ಶನಿವಾರ, ಮೇ 28, 2022
28 °C

ನಿಲ್ಲದ ದೇಶಿದನಗಳ ಮಾರಣಹೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಮಳೆಗಾಲ ಆರಂಭಗೊಂಡು ಮೂರು ತಿಂಗಳು ಕಳೆದರೂ ಜಮೀನಿನಲ್ಲಿ ಮೂರು ಅಂಗುಲ ಬೆಳೆ ಇಲ್ಲ, ಬಿತ್ತನೆ ಬೀಜ ಗೊಬ್ಬರ ಸಂಗ್ರಹಿಸಿಟ್ಟುಕೊಂಡಿರುವ ರೈತ ಸಮೂಹ ಇಂದು ನಾಳೆ ಮಳೆಯಾಗಬಹುದು ಎಂಬ ನಂಬಿಕೆಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟಿದ್ದರೆ ಮಳೆಯ ಸುಳಿವೇ ಇಲ್ಲದಿರುವುದು ಮುಂಗಾರಿನ ಭರವಸೆಯನ್ನೇ ಕಳೆದುಕೊಳ್ಳುವಂತಾಗಿದೆ.ಸದ್ಯ ಆಷಾಢ ಮಾಸದ ಸೂಸುವ ಗಾಳಿಗೆ ಹೊಲಗಳಲ್ಲಿ ಬೆಳೆಗಳು ಓಲಾಡಬೇಕಿತ್ತು, ಕಣ್ಣುಹಾಯಿಸಿದಲ್ಲೆಲ್ಲ ಭೂತಾಯಿ ಹಸಿರು ಸೀರೆಯನ್ನುಟ್ಟು ಕಂಗೊಳಿಸಬೇಕಿತ್ತು, ಹುಲುಸಾದ ಹುಲ್ಲಿನಲ್ಲಿ ಎತ್ತು, ದನಕರುಗಳು ನಡೆದಾಡಿ ಹೊಟ್ಟೆತುಂಬ ಮೇಯಬಹುದಾಗಿತ್ತು. ಆದರೆ ಪರಿಸ್ಥಿತಿ ಹಾಗೀಲ್ಲ ರಾಸುಗಳಿಗೆ ಮೇಯಲು ಮೇವಿಲ್ಲದಂಥ ವಾತಾವರಣ ನಿರ್ಮಾಣವಾಗಿದೆ ಎನ್ನುವ ನೋವು ರೈತರನ್ನು ಕಾಡಲಾರಂಭಿಸಿದೆ.ಇದು ತಾಲ್ಲೂಕಿನಲ್ಲಿ ಕಂಡುಬರುವ ಪರಿಸ್ಥಿತಿ, ಜೂನ್ ತಿಂಗಳ ಎರಡನೇ ವಾರದಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಿಸುತ್ತದೆ ಎಂಬ ಹವಾಮಾನ ಇಲಾಖೆ ಮಾಹಿತಿ ಉಲ್ಟಾ ಹೊಡೆದಿದೆ, ಹಗಲಿನಲ್ಲಿ ಮೋಡಗಳು ಕಂಡರೂ ರಾತ್ರಿ ಚುಕ್ಕೆಗಳು ರೈತರನ್ನು ಅಣಕಿಸುತ್ತಿವೆ. `ಇದ... ಗತಿ ಮುಂದವರ‌್ದ ಹ್ಯಾಗ್ರಿ ನಮ್ ಪರಿಸ್ಥಿತಿ?~ ಎಂಬ ಕಲಾಲಬಂಡಿಯ ರೈತ ಹನುಮಂತಪ್ಪನ ಪ್ರಶ್ನೆ ರೈತ ಸಮೂಹವನ್ನು ಪ್ರತಿನಿಧಿಸುತ್ತದೆ.ಮಳೆಗಾಗಿ ನವಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ರೈತರು ದೇವಸ್ಥಾನಗಳಲ್ಲಿ ಹಗಲು ರಾತ್ರಿ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಆದರೆ ನಮ್ಮ ಮೊರೆ ಮಳೆರಾಯನ ಕಿವಿಗೆ ಬಿದ್ದಿಲ್ಲ ಎಂದು ನವಲಹಳ್ಳಿಯ ರೈತ ದೊಡ್ಡಬಸಪ್ಪ ನೋವು ತೋಡಿಕೊಂಡರು.ಮುಂಗಾರು ಕೈಕೊಟ್ಟರೂ ಹಿಂಗಾರಿನಲ್ಲಿ ಉತ್ತಮ ಮಳೆ ಬಂದರೆ ಎರೆ (ಕಪ್ಪು) ಜಮೀನಿನವರು ವಾಣಿಜ್ಯ, ಆಹಾರ, ದ್ವಿದಳಧಾನ್ಯ ಸೇರಿದಂತೆ ವಿವಿಧ ಬೆಳೆ ಬೆಳೆಯಲು ಸಾಧ್ಯ. ಆದರೆ ಸಮಸ್ಯೆ ಇರುವುದು ಮಸಾರಿ (ಕೆಂಪು) ಭೂಮಿಯವರದು. ಎರಡು ವಾರದೊಳಗೆ ಮಳೆ ಬಂದರೆ ಮಾತ್ರ ಸಜ್ಜೆ ಬಿತ್ತನೆ ಮಾಡಬಹುದು ಇಲ್ಲವೆಂದರೆ ಹುರುಳಿ ಅಥವಾ, ನವಣೆ ತೃಣಧಾನ್ಯ ಬಿತ್ತನೆಗೆ ಮಾತ್ರ ಅವಕಾಶ. ಹಾಗಾಗಿ ಮಸಾರಿ ಪ್ರದೇಶದ ರೈತರಲ್ಲೇ ಆತಂಕ ಹೆಚ್ಚಾಗಿದೆ.ರೈತರು ಎತ್ತುಗಳು ಸಹಿತ ದನಕರುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅದರಲ್ಲೂ ದೇಶಿ ತಳಿ ದನಕರುಗಳಿಗೆ ಕಸಾಯಿಖಾನೆಯವರಿಂದ ಸಾಕಷ್ಟು ಬೇಡಿಕೆ ಇದೆ ಎಂದು ಸಂತೆಗೆ ಬಂದಿದ್ದ ತೋಪಲಕಟ್ಟಿಯ ಬಸಪ್ಪ ಹೇಳಿದರು.ದೇಶಿತಳಿ ದನಕರುಗಳನ್ನು ರಕ್ಷಿಸಿ, ಸರ್ಕಾರದ ಸುತ್ತೋಲೆಯನ್ನು ಗೌರವಿಸಿ ದನಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಿ ಎಂದು ಇಲ್ಲಿಯ ಕೆಲ ಪ್ರಜ್ಞಾವಂತ ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈಚೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸದ್ದರು. ಆದರೆ ಸಂತೆಯಲ್ಲಿ ನೂರಾರು ದನಗಳು ಮರಣದ ಮನೆಯತ್ತ ಹೆಜ್ಜೆಹಾಕಿದ್ದು ಕಂಡು ಬರುತ್ತಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.