ಭಾನುವಾರ, ಏಪ್ರಿಲ್ 18, 2021
33 °C

ನೀನೊಬ್ಬನೇ ಅಲ್ಲವೋ ಮಾರಾಯಾ... ನಾನೂ ಇದ್ದೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಹಳ್ಳಿ ಹೆಣ್ಣುಮಕ್ಕಳು ಹಾಗೂ ಪಟ್ಟಣದ ಹೆಣ್ಣುಮಕ್ಕಳ  ಮೇಲಿನ ಅನ್ಯಾಯ, ದೌರ್ಜನ್ಯಗಳ ಸಂಕೀರ್ಣತೆಗಳು ಮತ್ತು ಹಿನ್ನೆಲೆಗಳನ್ನು ಗಮನಿಸಿದಾಗ ಮಹಿಳೆಯರ ಜೊತೆಗೆ ಪುರುಷರಿಗೂ ತಿಳಿವಳಿಕೆ, ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ಖರೇ ಎನ್ನುತ್ತಾ  ಗಂಡು - ಹೆಣ್ಣಿನ ಸಾಮಾಜಿಕ ಸ್ಥಾನಮಾನಗಳ ಬದಲಾವಣೆಗಳ ಪ್ರಕ್ರಿಯೆಯ ಅವಲೋಕನಕ್ಕೆ ಈ ವಾರ ಪ್ರತಿಕ್ರಿಯಿಸಿರುವವರು

 ಪಂ. ರಾಜಶೇಖರ ಮನ್ಸೂರ

  ಹಿಂದೂಸ್ತಾನಿ ಗಾಯಕರು

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ

ನಿವೃತ್ತ ಇಂಗ್ಲಿಷ್ ಪ್ರೊಫೆಸರ್

ಅದೇ ಸುಡುಬಿಸಿಲಿನಲ್ಲಿ ಬರಿಗಾಲಿನಲ್ಲಿ ತಲೆ ಮೇಲೊಂದು, ಕಂಕುಳಲ್ಲೊಂದು ಬಿಂದಿಗೆ ಹೊತ್ತು ನೀರಿಗಾಗಿ ಮೈಲುಗಟ್ಟಲೆ ದಾರಿ ಸವೆಸುವ ಹೆಣ್ಣುಮಕ್ಕಳು. ಊರ ಮುಂದಿನ ಡಬ್ಬಿ ಅಂಗಡಿಗಳಲ್ಲಿ ಚಹಾ ಹೀರುತ್ತ, ಬೀಡಿ ಸೇದುತ್ತ ಪಟ್ಟಾಂಗ ಹೊಡೆಯುವ ಗಂಡಸರು. ಗುಡ್ಡೆಹಾಕಿಕೊಂಡು ಬಿದ್ದಿರುವ ಮನೆಜವಾಬ್ದಾರಿಗಳತ್ತ ಕಣ್ಣೂ ಹಾಕದೇ ಬೀಡಿಹೊಗೆಯೊಳಗೆ ಆಶಾಗೋಪುರ ಕಟ್ಟುವ ಗಂಡುಸಂತಾನಗಳು...ಇದು ಕೇವಲ ಮನ್ಸೂರಿನ ಚಿತ್ರಣವಲ್ಲ. ದೇಶದ ಬದಲಾಗದ ಎಲ್ಲಾ ಹಳ್ಳಿಗಳ ಕತೆ. ಇಂದಿಗೂ ನನ್ನ ಹಳ್ಳಿ  ಮನ್ಸೂರಿನ ಚಿತ್ರ ಹೀಗೇ ಇದೆ. ಸಣ್ಣವನಿದ್ದಾಗಿನಿಂದಲೂ ನೋಡುತ್ತಿದ್ದೇನೆ ಒಂದು ಗೆರೆ ಆಚೀಚೆಯಾಗಿಲ್ಲ. ಆದರೆ ಬದಲಾಗಿರುವುದು ಪಟ್ಟಣದ ಮಂದಿ, ಪಟ್ಟಣದ ಮಹಿಳೆ. ಆದ್ದರಿಂದಲೇ ಬದಲಾವಣೆ ಮತ್ತು ಮಹಿಳೆ ಕುರಿತು ಜನರಲೈಸ್ ಮಾಡುವುದು ತ್ರಾಸದಾಯಕ.ಪಟ್ಟಣದ ಹೆಣ್ಣುಮಕ್ಕಳಿಗೆ ನೌಕರಿಯ ಆಧಾರವಿದೆ. ಆದರೆ ನಮ್ಮ ಹಳ್ಳಿ ಹೆಣ್ಣುಮಕ್ಕಳಿಗೆ? ಮಹಿಳಾ ದಿನಾಚರಣೆ, ಕಾನೂನು, ಹಕ್ಕು ಈ ಬಗ್ಗೆ ಕಿಂಚಿತ್ತೂ ಕಲ್ಪನೆ ಇದ್ದಂತಿಲ್ಲ. ಎಲ್ಲೋ ಕೆಲವರು ಆ ಬಗ್ಗೆ ತಿಳಿದುಕೊಂಡವರೂ ಇರಬಹುದು. ಆದರೆ ಅವುಗಳನ್ನು ಅನುಸರಿಸಲು ಹೋಗಿ ಅವರು ಅರ್ಧದಾರಿಯಲ್ಲೇ ನಿಂತುಬಿಟ್ಟಿದ್ದಾರೆ. ಮಹಿಳಾ ಆಯೋಗ, ಸ್ವಯಂಸೇವಾ ಸಂಸ್ಥೆಗಳು ಅವರನ್ನು ಮುನ್ನಡೆಸಲು ಅಕ್ಷರಶಃ ಕೆಲಸ ಮಾಡಬೇಕಿದೆ. ಜಾಗೃತಿ ಕಾರ್ಯಕ್ರಮಗಳು ಬಾಜಾ-ಭಜಂತ್ರಿ ಸಮಾರಂಭಗಳಾಗದೆ ಮತ್ತು ಖರ್ಚುವೆಚ್ಚ ದಾಖಲಿಸುವ ಫೈಲುಗಳಿಗೆ ಅವು ಸೀಮಿತವಾಗದೇ ಇದ್ದರೆ ಸಾಕು.

