ಮಂಗಳವಾರ, ಜನವರಿ 31, 2023
19 °C

ನೀರಜಾಡು ಹಾಡು ಬೆಳಗಾವಿ ನೋಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಜಾಡು ಹಾಡು ಬೆಳಗಾವಿ ನೋಡು

ಮೋಡಗಳ ನಡುವೆ ಸಂಚಾರ. ಮಂಜಿನ ಜತೆಗೆ ಚೆಲ್ಲಾಟ. ಹಚ್ಚಹಸಿರಿನ ರಸದೌತಣ. ಜಲಪಾತಗಳ ಸೌಂದರ್ಯದ ಸವಿ!

 

ಬೆಳಗಾವಿ ಜಿಲ್ಲೆ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿರುವ ವಿವಿಧ ಜಲಪಾತಗಳನ್ನು ವೀಕ್ಷಿಸಿದಾಗ ಮೇಲಿನ ಅನುಭವ ನಿಮಗಾಗುತ್ತದೆ. ಮುಂಗಾರು ಆರಂಭವಾಗುತ್ತಿದ್ದಂತೆ ಇಲ್ಲಿ ಹತ್ತಾರು ಜಲಪಾತಗಳು ಮೈದುಂಬಿಕೊಳ್ಳುತ್ತವೆ. ಕಣ್ಮನ ಸೆಳೆಯುತ್ತವೆ. ಮೈಮನ ಪುಳಕಗೊಳಿಸುತ್ತವೆ.

 

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಬೆಳಗಾವಿಯಿಂದ 60 ಕಿ.ಮೀ. ದೂರದಲ್ಲಿರುವ ಅಂಬೋಲಿ ಫಾಲ್ಸ್ ಚೆಲುವು ಅಸದಳವಾದುದು. ಜಲಪಾತದ ಮುಂದೆ ನಿಂತು 100 ಅಡಿಗೂ ಹೆಚ್ಚು ಎತ್ತರದಿಂದ ನೀರು ಬೀಳುವುದನ್ನು ನೋಡಬಹುದು. ಅಷ್ಟೇ ಅಲ್ಲ, ಧಾರೆಯ ಕೆಳಗೆ ನಿಂತು ರೋಮಾಂಚನಗೊಳ್ಳಬಹುದು.

ಬೆಳಗಾವಿಯಿಂದ ಸಾವಂತವಾಡಿಗೆ ಹೋಗುವ ಮುಖ್ಯರಸ್ತೆಯಲ್ಲಿಯೇ ಅಂಬೋಲಿ ಜಲಪಾತ ಸಿಗುತ್ತದೆ. ಜಲಪಾತದ ಅಡಿಗೆ ಹೋಗಲು ಎರಡೂ ಕಡೆ ಪಾವಟಿಗೆಗಳನ್ನು ನಿರ್ಮಿಸಲಾಗಿದೆ. ನೀರಿನ ಹರಿವು ನೋಡಿಕೊಂಡು ಎಚ್ಚರದಿಂದ ಮೇಲೇರಬೇಕು. ಕೆಳಗಡೆ ಕಾಣುವ ಹಸಿರಿನ ನಿಸರ್ಗ ನೋಡಲು ರಮಣೀಯವಾಗಿದೆ. ಇನ್ನೊಂದು ಬದಿಗೆ ಎತ್ತರದ ಬೆಟ್ಟದಲ್ಲಿ ಸಾಲುಸಾಲಾಗಿ ನಾಲ್ಕಾರು ಜಲಪಾತಗಳನ್ನೂ ನೋಡಬಹುದು. ಬಹುತೇಕ ಕಾಲ ಮಂಜು ಕವಿದಿರುವುದರಿಂದ ಒಮ್ಮೊಮ್ಮೆ ಇವು ಕಾಣಸಿಗುವುದಿಲ್ಲ.

ಅಂಬೋಲಿಗೆ ಮೂರು ಕಿ.ಮೀ. ಮೊದಲು ಕವಳಾರಸ್ ಎಂಬ ತಾಣ ಸಿಗುತ್ತದೆ. ಮುಖ್ಯರಸ್ತೆಯಿಂದ ಎರಡು ಕಿ.ಮೀ. ಒಳಗೆ ಹೋಗಬೇಕು. ರಸ್ತೆ ಕಡಿದು. ಎಚ್ಚರದಿಂದ ವಾಹನ ತೆಗೆದುಕೊಂಡು ಅಲ್ಲಿಗೇ ಹೋಗಬಹುದು. ಅಲ್ಲಿ ಒಂದೇ ಕಡೆಗೆ ಹತ್ತಾರು ನೀರಿನ ಝರಿಗಳು ಕಾಣಿಸುತ್ತವೆ. ಎತ್ತರದ ಬೆಟ್ಟದ ಮೇಲಿರುವುದರಿಂದ ಮೋಡಗಳು ಕೈಗೆಟುಕಿದ ಅನುಭವವಾಗುತ್ತದೆ.

 

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಜನರೂ ಈ ನೀರ್ಗವಿತೆಗಳ ವೀಕ್ಷಣೆಗೆ ಆಗಮಿಸುತ್ತಾರೆ. ಭಾನುವಾರ ಜನವೋ ಜನ. ಬೆಳಗಾವಿಯಿಂದ 60 ಕಿ.ಮೀ. ದೂರದಲ್ಲಿರುವ ಗೋಕಾಕ್ ಫಾಲ್ಸ್ ‘ಬೆಳಗಾವಿಯ ನಯಾಗರ’ ಎಂದೇ ಪ್ರಸಿದ್ಧ. ಅಂಥ ಸೌಂದರ್ಯ ಅದರದ್ದು. ಅನತಿ ದೊರದಲ್ಲಿಯೇ ಗೊಡಚಿನಮಲ್ಕಿ ಫಾಲ್ಸ್ ಇದೆ. ಅದು ಹಂತಹಂತವಾಗಿ ಇಳಿದು ಬರುವುದನ್ನು ನೋಡುವುದೇ ಒಂದು ಸಂಭ್ರಮ. ಬೆಳಗಾವಿಯಿಂದ ಹುದಲಿ, ಪಾಶ್ಚಾಪುರ ಮಾರ್ಗದ ಮೂಲಕ ಹೋದರೂ ಗೊಡಚಿನಮಲ್ಕಿ ಸಿಗುತ್ತದೆ. ಆದರೆ ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.