ಗುರುವಾರ , ಮಾರ್ಚ್ 4, 2021
17 °C

ನಿಸ್ತಂತು ವಿಧಾನದಲ್ಲಿ ರೀಚಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಸ್ತಂತು ವಿಧಾನದಲ್ಲಿ ರೀಚಾರ್ಜ್

ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ ಮೊಬೈಲ್, ಲ್ಯಾಪ್  ಟಾಪ್‌ನೊಂದಿಗೆ ಚಾರ್ಜರ್‌ಗಳನ್ನೂ ಮರೆಯದೇ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ.ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿ ಸಾಕೆಟ್‌ಗೆ ಪ್ಲಗ್ ಜೋಡಿಸಿ, ಪಕ್ಕದಲ್ಲೇ ಕುಳಿತು ಲ್ಯಾಪ್‌ಟಾಪ್ ಅಥವಾ ಮೊಬೈಲ್ ರಿಚಾರ್ಚ್ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯ. ಇನ್ನು ರೈಲು ಬೋಗಿಗಳಲ್ಲಿ ಅಳವಡಿಸಿರುವ `ರಿಚಾರ್ಜರ್ ಸಾಕೆಟ್~ಗೆ ಮೊಬೈಲ್ ಜೋಡಿಸಿಕೊಂಡು ರೀಚಾರ್ಜ್‌ಮಾಡಿಕೊಳ್ಳಲು ಯಾವಾಗಲೂ ಸರತಿ ಸಾಲಿನಲ್ಲಿ ಇರಬೇಕಾಗುತ್ತದೆ.ದೂರದಿಂದಲೇ- ಅಂದರೆ ಚಾರ್ಜರ್‌ಗೂ ಉಪಕರಣಕ್ಕೂ ಸಂಪರ್ಕವಿಲ್ಲದೇ ರೀಚಾರ್ಜ್‌ಮಾಡಿಕೊಳ್ಳಲು ಸಾಧ್ಯವಿಲ್ಲವೇ?ಈವರೆಗೆ `ಅಸಾಧ್ಯ~ ಎಂದೇ ಹೇಳಲಾಗುತ್ತಿದ್ದ ಇದನ್ನು ಈಗ ಸಾಧಿಸಲಾಗಿದೆ. ನಿಗದಿತ ಅಂತರದಲ್ಲಿ ಉಪಕರಣ ಇಟ್ಟು, ರೀಚಾರ್ಜ್ ಮಾಡಿಕೊಳ್ಳುವ ತಂತ್ರಜ್ಞಾನ ಸಂಶೋಧಿಸಲಾಗಿದೆ.ಇದರಿಂದ ಬರೀ ಲ್ಯಾಪ್‌ಟಾಪ್, ಮೊಬೈಲ್ ಮಾತ್ರವಲ್ಲದೇ ಕಂಪ್ಯೂಟರ್, ವ್ಯಾಕ್ಯೂಮ್ ಕ್ಲೀನರ್, ಸಿ.ಡಿ. ಅಥವಾ ಡಿವಿಡಿ ಪ್ಲೇಯರ್ ಸಹ ಬಳಸಬಹುದು!ಮೆಸ್ಯಾಚುಸೆಟ್ಸ್‌ನ `ವೈಟ್ರಿಸಿಟಿ ಕಾರ್ಪೊರೇಶನ್~ ಸಂಶೋಧಿಸಿರುವ ಈ ತಂತ್ರಜ್ಞಾನವು, ದೂರದಿಂದಲೇ ರೀಚಾರ್ಜ್ ಮಾಡುವ ಅನುಕೂಲವನ್ನು ಗ್ರಾಹಕರಿಗೆ ಒದಗಿಸಲಿದೆ.ಇದಕ್ಕೆ  ~ನಿಸ್ತಂತು ವಿದ್ಯುತ್‌ಶಕ್ತಿ ವರ್ಗಾವಣೆ~ ಎಂದೂ ಕರೆಯಲಾಗುತ್ತಿದೆ. ಕಾಂತೀಯ ಸುರುಳಿ ಹೊಂದಿದ ಉಪಕರಣವೊಂದು ಎಲೆಕ್ಟ್ರಾನಿಕ್ ಸಾಧನಗಳಿಗೆ ವಿದ್ಯುತ್ ಶಕ್ತಿ ವರ್ಗಾಯಿಸುವ ತಂತ್ರಜ್ಞಾನ ಇದಾಗಿದೆ.