ರೂಪ ಬೇರೆಯಾದರೂ ಇನಾಮು ಒಂದೇ

ಆದರೆ ನಾವು ಯಾವಾಗಲೂ ಮಾತನಾಡುವುದು ಪಟ್ಟಣದ ಮಹಿಳೆಯರ ಬಗ್ಗೆ ಮಾತ್ರ. ಬದಲಾವಣೆ, ಅಭಿವೃದ್ಧಿ ಎಂದಾಗ ಉನ್ನತ ಹುದ್ದೆ, ವಿಶೇಷ ಸಾಧನೆ ಮಾಡಿದ ಕೆಲ ಹೆಣ್ಣುಮಕ್ಕಳ ಕಡೆಗೆ ಮಾತ್ರ ಕೈತೋರಿಸುತ್ತೇವೆ. ಆದರೆ ಸಾಮಾನ್ಯ ವರ್ಗದ ದುಡಿಯುವ ಹೆಣ್ಣುಮಕ್ಕಳ ಬಗ್ಗೆ? ಹೊರಗೆ ಹೋದ ಮಹಿಳೆ ಸುರಕ್ಷಿತವಾಗಿ ಮನೆ ಸೇರುತ್ತಾಳೆ ಎನ್ನುವ ಖಾತ್ರಿ ಅವಳಿಗಾಗಲಿ ಅವಳ ಮನೆಯವರಿಗಾಗಲಿ ಇಂದು ಇದ್ದಂತಿಲ್ಲ. ತಗಡುಶೀಟಿನ ಶೆಡ್ ಆಗಿರಲಿ ಫಳ ಫಳ ಹೊಳೆಯುವ ಸೌಧವೇ ಆಗಿರಲಿ ರೂಪು ಬೇರೆ ಇದ್ದರೂ ದೊರಕುವ ‘ಇನಾಮು’ ಮಾತ್ರ ಒಂದೇ; ಶೋಷಣೆ. ಅಷ್ಟೇ ಯಾಕೆ? ಮನೆ ಹೊಸಿಲು ದಾಟುವಾಗ, ಒಳಬರುವಾಗ ಗಂಡನ ಕೀಳುನೋಟ ತಪ್ಪಿಸಲು ಸಾಧ್ಯವೇ? ಭೌತಿಕವಾಗಿ, ಭಾವನಾತ್ಮಕವಾಗಿ ಭಯದಲ್ಲೇ ಬದುಕು ತಳ್ಳುತ್ತ ಸದಾ ಅಭದ್ರತೆಯೊಂದಿಗೇ ಬದುಕು ಕಳೆಯುತ್ತಿರುವ ಅವಳ ಜೀವನದ ಸಾಲುಗಳ ಪೂರ್ತಿ ಅಲ್ಪವಿರಾಮಗಳೇ.ಆದರೂ ಪಟ್ಟಣದ ಮಹಿಳೆ ಕಾನೂನಿನ ನೆರವು ಪಡೆದು ಮತ್ತೆ ಬದುಕು ಕಟ್ಟಿಕೊಳ್ಳಬಲ್ಲಳು. ಆದರೆ ಹಳ್ಳಿಯ ಹೆಣ್ಣುಮಕ್ಕಳಿಗೆ ಅನ್ಯಾಯವಾದಾಗ, ದೌರ್ಜನ್ಯ ಉಂಟಾದಾಗ ಅದನ್ನು ವಿರೋಧಿಸಲು ಎಷ್ಟು ಜನ ಮುಂದೆ ಬರುತ್ತಾರೆ. ಬಂದರೂ ನಿರಂತರ ಬೆಂಬಲಿಸಲು ಮನಸ್ಸು ಮಾಡುವವರೆಷ್ಟು ಜನ? ಇದನ್ನೆಲ್ಲ ನೋಡಿದಾಗ ಮಹಿಳೆಯರ ಜೊತೆಗೆ ಪುರುಷರಿಗೂ ತಿಳಿವಳಿಕೆ, ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದಂತೂ ಖರೇ.

ಭ್ರಮೆಯಿಂದ ಹೊರಬಾರೋ ‘ಒಡೆಯ’...

