರೀಶೈಲ ಬುಳ್ಳಾ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry