ನಿಷೇಧಿಸಿದರೂ ಬಳಕೆ ನಿಂತಿಲ್ಲ

ಗದಗ: ನಿಷೇಧದ ನಡುವೆಯೂ ಅವಳಿ ನಗರದಲ್ಲಿ 40 ಮೈಕ್ರಾನ್ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಚೀಲ ಮತ್ತು ಸಮಾನಾಂತರ ವಸ್ತುಗಳ ಬಳಕೆ ನಡೆದಿದೆ. ನಿಯಮ ಉಲ್ಲಂಘಿಸುವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ನಗರಸಭೆ ಎಚ್ಚರಿಸಿದ್ದರೂ ಮಾರಾಟ ಇನ್ನೂ ನಿಂತಿಲ್ಲ.
ಪ್ಲಾಸ್ಟಿಕ್ ವೆಸ್ಟ್ (ಮ್ಯಾನೇಜ್ಮೆಂಟ್ ಹ್ಯಾಂಡ್ಲಿಂಗ್) ರೂಲ್ಸ್ 2011ರಂತೆ 40 ಮೈಕ್ರಾನ್ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಚೀಲ ಮತ್ತು ಪ್ಲಾಸ್ಟಿಕ್ ಚೀಲದ ಸಮಾನಾಂತರ ಉತ್ಪಾದಿತ ವಸ್ತುಗಳಿಗೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ಜ.10ರ ಮಧ್ಯರಾತ್ರಿಯಿಂದಲೇ ಅವಳಿ ನಗರ ವ್ಯಾಪ್ತಿಯಲ್ಲಿ 40 ಮೈಕ್ರಾನ್ಗಿಂತ ತೆಳುವಾದ ಪ್ಲಾಸ್ಟಿಕ್ ಚೀಲ ಹಾಗೂ ಸಮಾನಾಂತರ ವಸ್ತುಗಳಾದ ಪ್ಲಾಸ್ಟಿಕ್ ಟೀ ಕಪ್, ಪ್ಯಾಕ್ ಮಾಡುವ ಪ್ಲಾಸ್ಟಿಕ್ ಹಾಳೆ, ಮರುಬಳಕೆ ಪ್ಲಾಸ್ಟಿಕ್ ಚೀಲ ಮಾರಾಟ ನಿಷೇಧಿಸಲಾಗಿದೆ.
ನಿಯಮ ಉಲ್ಲಂಘಿಸಿ ವ್ಯಾಪಾರಸ್ಥರು ಅಂಗಡಿಗಳಲ್ಲಿ ಮಾರಾಟ ಮಾಡಿದರೆ, ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತು ವಶಪಡಿಸಿಕೊಳ್ಳುವುದರ ಜತೆಗೆ ಸಂಬಂಧಪಟ್ಟ ಅಂಗಡಿಗಳ ವ್ಯಾಪಾರ ಲೈಸೆನ್ಸ್ ರದ್ದುಗೊಳಿಸಲಾವುದು ಎಂದು ನಗರಸಭೆ ಪ್ರಕಟಣೆಯನ್ನೂ ಹೊರಡಿಸಿದೆ. ಆರಂಭದಲ್ಲಿ ನಗರಸಭೆ ಅಧಿಕಾರಿಗಳು ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಸುಟ್ಟು ಹಾಕಿದ್ದರು. ನಂತರ ಪ್ಲಾಸ್ಟಿಕ್ ಮಾರಾಟ ನಿರಾತಂಕವಾಗಿ ನಡೆದಿದೆ. ಪ್ಲಾಸ್ಟಿಕ್ ಚೀಲ ಹಾಗೂ ಸಮಾನಾಂತರ ವಸ್ತುಗಳ ಉಪಯೋಗದ ಸಂಬಂಧ ವಸ್ತುಗಳ ಮೇಲೆ ಉತ್ಪಾದಕರ ಹೆಸರು, ವಿಳಾಸ ಕಡ್ಡಾಯವಾಗಿ ಇರಬೇಕು.
ನಗರಸಭೆ ಸಣ್ಣ ಗಾತ್ರದ ಚೀಲಕ್ಕೆ ₹ 1, ಮಧ್ಯಮ ಗಾತ್ರಕ್ಕೆ ₹ 2 ಹಾಗೂ ದೊಡ್ಡ ಚೀಲಕ್ಕೆ ₹ 3 ನಿಗದಿ ಪಡಿಸಿದೆ. ಅದರನ್ವಯ ಮಾರಾಟ ಮಾಡಬೇಕು.
‘ಸಾರ್ವಜನಿಕರು ದಿನಸಿ ಸಾಮಾನು, ತರಕಾರಿ, ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗಬೇಕಾದರೆ ಕಡ್ಡಾಯವಾಗಿ ವಸ್ತ್ರದ ಚೀಲ ಅಥವಾ ಪೇಪರ್ ಬ್ಯಾಗ್ಗಳನ್ನು ತೆಗೆದುಕೊಂಡು ಹೋಗಬೇಕು. ಹೋಟೆಲ್ನಿಂದ ತರುವ ತಿಂಡಿಗಳನ್ನು ಪ್ಲಾಸ್ಟಿಕ್ ಹಾಳೆಯಿಂದ ಪ್ಯಾಕ್ ಮಾಡದೆ ಬಾಳೆ ಎಲೆ ಹಾಗೂ ಇತರೆ ಎಲೆಗಳಿಂದ ಪ್ಯಾಕ್ ಮಾಡಿ ಗ್ರಾಹಕರಿಗೆ ವಿತರಿಸಬೇಕು.
ಮಾಂಸ ಖರೀದಿಸುವವರು ಕಡ್ಡಾಯವಾಗಿ ಡಬ್ಬಿ ಉಪಯೋಗಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಲ್.ಸಿಂಗ್ರಿ ಮನವಿ ಮಾಡಿದ್ದಾರೆ. ‘ಜ.11 ರಿಂದ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 3 ರಿಂದ 4 ಟಾಟಾ ಏಸ್ ವಾಹನ ಪ್ಲಾಸ್ಟಿಕ್ ವಸ್ತು ಜಪ್ತಿ ಮಾಡಲಾಗಿದೆ. ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿ ಏಳು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇಲ್ಲಿವರೆಗೂ ದಂಡ ಹಾಗೂ ದೂರು ದಾಖಲಿಸಿಕೊಂಡಿಲ್ಲ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಲ್.ಜಿ.ಪತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಂಗಡಿ ಮಾಲೀಕರು, ಸಾರ್ವಜನಿಕರು ಪ್ಲಾಸ್ಟಿಕ್ ಬಿಟ್ಟು, ಪರಿಸರ ಸ್ನೇಹಿ ಚೀಲ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಜೀವಕ್ಕೆ ಅಪಾಯ. ಸದ್ಯ ಪರಿಸರ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ವಿವರಿಸಿದರು.
ಪ್ಲಾಸ್ಟಿಕ್ ನಿಷೇಧ ಕುರಿತು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಶೀಘ್ರದಲ್ಲಿಯೇ ಸಭೆ ಕರೆಯಲಾಗುವುದು
- ಮನ್ಸೂರ ಅಲಿ,
ನಗರಸಭೆ ಪೌರಾಯುಕ್ತ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.