ಹಳ್ಳಿಯಲ್ಲಾಗಲಿ ಪಟ್ಟಣದಲ್ಲಾಗಲಿ ಈಗಲೂ ಅವಳನ್ನು ಅಡುಗೆ ಮಾಡುವ ಯಂತ್ರದಂತೆ ಕಾಣುವುದು ಬದಲಾಗಿಲ್ಲ. ಆದರೆ ಗೃಹಿಣಿಯೂ ಮನೆಯ ಎಲ್ಲ ಕೆಲಸಗಳನ್ನು ನಿರ್ವಹಿಸಿ ಮನೆಯ ಏಳ್ಗೆಗೆ ಆರ್ಥಿಕವಾಗಿಯೂ ಬೆಂಬಲ ನೀಡುತ್ತಿದ್ದಾಳೆ ಎನ್ನುವುದನ್ನು ಮಾತ್ರ ಗಂಡಸು ಜಾಣತನದಿಂದ ಮರೆಯುತ್ತಿದ್ದಾನೆ. ಆಳುಗಳಿಗೆ ಕೊಡುವ ದುಡ್ಡನ್ನು ಶೇಖರಿಸಿ ಮನೆಯ ಹಿತ ಕಾಯುತ್ತಿದ್ದಾಳೆ.ತನ್ನ ಮನೆಗೆಲಸವನ್ನು ತಾನೇ ಮಾಡಿಕೊಂಡು 25ರಿಂದ 30 ಸಾವಿರದಷ್ಟು ಹಣ ಗಳಿಸುತ್ತಿದ್ದಾಳೆ ಎನ್ನುವುದು ವಾಸ್ತವ. ಆದರೂ ಗಂಡಸು ತಾನೇ ದುಡಿಯುತ್ತೇನೆ. ತನ್ನಿಂದಲೇ ಎಲ್ಲ ಎನ್ನುವ ಅಹಂನಿಂದ ಮಾತ್ರ ಹೊರಬರುವ ಹಾಗೆ ಕಾಣುತ್ತಿಲ್ಲ. ಶಕ್ತಿ ಮೀರಿ ದುಡಿದು ಕುಟುಂಬ ಪೋಷಿಸುವ ಅವಳನ್ನು ಪುರುಷ ಮೊದಲು ಗೌರವಿಸಲು ಕಲಿಯಬೇಕು. ಹಾಗೆಯೇ ತನ್ನೊಬ್ಬನಿಂದಲೇ ಮನೆ ನಡೆಯುತ್ತಿದೆ ಎನ್ನುವ ಅವನ ಭ್ರಮೆಯನ್ನು ಹೋಗಲಾಡಿಸಲು ಅವಳು ಮನಸ್ಸು ಮಾಡಬೇಕು. ಕೆಲವೊಮ್ಮೆ ಪ್ರೀತಿಯಿಂದ ಒಮ್ಮೊಮ್ಮೆ ಉಪಾಯ- ಪ್ರಯೋಗಗಳಿಂದ, ಕೊನೆಗೆ ಸ್ಥೈರ್ಯದಿಂದ ಇಂಥ ವಿಷಯಗಳನ್ನು ಮನದಟ್ಟು ಮಾಡಿಸಬೇಕಾಗುತ್ತದೆ. ಇದಕ್ಕೆ ಅನಿವಾರ್ಯವಾಗುವ ಎದೆಗಾರಿಕೆ ಬೆಳೆಸಿಕೊಂಡು, ಸ್ವಾಭಿಮಾನ-ಮಾರ್ದವತೆಯನ್ನೂ ಕಳೆದುಕೊಳ್ಳದೆ ‘ಸಂಸಾರ’ ಬಂಡಿಗೆ ತನ್ನದೂ ಕೊಡುಗೆ ಇದೆ ಎನ್ನುವುದನ್ನು ಅವನಿಗೆ ತಿಳಿಸಿ ಹೇಳಬೇಕಾಗುತ್ತದೆ. ನಿನ್ನಷ್ಟೇ ಮಹತ್ವ ನನಗೂ ಇದೇ ಎನ್ನುವುದನ್ನು ಅವನಿಗೆ ಅರ್ಥ ಮಾಡಿಸಲೇಬೇಕು. ಈ ಎಲ್ಲ ಬದಲಾವಣೆ ಒಮ್ಮೆಲೇ ಆಗಲಾರದು. ಒಂದೇ ಪೀಳಿಗೆಗೆ ಇದು ಫಲ ಕೊಡಲಾರದು; ಸಾವಿರಾರು ವರ್ಷಗಳಿಂದ ಯಜಮಾನಿಕೆಯ ಪರಿಧಿಯೊಳಗಿರುವ ಗಂಡಸಿನ ಮನಸ್ಸನ್ನು ಬದಲಾಯಿಸುವುದು ಸುಲಭದ ವಿಷಯವೇ?

ಕೆರಿಯರ್ ಬೇರೆ ಜೀವನ ಬೇರೆ...

