ಶುಕ್ರವಾರ, ಮೇ 20, 2022
23 °C

ನೀರಾವರಿ ಯೋಜನೆ: ರೂ 50 ಸಾವಿರ ಕೋಟಿ ಮೀಸಲು- ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ರಾಜ್ಯ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ನೀರಾವರಿಗೆ ಪ್ರಾಧಾನ್ಯತೆ ನೀಡಲಾಗಿದ್ದು, ಐದು ವರ್ಷಗಳಿಗೆ ರೂ50 ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಮೊದಲ ಕಂತಿನಲ್ಲಿ ರೂ10 ಸಾವಿರ ಕೋಟಿಯನ್ನು ಇದೇ ವರ್ಷ ವಿನಿಯೋಗಿಸಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಶನಿವಾರ ಮಧ್ಯಾಹ್ನ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

`ನೀರಾವರಿ ಅಭಿವೃದ್ಧಿಗೆ ನಮ್ಮ ಆದ್ಯತೆ ಎಂದು ಮೊದಲೇ ಹೇಳಿದ್ದೆ. ಈಗ ಆ ಮಾತನ್ನು ನಡೆಸಿಕೊಡುತ್ತಿದ್ದೇನೆ. ಸರ್ಕಾರದ ಅವಧಿ ಪೂರ್ಣಗೊಳ್ಳುವುದರ ಒಳಗೆ 9.74 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸಲಾಗುವುದು. ಉಳಿದಂತೆ ವಿದ್ಯುತ್ ಉತ್ಪಾದನೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲ ಅಗತ್ಯಗಳಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ' ಎಂದರು.`ಕಾವೇರಿ ಹಾಗೂ ಕೃಷ್ಣಾ ನದಿ ವ್ಯಾಪ್ತಿಯ ಎಲ್ಲ ನಾಲೆಗಳು ಹಾಗೂ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಂತರ್ಜಲಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದೇನೆ. ಕೃಷ್ಣಾ ಕಣಿವೆ ಪ್ರದೇಶದಲ್ಲಿ 177 ಟಿಎಂಸಿ ನೀರು ಇದ್ದು, ಅದೆಲ್ಲವನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು' ಎಂದರು.ವಸತಿ ಸಚಿವ ಅಂಬರೀಷ್, ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಮಹದೇವಪ್ರಸಾದ್, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಶಾಸಕ ಚಿಕ್ಕಮಾದು ಇದ್ದರು.

ರಾಜ್ಯಕ್ಕೆ ಶೇ 60ರಷ್ಟು ಅಕ್ಕಿ

`ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಹಾರ ಭದ್ರತಾ ಸುಗ್ರೀವಾಜ್ಞೆಗೆ ಶುಕ್ರವಾರ ರಾಷ್ಟ್ರಪತಿ ಅಂಕಿತ ಹಾಕಿದ ಪರಿಣಾಮ ಶೇ 60ರಷ್ಟು ಅಕ್ಕಿ ರಾಜ್ಯಕ್ಕೆ ಬರಲಿದೆ' ಎಂದು ಸಿದ್ದರಾಮಯ್ಯ ಹೇಳಿದರು.ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರ 78ನೇ  ಜನ್ಮದಿನದ ಸಮಾರಂಭದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.`ಆಹಾರ ಭದ್ರತೆ ಸುಗ್ರೀವಾಜ್ಞೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ರಾಜಕರಣ ಮಾಡುತ್ತಿಲ್ಲ. ಅನಗತ್ಯವಾಗಿ  ವಿರೋಧ ಪಕ್ಷಗಳು ಟೀಕಿಸುತ್ತಿವೆ. ಸುಗ್ರೀವಾಜ್ಞೆ ಜಾರಿಯಿಂದಾಗಿ 2009ರ ಯುಪಿಯ ಸರ್ಕಾರದ ಪ್ರಣಾಳಿಕೆ ಈಡೇರಿದಂತಾಗುತ್ತದೆ. ಈ ಮೂಲಕ ದೇಶದ ಬಡವರಿಗೆ ಉಪಯುಕ್ತವಾಗಲಿದೆ' ಎಂದರು.

`ಸೇನಾ ಮಾದರಿಯಲ್ಲಿ ಪೊಲೀಸ್ ಕ್ಯಾಂಟೀನ್'

`ಪೊಲೀಸರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸೇನಾ ಮಾದರಿಯಲ್ಲಿ ಪೊಲೀಸರಿಗೆ ಕ್ಯಾಂಟೀನ್ (ರಿಯಾಯ್ತಿ ತೆರಿಗೆ ದರದಲ್ಲಿ ಗ್ರಾಹಕ ವಸ್ತುಗಳ ಅಂಗಡಿ) ಸೌಲಭ್ಯ ಒದಗಿಸಲಾಗುವುದು' ಎಂದು ಸಿದ್ದರಾಮಯ್ಯ ಘೋಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.