ಶನಿವಾರ, ಮೇ 8, 2021
27 °C
ಅನುಷ್ಠಾನ ವೈಫಲ್ಯ: ಚಿತ್ರದುರ್ಗ ಜಿಲ್ಲೆಯಲ್ಲಿ ದಾರಿ ತಪ್ಪಿದ ವಸತಿ ಯೋಜನೆ!

ನಿಲ್ಲದ ಅಲೆದಾಟ; ಸೂರಿಗೆ ಪರದಾಟ

ಪ್ರಜಾವಾಣಿ ವಾರ್ತೆ / ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗುಡಿಸಲುಗಳೇ ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ ವಸತಿ ಯೋಜನೆಯೇ ದಾರಿ ತಪ್ಪಿದೆ!

ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟರು, ಅಲೆಮಾರಿಗಳು ಸೂರಿಗಾಗಿ ಪರದಾಡುವ ಗೋಳು ಮಾತ್ರ ಇನ್ನೂ ನಿಂತಿಲ್ಲ. ಐದು ವರ್ಷಗಳ ಹಿಂದಿನ ವಸತಿ ಯೋಜನೆಗಳು ಸಹ ಇನ್ನೂ ಶೇ 50ರಷ್ಟು ಭೌತಿಕ ಪ್ರಗತಿ ಕಂಡಿಲ್ಲ. ಅನುದಾನ ಲಭ್ಯವಿದ್ದರೂ ಸಮರ್ಪಕವಾಗಿ ಬಳಕೆಯಾಗಿಲ್ಲ. ನಿಗದಿಪಡಿಸಿದ ಗುರಿಗೂ ಅನುಷ್ಠಾನಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ.ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಈ ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳಿಗೆ ಮಾತ್ರ ಗ್ರಹಣ ಹಿಡಿದಿದೆ. ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸುವ ಜನಪ್ರತಿನಿಧಿಗಳ ಹೇಳಿಕೆಗಳು ಕೇವಲ ಭರವಸೆಯಾಗಿಯೇ ಉಳಿದಿವೆ.ಗ್ರಾಮೀಣ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 2009- 10ರಲ್ಲಿ ಆರಂಭಿಸಿದ ಮನೆಗಳ ನಿರ್ಮಾಣ ಇನ್ನೂ ಕುಂಟುತ್ತಾ ಸಾಗಿದ್ದು, ಕೇವಲ ಶೇ 35ರಷ್ಟು ಭೌತಿಕ ಪ್ರಗತಿ ಸಾಗಿದೆ. 229 ಮನೆಗಳ ನಿರ್ಮಾಣದ ಗುರಿಗೆ ಪ್ರಸಕ್ತ ಸಾಲಿನ ಏಪ್ರಿಲ್ ಅಂತ್ಯಕ್ಕರೂ 44.92 ಲಕ್ಷ ವೆಚ್ಚದದಲ್ಲಿ 80 ಮನೆಗಳನ್ನು ಮಾತ್ರ ಪೂರ್ಣಗೊಳಿಸಿದ್ದು, ಇನ್ನೂ 95 ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿವೆ. ಇದೇ ಯೋಜನೆ ಅಡಿಯಲ್ಲಿ 2008-09ರಲ್ಲಿ 1,278 ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, 741 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, ಇನ್ನೂ 378 ಮನೆಗಳು ವಿವಿಧ ಹಂತದಲ್ಲಿವೆ. ಈ ಮೂಲಕ ಶೇಕಡಾ 58ರಷ್ಟು ಮಾತ್ರ ಭೌತಿಕ ಪ್ರಗತಿ ಸಾಧಿಸಿದ್ದು, ರೂ  3.61 ಕೋಟಿ ಖರ್ಚು ಮಾಡಲಾಗಿದೆ. 2010-11ನೇ ಸಾಲಿನಲ್ಲಿ ರೂ  1.94 ಕೋಟಿ ವೆಚ್ಚ ಮಾಡಿ ಶೇ 53ರಷ್ಟು ಪ್ರಗತಿ ಸಾಧಿಸಲಾಗಿದೆ.ಇದೇ ರೀತಿಯಲ್ಲಿ ಗ್ರಾಮೀಣ ಆಶ್ರಯ ಯೋಜನೆ, ಇಂದಿರಾ ಆವಾಸ್, ಬಸವ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳ ನಿರ್ಮಾಣ ವಿಳಂಬವಾಗಿದೆ. ಹಲವು ಮನೆಗಳು ಇನ್ನೂ ತಳಪಾಯದ ಅಂಚಿನಲ್ಲಿದ್ದರೆ, ಹಲವು ಮನೆಗಳಿಗೆ ಕಿಟಕಿ, ಛಾವಣಿ ಅಳವಡಿಸುವ ಹಂತದಲ್ಲಿವೆ.`ಬಸವ ವಸತಿ' ಯೋಜನೆ ಅಡಿಯಲ್ಲಿ 2010-11ರಲ್ಲಿ 45,318 ಸಾವಿರ ಮನೆಗಳ ನಿರ್ಮಾಣದ ಗುರಿ ಹಮ್ಮಿಕೊಳ್ಳಲಾಗಿತ್ತು.