ಪಟ್ಟಣಗಳಲ್ಲಿ ಕೂಡುಕುಟುಂಬಗಳು ಕರಗಿರುವುದರಿಂದ ದಂಪತಿಯಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ. ಇಬ್ಬರೂ ದುಡಿಯುತ್ತಿರುವುದರಿಂದ ಕುಟುಂಬದ ಬಗ್ಗೆ ಗಮನ ಕೊಡಲಾಗುತ್ತಿಲ್ಲ. ಭಾವನಾತ್ಮಕ ಸಮಸ್ಯೆಗಳು ಅವರನ್ನು ಹಿಂಡುತ್ತಿವೆ. ಮೊದಲಾದರೆ ಹಿರಿಯರು ಆಪ್ತಸಮಾಲೋಚನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು.ಆದರೆ ಈಗ ಹಾಗಲ್ಲ. ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರಿಯುವ ಮೊದಲೇ ಕೋರ್ಟಿನತ್ತ ಮುಖ ಮಾಡಿರುತ್ತಾರೆ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಅವರಿರುವುದಿಲ್ಲ. ಆಗ ಮನೆಯ ಹಿರಿಯರು ಅನಿವಾರ್ಯವಾಗಿ ವೃದ್ಧಾಶ್ರಮಗಳಿಗೆ ತೆರಳಬೇಕಾದ ಸನ್ನಿವೇಶ ಉಂಟಾಗುತ್ತಿದೆ.ಇದಕ್ಕೆಲ್ಲ ಕಾರಣ ಗಂಡು-ಹೆಣ್ಣೆಂಬ ಬೇಧವಿಲ್ಲದೆ ಅವರೊಳಗೆ ಸಮಾನವಾಗಿ ಬೇರೂರಿರುವ ‘ಕೆರಿಯರ್’ ಮತ್ತು ‘ವೈಯಕ್ತಿಕ’ ಬದುಕೆಂಬ ಕಾನ್ಸೆಪ್ಟ್. ಆದರೆ ಕೆರಿಯರ್ ಮತ್ತು ಗಳಿಕೆಯೊಂದೇ ಜೀವನವಲ್ಲ. ಇವೆರಡೂ ಜೀವನದ ಒಂದು ಭಾಗವಷ್ಟೆ.ಜೀವನ ಹೊಂದಾಣಿಕೆ ಬೇಡುತ್ತದೆ. ಪತಿ-ಪತ್ನಿ ಪರಸ್ಪರರ ಅತ್ತೆ-ಮಾವನನ್ನು ಗೌರವದಿಂದ ಕಂಡಷ್ಟೂ ಕೌಟುಂಬಿಕ ಬುನಾದಿ ಭದ್ರಗೊಳ್ಳುತ್ತಾ ಹೋಗುತ್ತದೆ. ಅದೇ ರೀತಿ ಮನೆಯ ಹಿರಿಯರು ಕಿರಿಯರ ಆಶೋತ್ತರಗಳಿಗೆ ಸ್ಪಂದಿಸಿ ಬದಲಾವಣೆ ಮಾಡಿಕೊಂಡಲ್ಲಿ ಬದುಕು ಅರ್ಥಪೂರ್ಣವಾಗಿರುತ್ತದೆ.ನನ್ನ ತಾಯಿಯಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ನನ್ನ ಸಂಗೀತಕ್ಕೆ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದವರು ನನ್ನ ತಾಯಿ, ನಂತರ ತಂದೆ. ಆಕಾಶವಾಣಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಡಲು ಪ್ರೋತ್ಸಾಹಿಸಿದ್ದೇ ನನ್ನ ತಾಯಿ. ನಂತರದ ದಿನಗಳಲ್ಲಿ ಹೆಂಡತಿ. ಇದ್ದಲ್ಲಿಗೇ ಚಹಾ, ತಿಂಡಿ ಕೊಟ್ಟು ಸಹಕರಿಸುತ್ತಾಳೆ.ವಿಶೇಷವಾಗಿ ಪ್ರತಿಯೊಬ್ಬ ಕಲಾವಿದರ ಹಿಂದೆ ಮಹಿಳೆಯರ ತ್ಯಾಗ ಇದ್ದೇ ಇರುತ್ತದೆ. ಹಾಗೆಯೇ ಕಲಾವಿದೆಯರ ಜೀವನದಲ್ಲೂ ಪುರುಷರ ಪ್ರೋತ್ಸಾಹ ಖಂಡಿತ ಇರುತ್ತದೆ. ಇರಬೇಕು. ಎಂ.ಎಸ್ ಸುಬ್ಬಲಕ್ಷ್ಮೀ, ಪರ್ವೀನ್ ಸುಲ್ತಾನಾ, ಶುಭಾ ಮುದ್ಗಲ್ ಮುಂತಾದ ಪ್ರಸಿದ್ಧ ಕಲಾವಿದೆಯರ ಹಿಂದೆ ಅವರ ಪತಿಯ ಪ್ರೋತ್ಸಾಹವಿದೆ.ಗುರುಮೂಲ ಹುಡುಕಲೇಬೇಕು...