`ವೈಟ್ರಿಸಿಟಿ ಸೌಲಭ್ಯವುಳ್ಳ ಉಪಕರಣಗಳನ್ನು ಈ ವರ್ಷ ಗ್ರಾಹಕರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಹಾಗೆಂದು ಉಪಕರಣಗಳನ್ನೇ ನೇರವಾಗಿ ಗ್ರಾಹಕರಿಗೆ ಮಾರುವುದಿಲ್ಲ. ಬದಲಾಗಿ ಈ ತಂತ್ರಜ್ಞಾನವನ್ನು ಉಪಕರಣಗಳ ತಯಾರಕರಿಗೆ ಕೊಡಲಾಗುವುದು.ಲ್ಯಾಪ್‌ಟಾಪ್, ಫೋನ್, ವ್ಯಾಕ್ಯೂಮ್ ಕ್ಲೀನರ್ ಇತರ ಸಂಗೀತ ಉಪಕರಣಗಳ ತಯಾರಕರ ಜತೆ ಈಗಾಗಲೇ ಮಾತುಕತೆ ನಡೆದಿದೆ~ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಿಕ್ ಗಿಲೆರ್ ಹೇಳುತ್ತಾರೆ.ಈ ಹಿನ್ನೆಲೆಯಲ್ಲಿ `ವೈಟ್ರಿಸಿಟಿ~ ಕಂಪೆನಿಯು ತೈವಾನ್‌ನ ಪ್ರಮುಖ ಕಂಪೆನಿಯಾದ `ಮೀಡಿಯಾಟೆಕ್~ ಜತೆ ಒಪ್ಪಂದ ಮಾಡಿಕೊಂಡಿದೆ. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ಮೀಡಿಯಾಟೆಕ್, ಎಲೆಕ್ಟ್ರಾನಿಕ್ ಉಪಕರಣ ಉತ್ಪಾದನಾ ಕಂಪೆನಿಗಳಿಗೆ ಹೊಂದಿಕೊಳ್ಳುವ ಸಾಧನಗಳನ್ನು ತಯಾರಿಸಿ ಕೊಡಲಿದೆ.ಸಣ್ಣ ಉಪಕರಣಗಳನ್ನು ದೂರದಿಂದಲೇ ರೀಚಾರ್ಜ್ ಮಾಡುವ ತಂತ್ರಜ್ಞಾನ ಸಂಶೋಧಿಸಿ ಸಫಲತೆ ಕಂಡಿರುವ `ವೈಟ್ರಿಸಿಟಿ~, ವಿದ್ಯುತ್ ಚಾಲಿತ ವಾಹನಗಳಿಗೂ ತಂತ್ರಜ್ಞಾನ ರೂಪಿಸುವ ಹುಮ್ಮಸ್ಸಿನಲ್ಲಿದೆ. ಅದರ ಮುಂದಿನ ಗುರಿ- ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಯಲ್ಲಿ ನೆರವಾಗುವ ಉಪಕರಣಗಳನ್ನೂ ಇದಕ್ಕೆ ಹೊಂದಿಕೊಳ್ಳುವಂತೆ ಮಾಡುವುದು.`ಮ್ಯಾಗ್ನೆಟಿಕ್ ಇಂಡಕ್ಷನ್ (ಅಯಸ್ಕಾಂತೀಯ ಪ್ರೇರಕ)~ ಆಧಾರಿತ ಈ ತಂತ್ರಜ್ಞಾನದಲ್ಲಿ ಕಾಂತೀಯ ಸುರುಳಿಯೊಂದು ವಿದ್ಯುತ್ ಶಕ್ತಿಯನ್ನು ಕಾಂತೀಯ ಅಲೆಗಳನ್ನಾಗಿ ಮಾರ್ಪಡಿಸುತ್ತದೆ; ಇನ್ನೊಂದು ಸುರುಳಿಯು ಈ ಅಲೆಗಳನ್ನು ಗ್ರಹಿಸಿ, ಅದನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.