ಆದರೆ, ಇದುವರೆಗೆ 2013ರ ಏಪ್ರಿಲ್ ಅಂತ್ಯಕ್ಕೆ ರೂ  1.49 ಕೋಟಿ ವೆಚ್ಚ ಮಾಡಿ 6,819 ಮನೆಗಳನ್ನು ಪೂರ್ಣಗೊಳಿಸಿದ್ದು, ಕೇವಲ ಶೇ 13ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 147 ಮನೆಗಳನ್ನು ಪೂರ್ಣಗೊಳಿಸಿ ಕೇವಲ ಶೇ 2ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಶೇ 10ರಷ್ಟು ಪ್ರಗತಿಯಾಗಿದೆ.ಗ್ರಾಮೀಣ ಆಶ್ರಯ ಯೋಜನೆ ಅಡಿಯಲ್ಲಿ 2008-09ರಲ್ಲಿ ಆರಂಭಿಸಿದ ಮನೆಗಳ ನಿರ್ಮಾಣ ಇದುವರೆಗೆ ಶೇ 65ರಷ್ಟು ಪ್ರಗತಿ ಸಾಧಿಸಿದ್ದು, ರೂ  18.86 ಕೋಟಿ ವೆಚ್ಚವಾಗಿದೆ. 6,272 ಮನೆಗಳ ನಿರ್ಮಾಣ ಗುರಿಗೆ 4,097 ಮನೆಗಳನ್ನು ಪೂರ್ಣಗೊಳಿಸಿದ್ದು, 1,555 ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿವೆ.`ಇಂದಿರಾ ಆವಾಸ್' ಯೋಜನೆ ಮಾತ್ರ ಅಲ್ಪಮಟ್ಟಿಗೆ ನಿರೀಕ್ಷಿತ ಪ್ರಗತಿ ಸಾಧಿಸುವ ಹಾದಿಯಲ್ಲಿ ಸಾಗಿದೆ.  2008-09ರಲ್ಲಿ ಆರಂಭಿಸಿದ್ದ ಮನೆಗಳ ನಿರ್ಮಾಣ ಇದುವರೆಗೆ ಶೇ 76 ಭೌತಿಕ ಪ್ರಗತಿಯಾಗಿದ್ದರೆ, 2009-10ರಲ್ಲಿನ ಮನೆಗಳ ನಿರ್ಮಾಣ ಶೇ 62 ಹಾಗೂ 2011-12ನೇ ಸಾಲಿನಲ್ಲಿ ಶೇ 61ರಷ್ಟು ಮನೆಗಳನ್ನು ನಿರ್ಮಿಸಲಾಗಿದೆ.`ಇಂದಿರಾ ವಸತಿ' ಯೋಜನೆಯಲ್ಲಿ ಒಟ್ಟಾರೆ ರೂ  34.83 ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನೂ ರೂ  11.19 ಕೋಟಿ ಬಾಕಿ ಉಳಿದಿದೆ. ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2010-11ರಲ್ಲಿ ಕೈಗೊಂಡಿರುವ ವಸತಿ ಯೋಜನೆಯಲ್ಲಿ ಕೇವಲ ರೂ  7 ಲಕ್ಷ ವೆಚ್ಚ ಮಾಡಿದ್ದು, ಶೇ 42ರಷ್ಟು ಮಾತ್ರ ಪ್ರಗತಿಯಾಗಿದೆ.ಮನೆಗಳನ್ನು ನಿರ್ಮಾಣವನ್ನು ತ್ವರಿತಗೊಳಿಸಿ ಸೂರು ಒದಗಿಸಬೇಕು. ಆಡಳಿತ ವರ್ಗ ಗುಡಿಸಲು ವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ವಸತಿ ಹೀನರ ಅಳಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.