ಕಾಲ ಬದಲಾದರೂ ಸಂಗೀತವನ್ನು ಮಾತ್ರ ಗುರು-ಶಿಷ್ಯ ಪರಂಪರೆಯಲ್ಲೇ ಕಲಿಯಬೇಕು. ಸಿಲಬಸ್ ಪ್ರಕಾರ ಸಂಗೀತ ಕಲಿಯೋದಲ್ಲ. ತಾಸುಗಟ್ಟಲೆ ಗುರುವಿನ ಮುಂದೆ ಕುಳಿತು ಶ್ರದ್ಧೆಯಿಂದ ಕಲಿಯಬೇಕು. ಆಗಷ್ಟೇ ಕಲೆ ಒಲಿಯುತ್ತದೆ, ಗುರು-ಶಿಷ್ಯ ಪರಂಪರೆ ಮುಂದುವರಿಯುತ್ತದೆ. ನನ್ನ ಶಿಷ್ಯರಲ್ಲಿ ಮೂರು ಜನ ಹೆಣ್ಣುಮಕ್ಕಳು, ಮೂರು ಜನ ಗಂಡುಮಕ್ಕಳು ಇದ್ದಾರೆ. ಒಬ್ಬ ಹೆಣ್ಣುಮಗಳು ಪುಣೆ, ಇನ್ನೊಬ್ಬಳು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಾರೆ. ಇದೆಲ್ಲ ಅವರ ಗಂಡಂದಿರ ಪ್ರೋತ್ಸಾಹದಿಂದಲೇ ಅಲ್ಲವೇ?ನದಿ ಮೂಲ, ಋಷಿ ಮೂಲ ಹುಡುಕಬಾರದು ಅಂತಾರೆ ನಿಜ. ಆದರೆ ಈವತ್ತಿನ ದಿನಗಳಲ್ಲಿ ಗುರು ಮೂಲ ಖಂಡಿತ ಹುಡುಕಬೇಕು. ಗುರುವಿನ ಸ್ವಭಾವ, ನಡೆವಳಿಕೆ, ವ್ಯಕ್ತಿತ್ವ ಎಲ್ಲವನ್ನೂ ಮೊದಲೇ ವಿಚಾರಿಸಿ ಗುರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಕಸ್ಮಾತ್ ನಡೆವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ ಮುಲಾಜಿಲ್ಲದೆ ಹೊರನಡೆದು ಬೇರೊಬ್ಬ ಗುರುಗಳತ್ತ ಮುಖ ಮಾಡಬೇಕು. ಹೀಗೆಲ್ಲಾ ಆದಾಗ ಸಂಗೀತ ಶೈಲಿ, ಪರಂಪರೆ ಬದಲಾಗತ್ತೆ ಆದರೆ ಧೃತಿಗೆಡಬಾರದು. ಅಷ್ಟಕ್ಕೂ ಜೀವಕ್ಕಿಂತ ದೊಡ್ಡದು ಯಾವುದಿದೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.