ಬುಧವಾರ, ಜೂನ್ 16, 2021
22 °C

ನಿರ್ಲಕ್ಷ್ಯ: ಸಚಿವರಿಂದ ಅಧಿಕಾರಿಗಳ ತೀವ್ರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜನರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ಮತ್ತು ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳು ರಾಜೀ ನಾಮೆ ನೀಡಿ ಮನೆಗೆ ಹೋಗಬಹುದು.  ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಬರ ಪರಿಹಾರ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ನೀಡಿದ ಅಂಕಿ-ಸಂಖ್ಯೆಗೆ ತೃಪ್ತರಾಗದ ಅವರು, ಜನರ ಸಮಸ್ಯೆ ಗಳ ನಿವಾರಣೆಗೆ ಶ್ರಮಿಸುವಂತೆ ತಿಳಿಸಿ, ಅಧಿಕಾಶರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಜಿಲ್ಲೆಯಾದ್ಯಂತ ತೀವ್ರ ಬರಗಾಲ ಆವರಿಸಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ಅನುಸರಿಸದೆ, ಯುದ್ಧೋ ಪಾದಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಜನವರಿ ಆರಂಭದಲ್ಲೇ ನರದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲೆಯ ಪ್ರತಿ ರಸ್ತೆಗಳನ್ನು ತಗ್ಗುಗಳಿಂದ ಮುಕ್ತ ಗೊಳಿಸುವಂತೆ ಸೂಚಿಸಿದ್ದರು, ಆದರೆ, ಈವರೆಗೂ ಯಾವುದೇ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ.ಇದರಿಂದ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವೂ ವಾಪಸ್ ಹೋಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರ ನೆರವಿಗೆ ಬಳಕೆಯಾಗಬೇಕಾದ ಅನುದಾನ ಮರಳಿ ಹೋಗುವುದು ಸರಿಯಲ್ಲ ಎಂದು ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿ ನೀಡಿದ ವಿವರಣೆ ಕುರಿತು ಕೆಂಡಾಮಂಡಲವಾದರು.ಸರ್ಕಾರ ಜನರ ಕೆಲಸ ಮಾಡಲೆಂದೇ ಅಧಿಕಾರಿಗಳಿಗೆ ಸಂಬಳ ನೀಡುತ್ತದೆ. ಎಲ್ಲ ಸೌಲಭ್ಯ ನೀಡಿಯೂ ಜನರಿಗಾಗಿ ಸೇವೆ ಸಲ್ಲಿಸದ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಿಲ್ಲ. ಜನರಿಗಾಗಿ ಕೆಲಸ ಮಾಡಬೇಕು ಇಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಗೆ ತೆರಳಬೇಕು ಎಂದು ಅವರು ಹೇಳಿದರು.ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಅನೇಕ ಜನರು ಗುಳೆ ಹೊರಟಿದ್ದಾರೆ ಎಂಬ ವಿಷಯ ತಿಳಿದುಬಂದಿದೆ. ವಿಶೇಷವಾಗಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಬಡಜನತೆಗೆ, ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಸಭೆಯಲ್ಲಿ ನೀಡಲಾಗುವ ಮಾಹಿತಿ ಮತ್ತು ವಾಸ್ತವ ಸ್ಥಿತಿ ಒಂದೇ ಅಗಿರಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದರು.ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಬರಗಾಲ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಪಕ್ಷಭೇದ ಮರೆತು ಜನಸೇವೆ ಮಾಡಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಗ್ರಾಮದ ಸುತ್ತಮುತ್ತಲಿನ 20ಕ್ಕೂ ಅಧಿಕ ಗ್ರಾಮಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಬಡ ಜನತೆಗೆ ಕೃಷಿ ಕೂಲಿಯೂ ದೊರೆಯದೆ ಗುಳೆ ಹೊರಟಿದ್ದಾರೆ. ಆ ಭಾಗದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನತೆಗೆ ಉದ್ಯೋಗ ದೊರಕಿಸಬೇಕು ಎಂದು ಶಾಸಕ ಸೋಮಲಿಂಗಪ್ಪ ಕೋರಿದರು.ಆಯಾ ತಾಲ್ಲೂಕುಗಳ ಟಾಸ್ಕ್ ಫೋರ್ಸ್‌ಗಳು ನೀಡಿರುವ ಪ್ರಸ್ತಾವದ ಅನ್ವಯ, ಕುಡಿಯುವ ನೀರು ಪೂರೈಕೆಗೆ ಈಗಾಗಲೇ ರೂ 2.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಮತ್ತೆ ರೂ 2.5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸಭೆಗೆ ತಿಳಿಸಿದರು.ಹೂವಿನ ಹಡಗಲಿ ಶಾಸಕ ಚಂದ್ರಾ ನಾಯ್ಕ, ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಉಪಾಧ್ಯಕ್ಷ ಚೆನ್ನಬಸವನ ಗೌಡ, ಸಿಇಓ ಮಂಜುನಾಥ ನಾಯಕ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.