ಸದ್ಯ `ವೈಟ್ರಿಸಿಟಿ~ ಸಂಶೋಧಿಸಿದ ತಂತ್ರಜ್ಞಾನವು ನಾಲ್ಕರಿಂದ ಐದು ಅಡಿ ಅಂತರದಲ್ಲಿ ಎರಡು ಸುರುಳಿಗಳನ್ನಿಟ್ಟು, ಒಂದರಿಂದ ಇನ್ನೊಂದು ಕಡೆ ವಿದ್ಯುತ್ ವರ್ಗಾಯಿಸುವ ವಿಧಾನ ಹೊಂದಿದೆ.`ಇದೊಂದು ಸುಲಭ ಹಾಗೂ ಪರಿಣಾಮಕಾರಿ ವಿಧಾನ. ಈ ವಿಧಾನದಲ್ಲಿ ನೇರವಾಗಿ ಎರಡೂ ತುದಿಗಳನ್ನು ಸಂಪರ್ಕಿಸದೆಯೇ ವಿದ್ಯುತ್ ಅನ್ನು ಪಡೆಯಬಹುದು. ಇದು ಟ್ಯಾಬ್ಲೆಟ್, ನೋಟ್‌ಬುಕ್, ಲ್ಯಾಪ್‌ಟಾಪ್‌ನಂಥ ಬಹೂಪಯೋಗಿ ಸಾಧನಗಳಿಗೆ ಹೆಚ್ಚಿನ ಅನುಕೂಲ ಮಾಡಬಲ್ಲದು~ ಎಂದು ಬಣ್ಣಿಸುತ್ತಾರೆ, ಪ್ರಿನ್ಸ್‌ಟನ್‌ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರೊಮ್ಯಾಗ್ನೆಟಿಕ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾದ ಜೇಸನ್ ಫಿಷರ್.ಇಂಥ ತಂತ್ರಜ್ಞಾನ ಇನ್ನಷ್ಟು ಸಂಶೋಧನೆಗೆ ಅವಕಾಶ ನೀಡಲಿದೆ. ಮನೆಯ ಮಾಲೀಕ ಒಂದೆಡೆ `ವೈಟ್ರಿಸಿಟಿ~ ಸುರುಳಿಯನ್ನು ಪ್ಲಗ್‌ಗೆ ಜೋಡಿಸಿ ಇಟ್ಟರೆ, ಉಳಿದೆಲ್ಲ ಉಪಕರಣಗಳಿಗೂ ಅದರಿಂದಲೇ ವಿದ್ಯುತ್ ರೀಚಾರ್ಜ್ ಮಾಡಬಹುದು. ಮನೆಯ ಕಸಗುಡಿಸುವ ವ್ಯಾಕ್ಯೂಮ್ ಕ್ಲೀನರ್, ಹೊರಗೆ ತೆಗೆದುಕೊಂಡು ಹೋಗುವ ಎಂಪಿ-3, ಎಂಪಿ-4 ಪ್ಲೇಯರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಮೊಬೈಲ್‌ಗಳೆಲ್ಲ ತಾವು ಇರುವೆಡೆಯಿಂದಲೇ ರೀಚಾರ್ಜ್ ಆಗುತ್ತವೆ.`ವೈಟ್ರಿಸಿಟಿ~ ತಂತ್ರಜ್ಞಾನವನ್ನು ಸಂಶೋಧಿಸಿದ್ದು- ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯ ಪ್ರೊಫೆಸರ್ ಮರಿನ್ ಸೊಲ್ಜಿಸಿಕ್. ಇದು 2007ರ `ಸೈನ್ಸ್ ಜರ್ನಲ್~ನಲ್ಲಿ ಪ್ರಕಟವಾಗಿತ್ತು. ಈ ಮಹತ್ವದ ಸಂಶೋಧನೆಗಾಗಿ 2008ರಲ್ಲಿ ಮರಿನ್‌ಗೆ 5 ಲಕ್ಷ ಡಾಲರ್ ಮೊತ್ತದ ಬಹುಮಾನ ಕೂಡ ಬಂದಿತ್ತು. ಎರಡು ಸುರುಳಿಗಳ ನಡುವಿನ ಅಂತರ ಹೆಚ್ಚಿಸಿದರೂ, ವಿದ್ಯುತ್ ವರ್ಗಾಯಿಸಬಲ್ಲ ತಂತ್ರಜ್ಞಾನದ ಬಗ್ಗೆ ಅವರು ಈಗ ಮತ್ತಷ್ಟು ಅಧ್ಯಯನದಲ್ಲಿ ನಿರತರಾಗಿದ್ದಾರೆ.ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೆಚ್ಚು ಹೆಚ್ಚಾಗಿ ಬಳಸುವ ಜನರಿಗೆ ಈ ತಂತ್ರಜ್ಞಾನ ವರದಾನವಿದ್ದಂತೆ ಎಂದು ಯೇಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಡಗ್ಲಾಸ್ ಸ್ಟೊನ್ ಹೇಳುತ್ತಾರೆ.`ವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುವ ಎಷ್ಟೋ ಉಪಕರಣಗಳು ಪದೇ ಪದೇ ಚಾರ್ಜ್ ಆಗಲೇಬೇಕು. ಅವುಗಳ ಕಾರ್ಯನಿರ್ವಹಣೆಗೆ ಇದೇ ಸಮಸ್ಯೆಯಾಗದಂತೆ ಸಂಶೋಧಿಸಲಾದ ಈ ತಂತ್ರಜ್ಞಾನವು ನಿಜಕ್ಕೂ ವೃತ್ತಿಪರ ತಂತ್ರಜ್ಞರಿಗೆ ಹೆಚ್ಚು ನೆರವಾಗಬಲ್ಲದು ಎಂದು ಅವರು ಹೇಳುತ್ತಾರೆ.ವಿದ್ಯುತ್ ಶಕ್ತಿಯನ್ನೇ ಇಂಧನವಾಗಿ ಮಾಡಿಕೊಂಡು ಚಲಿಸುವ ಕಾರುಗಳ ಬಗ್ಗೆ ಈಗ ಗ್ರಾಹಕರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ತಂತಿ ಜೋಡಿಸಿ, ರೀಚಾರ್ಜ್ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ತಪ್ಪಿಸಬೇಕೆಂದರೆ, ವೈಟ್ರಿಸಿಟಿ ತಂತ್ರಜ್ಞಾನ ಅದಕ್ಕೊಂದು ಪರ್ಯಾಯ ಆಗಬಲ್ಲದು.ಈಗ ಸ್ವಲ್ಪ ಅಂತರದಿಂದ ರೀಚಾರ್ಜ್ ಮಾಡಬಹುದಾದ ತಂತ್ರಜ್ಞಾನವನ್ನು ಇನ್ನಷ್ಟು ಪರಿಷ್ಕರಿಸಿದರೆ, ಆರು ಮೀಟರ್ ದೂರದಲ್ಲಿನ ಉಪಕರಣಕ್ಕೂ ವಿದ್ಯುತ್ ಶಕ್ತಿ ವರ್ಗಾವಣೆಯಾಗಬಲ್ಲದು.ಪ್ಲಗ್ ಜೋಡಿಸಿ ವೈರ್ ಮೂಲಕ ಪಡೆಯುವ ವಿದ್ಯುತ್ ಪ್ರಮಾಣಕ್ಕೆ ಹೋಲಿಸಿದರೆ, ನಿಸ್ತಂತು ತಂತ್ರಜ್ಞಾನದ ಮೂಲಕ ತುಸು ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಪಡೆಯಬಹುದು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.ಈ ಬಗ್ಗೆ ಕೂಡ ವಿಜ್ಞಾನಿಗಳು ಗಮನಹರಿಸುತ್ತಿದ್ದು, ಇದು ಯಶಸ್ವಿಯಾದರೆ ಪೂರ್ಣ ಪ್ರಮಾಣದ ವಿದ್ಯುತ್ ಶಕ್ತಿಯನ್ನು ನಿಸ್ತಂತು ವಿಧಾನದಲ್ಲೇ ಪಡೆಯುವ ದಿನ ದೂರವಿಲ್ಲ.          

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.